ಗೃಹಸಚಿವರಿಂದ ಅಪರಾಧದ ಮೂಲಕ್ಕೆ ಚಿಕಿತ್ಸೆಯ ಪ್ರಯತ್ನ?

ಶಿವಮೊಗ್ಗ,ಫೆ.೨೪ (ಕನ್ನಡನಾಡು ವಾರ್ತೆ) : ಸಾಮಾನ್ಯವಾಗಿ ಕೋಮುಗಲಭೆ ಪ್ರಕರಣಗಳು ನಡೆದ ಸಂದರ್ಭದಲ್ಲಿ ಅಪರಾಧ ತಡೆ ಕಲಂಗಳ ಅನ್ವಯ ಜಿಲ್ಲಾಡಳಿತ ನಿಷೇಧಾಜ್ಞೆ ಕ್ರಮಗಳನ್ನು ಜಾರಿಗೊಳಿಸುತ್ತದೆ. ಪೋಲಿಸ್ ಇಲಾಖೆ ಆರೋಪಿಗಳ ಪತ್ತೆ ಕಾರ್ಯ ನಡೆಸಿ ನ್ಯಾಯಾಂಗ ಪ್ರಕ್ರಿಯೆಗೆ ಕಳುಹಿಸುತ್ತದೆ. ಕ್ರಮೇಣ ಪ್ರಕರಣಗಳು ಜನರ ನೆನಪಿನಾಳದಲ್ಲಿ ಮರೆಯಾಗುತ್ತದೆ. ರಾಜ್ಯ ಗೃಹ ಸಚಿವಾಲಯವು ಈ ಪ್ರಕರಣದ ಆರೋಪಿಗಳ ಹಿಂದಿನ ಅಪರಾಧ ಪ್ರಕರಣಗಳ ಸಂಬಂಧದ ವರದಿಯನ್ನು ಕೇಳಿರುವುದು ಸ್ವಲ್ಪ ಕುತೂಹಲದಾಯಕ ಅಂಶವಾಗಿದೆ. ಮಾ:೨೦ರಂದು ನಡೆದ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪೋಲಿಸ್ ಇಲಾಖೆ ಕಾನೂನಿನಂತೆ ಪ್ರಕರಣವನ್ನು ನ್ಯಾಯಾಂಗ ವ್ಯಾಪ್ತಿಗೆ ಒಳಪಡಿಸಿದೆ. ಆದರೂ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಈ ಹಿಂದೆ ದೊಡ್ಡಪೇಟೆ ಹಾಗೂ ಕೋಟೆ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿನ ವರದಿಯನ್ನು ಗೃಹ ಸಚಿವಾಲಯ ಕೇಳಿದೆ. ಈ ಅವಧಿಯಲ್ಲಿದ್ದ ಅಧಿಕಾರಿ ಸಿಬ್ಬಂದಿ ಕಳೆದ ಐದುವರ್ಷಗಳಲ್ಲಿ ಕರ್ತವ್ಯ ನಿರ್ವಹಿಸಿದ ವಿವರ, ಕರ್ತವ್ಯದಲ್ಲಿ ಲೋಪವ್ಯಸಗಿದ ಮಾಹಿತಿ, ಮೇಲಾಧಿಕಾರಿಗಳು ನೀಡಿದ ಮಾರ್ಗದರ್ಶನ ಹಾಗೂ ಅವುಗಳ ಪಾಲನೆ ಮತ್ತಿತರ ಮಾಹಿತಿಯ ವರದಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರರು ಫೆ;೨೩ರಂದು ರಾಜ್ಯ ಪೋಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ಕೋರಿದ್ದಾರೆ.


ಹರ್ಷಕೊಲೆಯ ನಂತರ ಸಾರ್ವಜನಿಕರು ಪೋಲೀಸ್ ಇಲಾಖೆಯು ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ ಎಂದು ದೂರಿದ್ದರು. ಅಲ್ಲದೆ ಪೋಲಿಸ್ ಇಲಾಖೆಯು ಹಿಂದಿನ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿಲ್ಲದೆ ಇರುವುದೇ ಈ ಘಟನೆಗೆ ಕಾರಣವಾಯಿತೆಂದು ಆರೋಪಿಸಿದ್ದರು. ಜಿಲ್ಲಾ ಪೋಲೀಸ್ ಇಲಾಖೆಯು ಎಸ್ಪಿ.ಬಿ,ಎಂ.ಪದ್ಮಪ್ರಸಾದ್ ನೇತೃತ್ವದಲ್ಲಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಶಹಭಾಷ್‌ಗಿರಿಗೆ ಪಾತ್ರವಾಗಿದೆ. ಆದರೆ ಇಂತಹ ಪ್ರಕರಣಗಳು ನಡೆದಾಗ ಆಮೂಲಾಗ್ರವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಗೃಹ ಸಚಿವರು ಹಿಂದಿನ ಪ್ರಕರಣಗಳ ಮಾಹಿತಿಯನ್ನು ಕೇಳಿರುವುದು ಗಮನಾರ್ಹ ಅಂಶವಾಗಿದೆ. ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ(ಚನ್ನಿ)ರು ಈ ಸಂಬಂಧ ಬಹಿರಂಗವಾಗಿ ಇಲಾಖೆಯ ವಿರುದ್ಧ ಅಸಮಾಧಾನ ಪ್ರಕಟಿಸಿದ್ದರು. ಪೋಲಿಸ್ ಅಧಿಕಾರಿಗಳು ಸಾಂದರ್ಭಿಕ ಒತ್ತಡದಲ್ಲಿ ಸಾಕ್ಷಿಗಳ ವರದಿಯಲ್ಲಿ ಮಾಡುವ ಲೋಪದೋಷಗಳು ನ್ಯಾಯಾಲಯಗಳಲ್ಲಿ ಪ್ರಕರಣ ದ ತೀರ್ಪು ವ್ಯತ್ಯಯವಾಗುತ್ತಿರುವುದು ಕಂಡುಬರುತ್ತಿದೆ. ಇಂತಹ ಕೋಮು ಸಾಮರಸ್ಯ ಕದಡುವ ತೀವ್ರತರ ಪ್ರಕರಣಗಳ ತನಿಖೆ ಹಾಗೂ ಚಾರ್ಜ್‌ಶೀಟ್ ಸಿದ್ದಪಡಿಸುವ ಪೋಲೀಸ್ ಇಲಾಖೆಯ ಪಾತ್ರ ವಿಶೇಷವಾಗಿರುತ್ತದೆ.

