ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಮೋದಿ ರಾಜೀನಾಮೆ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಮೋದಿ ರಾಜೀನಾಮೆ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

Kannada Nadu
ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಮೋದಿ ರಾಜೀನಾಮೆ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

 

ಬೆಂಗಳೂರು, : ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎಂಬುದನ್ನು ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್‌ ಗಾಂಧಿ ಅವರು ದಾಖಲೆಗಳ ಸಹಿತ ಇಂದು ದೇಶದ ಜನರ ಮುಂದಿಟ್ಟಿದ್ದಾರೆ. ಈ ಎಲ್ಲಾ ಮಾಹಿತಿಗಳು ಚುನಾವಣಾ ಆಯೋಗವೇ ನೀಡಿದ ದಾಖಲೆಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕವಾದ ಜನಾಕ್ರೋಶವಿದ್ದರೂ ಅವರು ಹೇಗೆ ಮತಗಳ್ಳತನದ ಮೂಲಕ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಯಿತು? ಎನ್ನುವುದಕ್ಕೆ ಇಂದು ರಾಹುಲ್‌ ಗಾಂಧಿ ಅವರು ಬಿಡುಗಡೆ ಮಾಡಿರುವ ದಾಖಲೆಗಳು ಸಾಕ್ಷಿಯಾಗಿವೆ. ಚುನಾವಣಾ ಆಯೋಗದ ದುರುಪಯೋಗ, ಮತ ಕಳವು ಮತ್ತು ಅಧಿಕಾರ ದುರ್ಬಳಕೆಯ ಮೂಲಕ ಪ್ರಧಾನಿಯಾಗಿರುವ ಮೋದಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ. ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷ ದೇಶಾದ್ಯಂತ ಧ್ವನಿಯೆತ್ತಿ, ಬಿಜೆಪಿಯ ಈ ಎಲ್ಲಾ ಅನಾಚಾರಗಳನ್ನು ಪ್ರತಿಯೊಬ್ಬರಿಗೂ ಅರ್ಥ ಮಾಡಿಸುವ ಕೆಲಸ ಮಾಡಲಿದೆ.Vote Chori Allegations: Siddaramaiah Demands PM Modi's Resignation Over  Rahul's Claims

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ದಾಖಲೆಗಳನ್ನು ರಾಹುಲ್‌ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸುದೀರ್ಘ 6 ತಿಂಗಳ ಕಾಲ ಹಲವು ಮಂದಿ ಅಧ್ಯಯನ ನಡೆಸಿ, ಮತಗಳ್ಳತನದ ಇಂಚಿಂಚೂ ಮಾಹಿತಿಯನ್ನು ಪತ್ತೆಹಚ್ಚಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಕೇವಲ ಮೂರುವರೆ ಲಕ್ಷ ಮತದಾರರಿರುವ ಮಹದೇವಪುರ ಕ್ಷೇತ್ರದಲ್ಲಿ 1ಲಕ್ಷದ 250 ಮತಗಳನ್ನು ಅಕ್ರಮವಾಗಿ ಪಡೆದುಕೊಂಡು ಚುನಾವಣೆಯಲ್ಲಿ ಜಯಿಸಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 5 ರೀತಿಯಲ್ಲಿ ಚುನಾವಣಾ ಅಕ್ರಮ ಎಸಗಲಾಗಿದೆ.

ನಕಲಿ ಮತದಾರರು: ಒಟ್ಟು 11,965 ಮಂದಿ ನಕಲಿ ಮತದಾರರು ಈ ಕ್ಷೇತ್ರದಲ್ಲಿ ಮತಚಲಾವಣೆ ಮಾಡಿದ್ದಾರೆ. ಒಬ್ಬನೇ ಮತದಾರ ನಾಲ್ಕಾರು ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವುದು, ಒಬ್ಬನೇ ಮತದಾರ ಈ ಕ್ಷೇತ್ರದ ಜೊತೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕೂಡ ಮತ ಚಲಾವಣೆ ಮಾಡಿರುವುದು. ಹೀಗೆ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ.

ನಕಲಿ ವಿಳಾಸ ಹೊಂದಿರುವ ಮತದಾರರು: ಒಟ್ಟು 40,009 ಮಂದಿ ನಕಲಿ ವಿಳಾಸ ಹೊಂದಿರುವ ಮತದಾರರನ್ನು ಈ ಕ್ಷೇತ್ರದಲ್ಲಿ ಪತ್ತೆ ಮಾಡಲಾಗಿದೆ. ಮನೆಯ ನಂಬರ್‌ ‘0’ ಎಂದು ನಮೂದಾಗಿರುವ ಸಾವಿರಾರು ವಿಳಾಸವೇ ಇಲ್ಲದ ಮತದಾರರು, ತಂದೆ ಮತ್ತು ಪತಿಯ ಹೆಸರು ಇರುವ ಜಾಗದಲ್ಲಿ ಅರ್ಥವೇ ಇಲ್ಲದಂತೆ ಮನಸೋಇಚ್ಛೆ ಇಂಗ್ಲೀಷ್‌ ಅಕ್ಷರಗಳನ್ನು ನಮೂದಿಸಿರುವುದು ಮತ್ತು ಅಸ್ತಿತ್ವದಲ್ಲಿ ಇಲ್ಲದ ವಿಳಾಸಗಳನ್ನು ನೀಡಿರುವುದು. ಹೀಗೆ ನಕಲಿ ವಿಳಾಸ ನೀಡಿ ಮತಗಳ್ಳತನ ನಡೆಸಲಾಗಿದೆ.

