ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿಯ ಶ್ರೀ ಗಡಿದಂ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಆವರಣದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ವಿಧ್ಯುಕ್ತ ಚಾಲನೆ
ಬಾಗೇಪಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಪು ಹಣ ನಿರ್ಮೂಲನೆ ಮಾಡಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಇದಕ್ಕಿಂತ ಗಂಭೀರವಾದ ಪರಿಸ್ಥಿತಿ ಎಂದರೆ ಮೋದಿ ಸರ್ಕಾರ ಪ್ರತಿಯೊಬ್ಬರ ತಲೆಯ ಮೇಲೆ 15 ಲಕ್ಷ ರೂಪಾಯಿ ಸಾಲದ ಹೊರೆ ಹೊರೆಸಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ನಂತರ ಬಾಗೇಪಲ್ಲಿ ಮದರಸಾಕ್ಕೆ ಭೇಟಿ ನೀಡಿದರು. ನಂತರ ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮದ ಶ್ರೀ ಗಡಿದಂ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆ ಹದಿನೈದು ಲಕ್ಷ ರೂಪಾಯಿ ಸಾಲ ಮರು ಪಾವತಿ ಮಾಡಬೇಕಾಗಿದ್ದು, ಸಾಲ ಮಾಡುವಲ್ಲಿ ಕೇಂದ್ರ ಸರ್ಕಾರ ದಾಖಲೆ ನಿರ್ಮಿಸಿದೆ. ಬಿಜೆಪಿ ಸರ್ಕಾರ ಸಂವಿಧಾನ ಮುಗಿಸಲು ಹೊರಟಿದೆ. ಇಂತಹ ಸರ್ಕಾರ ಬೇಕೆ?. ಬಿಜೆಪಿ ಯುವಕರ ವಿರೋದಿ ಸರ್ಕಾರ, ಮಹಿಳೆಯರು, ಬಡವರು, ರೈತರ ವಿರೋಧಿ ಸರ್ಕಾರವಾಗಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ನಿರುದ್ಯೋಗ ಪ್ರಮಾಣ ಶೇ 5 ರಿಂದ 7 ರಷ್ಟಿತ್ತು. ಇದೀಗ ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇ 22 ರಷ್ಟು ಹೆಚ್ಚಾಗಿದೆ. ಯುವ ಸಮೂಹದ ವಿರುದ್ಧದ ಸರ್ಕಾರ ಇರಬೇಕೆ ಎಂದು ಪ್ರಶ್ನಿಸಿದ ರಕ್ಷಾ ರಾಮಯ್ಯ, ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಅವರಂತಹ ಉದ್ದಿಮೆದಾರರನ್ನು ಬಿಟ್ಟು ಬೇರೆ ಯಾರ ಬಗ್ಗೆಯೂ ಹಿತಾಸಕ್ತಿ ಹೊಂದಿಲ್ಲ. ಚುನಾವಣಾ ಬಾಂಡ್ ಮೂಲಕ ದೊಡ್ಡ ಭ್ರಷ್ಟಾಚಾರ ನಡೆಸಿದ್ದು, ಇದು ಲಂಚದ ಕಾರ್ಯಕ್ರಮವಾಗಿದೆ. ಐಟಿ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಒತ್ತಡ ಹಾಕಿ ಹಣ ಸಂಗ್ರಹಿಸುವ ಕೆಲಸಮಾಡುತ್ತಿದೆ ಎಂದರು.
ಕಾಂಗ್ರೆಸ್ ಗ್ಯಾರೆಂಟಿ ಕಾರ್ಯಕ್ರಮಗಳು, ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಮನೆ ಮನೆಗೂ ತಲುಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತಿತರ ನಾಯಕರು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಅವರ ಆಶಯಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ಗೆದ್ದಲ್ಲಿ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ. ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಯುವ ಸಮೂಹ ನಮ್ಮ ಹೊಣೆಯಾಗಿದೆ. ಹಿರಿಯರ ಮಾರ್ಗದರ್ಶನಲ್ಲಿ ಮುನ್ನಡೆಯುತ್ತೇನೆ. ತಮಗೆ ಸಹಾಯ ಮಾಡಿ ಆಶೀರ್ವದಿಸಬೇಕು ಎಂದು ರಕ್ಷಾ ರಾಮಯ್ಯ ಕೋರಿದರು.
ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ಇದು ಪುಣ್ಯ ಸ್ಥಳವಾಗಿದ್ದು, ಇಲ್ಲಿ ಚುನಾವಣಾ ಪ್ರಚಾರ ಪ್ರಾರಂಭಮಾಡಲಾಗಿದೆ. ಚುನಾವಣೆ ಮುಗಿಯುವ ತನಕ ರಕ್ಷಾ ರಾಮಯ್ಯ ಅವರ ಜೊತೆ ಇದ್ದು, ಅವರ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು.
ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಕೆ.ಎಸ್.ಪುಟ್ಟಸ್ವಾಮಿ ಗೌಡ, ವಿಧಾನಪರಿಷತ್ ಸದಸ್ಯರಾದ ಎಂ.ಅರ್. ಸೀತಾರಾಂ, ಮಾಜಿ ಶಾಸಕರಾದ ವೆಂಕಟರಾಮಯ್ಯ ಸೇರಿದಂತೆ ಹಲವು ಗಣ್ಯರು ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.