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಸಂದರ್ಭಗಳು ತಪ್ಪಿಹೋಗದಂತೆ ಎಲ್ಲಾ ಅಂಶಗಳನ್ನು ಸಿದ್ಧಪಡಿಸಿ ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಬೇಕಾಗುತ್ತದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ನಡೆದಾಗ ಕೆಲವುದಿನ ಮಾತ್ರ ಜನರ ಭಾವನಾತ್ಮಕ ಪ್ರತಿಕ್ರಿಯೆ ಇರುತ್ತದೆ ಆನಂತರ ಅದರ ತೀವ್ರತೆ ಕಡಿಮೆಯಾಗುತ್ತದೆ. ಆಪರಾಧಿಗಳಿಗೂ ತೀವ್ರತರ ಶಿಕ್ಷೆ ಸಾಧ್ಯವಾಗದಿದ್ದರೆ, ಇಂತಹ ಪ್ರಕರಣಗಳಲ್ಲಿ ಅವರು ಭಾಗಿಯಾಗಲು ರಹದಾರಿ ಸಿಕ್ಕಂತಾಗುತ್ತದೆ. ಈ ಹಿನ್ನಲೆಯಲ್ಲಿ ಗೃಹ ಸಚಿವರು ಹಳೆಯ ಪ್ರಕರಣಗಳ ಪರಿಶೀಲನೆ ಹಾಗೂ ಅಗತ್ಯ ಕ್ರಮ ಜರುಗಿಸಲು ಮುಂದಾಗಿರುವುದು ಸೂಕ್ತವಾಗಿದೆ. ಒಂದು ಕೊಲೆಯಂತಹ ಪ್ರಕರಣವು ಓರ್ವನ ಬದುಕನ್ನು ಕಸಿಯುವುದರ ಜೊತೆಗೆ ಲಕ್ಷಾಂತರ ಜನರ ದಿನನಿತ್ಯದ ಬದುಕಿಗೆ ಬ್ರೇಕ್ ಹಾಕುವುದನ್ನು ತಪ್ಪಿಸಬೇಕಾಗಿದೆ. ರಾಜ್ಯಾಂಗದಲ್ಲಿ ನೀಡಿರುವ ಸಮಾನತೆಯ ಬದುಕಿಗೆ ದಕ್ಕೆತರುವ ಇಂತಹ ಪ್ರಕರಣಗಳನ್ನು ನಡೆಯದಂತೆ ಮಾಡುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಹಾಗೂ ಜವಾಬ್ದಾರಿಯುತ ನಾಗರಿಕರು ಮಾಡಬೇಕಿದೆ. ದ್ವೇಷಕ್ಕೆ ದ್ವೇಷ ಉತ್ತರವಲ್ಲ. ಈ ರೀತಿಯ ಅನೇಕ ಘಟನಾವಳಿಗಳು ನಡೆಯುತ್ತಾ ಬಂದಿವೆ. ಅವುಗಳ ಮೌಲ್ಯಮಾಪನ ಮಾಡಿದಲ್ಲಿ ಪರಿಣಾಮ ಕೇವಲ ದ್ವೇಷದ ಮುಂದುವರಿಕೆ ಕಂಡುಬರುತ್ತದೆ. ಬದಲಾಗಿ ನಾಗರಿಕರಿಗೆ ನೆಮ್ಮದಿಯ ಬದುಕನ್ನು ಪಡೆಯುವ ವಾತಾವರಣವನ್ನು ಸೃಷ್ಟಿಸಿ ನಾಗರಿಕ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ಶಿಲಾಯುಗಕ್ಕೂ ಆಧುನಿಕ ಯುಗಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ನಿರೂಪಿಸಬೇಕಾಗಿದೆ.
—-ನ.ರಾ.ವೆಂಕಟೇಶ್

Leave a Comment

Your email address will not be published. Required fields are marked *

Translate »
Scroll to Top