ಒಂದೇ ವಿಳಾಸದಲ್ಲಿ ನೂರಾರು ಮಂದಿ ಮತದಾರರ ವಾಸ: ಒಟ್ಟು 10,452 ಮಂದಿ ಮತದಾರರು ಎಲ್ಲರೂ ಒಟ್ಟಿಗೆ ಬೆರಳೆಣಿಕೆಯಷ್ಟು ಸಂಖ್ಯೆಯ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ. ಸಿಂಗಲ್‌ ಬೆಡ್‌ ರೂಂ ಮನೆಯ ವಿಳಾಸ ನೀಡಿ 80 ಜನ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. 68 ಮಂದಿ ಮತದಾರರ ಗುರುತಿನ ಚೀಟಿಯಲ್ಲಿ ಒಂದು ಖಾಸಗಿ ಕ್ಲಬ್‌ ನ ವಿಳಾಸವಿದೆ. ಈ ಬಗ್ಗೆ ಅಲ್ಲಿ ವಿಚಾರಣೆ ನಡೆಸಿದಾಗ ಗುರುತಿನ ಚೀಟಿ ಹೊಂದಿರುವ ಯಾರೊಬ್ಬರೂ ಅಲ್ಲಿ ವಾಸವಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ.

PM's charges against me, my govt are a bundle of lies': Karnataka CM  Siddaramaiah

ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತಹ ಮತದಾರರ ಫೋಟೋಗಳು: ಒಟ್ಟು ಈ ಕ್ಷೇತ್ರದಲ್ಲಿ 4,132 ಮಂದಿಯ ಗುರುತಿನ ಚೀಟಿಯಲ್ಲಿ ಫೋಟೋಗಳೇ ಲಭ್ಯವಿಲ್ಲ ಅಥವಾ ಫೋಟೋಗಳನ್ನು ಗುರುತಿಸಲು ಸಾಧ್ಯವಾಗದಂತೆ ಅತ್ಯಂತ ಚಿಕ್ಕದಾಗಿ ನಮೂದಿಸಲಾಗಿದೆ. ಅಂದರೆ ಗುರುತೇ ಹಿಡಿಯಲಾಗದವರು ಕೂಡ ಮತದಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಫಾರ್ಮ್‌ 6 ರಡಿ ಮೊದಲ ಬಾರಿಗೆ ಮತ ಚಲಾಯಿಸಿದ ವಯೋವೃದ್ಧರು: ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ 33,692 ಮಂದಿಯ ವಯಸ್ಸು 60 ರಿಂದ 90 ವರ್ಷಕ್ಕೂ ಮೇಲ್ಪಟ್ಟಿದೆ. ಹೊಸ ಅಥವಾ ಯುವ ಮತದಾರರು ನರೇಂದ್ರ ಮೋದಿಗೆ ಮತ ನೀಡುತ್ತಾರೆ ಎಂಬ ಮಾತನ್ನು ಆಗಾಗ್ಗೆ ಬಿಜೆಪಿಯವರೇ ಹೇಳುತ್ತಿರುತ್ತಾರೆ. ವಾಸ್ತವದಲ್ಲಿ 98 ವರ್ಷ, 89 ವರ್ಷದ ವಯೋವೃದ್ಧರು ಮೊದಲ ಬಾರಿಗೆ ಚುನಾವಣೆಯಲ್ಲಿ ಮತದಾನ ಮಾಡಿರುವುದು ಈ ಹಗರಣದ ಆಳ, ಅಗಲವನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರು ಕೇಳಿದ ಮತದಾರರ ಎಲೆಕ್ಟ್ರಾನಿಕ್ ಮಾಹಿತಿ ಮತ್ತು ಸಿಸಿ ಟಿವಿ ದಾಖಲೆಗಳನ್ನು ನೀಡಿ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದರೆ ಈ ಹಗರಣವನ್ನು ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲು ಸಾಧ್ಯವಿತ್ತು. ಮಾಹಿತಿ ಮುಚ್ಚಿಡುವ ಏಕೈಕ ಉದ್ದೇಶದೊಂದಿಗೆ ಚುನಾವಣಾ ಆಯೋಗವು ತನ್ನ ನಿಯಮಗಳನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿಕೊಂಡಿದೆ. ಇದು ಮಹದೇವಪುರ ಕ್ಷೇತ್ರಕ್ಕೆ ಸೀಮಿತವಾದ ಹಗರಣವಲ್ಲ, ಇಡೀ ದೇಶದಲ್ಲೇ ಇದೇ ಮಾದರಿಯ ಮತಗಳ್ಳತನ ಮಾಡಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ ಸಿದ್ದರಾಮಯ್ಯ ಹೇಳಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";