ಬೃಹತ್ ಕೈಗಾರಿಕಾ ಇಲಾಖೆ ಅಧಿಕಾರಿಗಳ ಜತೆ ದಿನವಿಡೀ ಸಚಿವ ಎಂ ಬಿ ಪಾಟೀಲ ಸಭೆ

ನಿರ್ದಿಷ್ಟ ಉಪಕ್ರಮಗಳ ಜಾರಿಗೆ ನಿಗದಿತ ಗಡುವು

ಬೆಂಗಳೂರು: ಬೃಹತ್ ಕೈಗಾರಿಕಾ ಇಲಾಖೆಯಡಿ ಬರುವ ನಾನಾ ಉದ್ದಿಮೆಗಳು ಮತ್ತು ನಿಯಮಿತಗಳ ಜತೆ ಭಾರೀ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರವಿಡೀ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಂಬಂಧಿಸಿದ ಅಧಿಕಾರಿಗಳು, ಆಯುಕ್ತರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ವಹಿಸಿ, ಅವೆಲ್ಲವನ್ನೂ ಕ್ಷಿಪ್ರ ಗತಿಯಲ್ಲಿ ಮಾಡುವಂತೆ ನಿಗದಿತ ಕಾಲಮಿತಿಗಳನ್ನೂ ವಿಧಿಸಿದರು.

          ಸಭೆಯಲ್ಲಿ ಮಾತನಾಡಿದ ಸಚಿವರು, “ಮೊದಲ ನೂರು ದಿನಗಳ ಕಾಲ ಭಾರೀ ಕೈಗಾರಿಕಾ ಇಲಾಖೆಯಲ್ಲಿ ರಚನಾತ್ಮಕವಾಗಿ ಏನೇನು ಮಾಡಬಹುದು ಎಂದು ಚಿಂತಿಸಿದೆವು.‌ಈಗ ಅವುಗಳ. ಅನುಷ್ಠಾನದತ್ತ ಹೆಜ್ಜೆ ಇಡುತ್ತಿದ್ದೇವೆ. ಇನ್ನುಮುಂದೆ ಪ್ರತೀ 15 ದಿನಗಳಿಗೊಮ್ಮೆ ನಾನೇ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ” ಎಂದರು.

 

          ರಾಜ್ಯದಲ್ಲಿ ಹಲವೆಡೆಗಳಲ್ಲಿ ಕೈಗಾರಿಕಾ ನಿವೇಶನಗಳನ್ನು ಹಂಚಲಾಗಿದೆ. ಇವುಗಳಿಗೆ ಎಷ್ಟೋ ಜನ ನಿಗದಿತ ಅವಧಿಯಲ್ಲಿ ಹಣ ಪಾವತಿಸಿಲ್ಲ. ಇನ್ನು ಕೆಲವರು  ಶೇ.30ರಷ್ಟು ಮಾತ್ರ ಹಣ ಕಟ್ಟಿ ಸುಮ್ಮನಾಗಿದ್ದಾರೆ. ಅಂತಹ ನಿವೇಶನಗಳನ್ನು ಪತ್ತೆ ಹಚ್ಚಿ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯದಲ್ಲಿ 100 ಹಳೆಯ ಕೈಗಾರಿಕಾ ಲೇಔಟ್ ಇವೆ. ಇಲ್ಲಿ ಒಂದು ಹಂತದ ಕ್ರಮವಾಗಿ ಮೂಲಸೌಕರ್ಯ ಸುಧಾರಣೆಗೆ ತೀರ್ಮಾನಿಸಲಾಗಿದೆ. ಅಲ್ಲಿನ‌ ಅಗತ್ಯಗಳ ಬಗ್ಗೆ 15 ದಿನಗಳಲ್ಲಿ ಸಮಗ್ರ ಪಟ್ಟಿ ಕೊಡಬೇಕು ಎಂದು ಅವರು ಆದೇಶಿಸಿದರು.

          ಕೈಗಾರಿಕಾ ಲೇಔಟ್ ಗಳಲ್ಲಿ ಇರುವ ಸಿ.ಎ.‌ನಿವೇಶನಗಳನ್ನು ಆದ್ಯತೆಯ ಮೇಲೆ ಆರ್ & ಡಿ ಕೇಂದ್ರಗಳಿಗೆ ಕೊಡಬೇಕು. ಇದರ ಬಗ್ಗೆ ಎರಡು ವಾರಗಳಲ್ಲಿ ತೀರ್ಮಾನಿಸಬೇಕು. ಜತೆಗೆ ಇಲ್ಲಿನ ಬಿಡಿ ನಿವೇಶನಗಳನ್ನು ಮಾರುಕಟ್ಟೆ ಮೌಲ್ಯವನ್ನು ಮೂಲ ಬೆಲೆಯಾಗಿ ತೆಗೆದುಕೊಂಡು ಹರಾಜು ಹಾಕಬೇಕು ಎಂದು ಅವರು ನಿರ್ದೇಶಿಸಿದರು.

          ಮೈಸೂರು ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕ್ರಮವಾಗಿ 118 ಮತ್ತು 270 ಎಕರೆ ಭೂಮಿ ಇನ್ನೂ ಕಂದಾಯ ಇಲಾಖೆಯ ಅಧೀನದಲ್ಲೇ ಇದೆ. ಇದನ್ನು ಕೆಐಎಡಿಬಿಗೆ ಹಸ್ತಾಂತರ ಆಗಬೇಕು. ಈ ಸಂಬಂಧದ ಪ್ರಕ್ರಿಯೆಗಳು ಒಂದು ತಿಂಗಳಲ್ಲಿ ಮುಗಿಯಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

 

          ಹೊಸ ಕೈಗಾರಿಕಾ ಲೇಔಟ್ ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಮ್ಯಾಂಡ್ ಸರ್ವೇ ಮಾಡಬೇಕು. ಅಲ್ಲದೆ ಎಂಎಸ್ಐಎಲ್ ಮತ್ತು ಕೆಎಸ್ಡಿಎಲ್ ಎರಡಕ್ಕೂ ಸಂಪೂರ್ಣ ಹೊಸ ರೂಪ ಕೊಡಬೇಕು. ಕೆಎಸ್ಡಿಎಲ್ ಇನ್ನುಮುಂದೆ ಎಲ್ಲ ವರ್ಗಗಳಿಗೂ ಸಿಗುವಂತೆ ಲಿಕ್ವಿಡ್ ಸೋಪ್ ಕೂಡ ತಯಾರಿಸಬೇಕು ಎಂದು ಸಚಿವರು ಹೇಳಿದರು.

ರಾಜ್ಯ ಸರಕಾರವು ರಫ್ತಿಗೆ ಉತ್ತೇಜನ‌ ನೀಡುವಂತಹ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲು ನಿರ್ಧರಿಸಿದೆ. ಈ ಸಂಬಂಧ ಮೂರು ತಿಂಗಳಲ್ಲಿ ವ್ಯಾಪಕ‌ ಸಮಾಲೋಚನೆ ಮುಗಿಸಿ ಹೊಸ‌ ನೀತಿ ರೂಪಿಸಬೇಕು ಎಂದು ಪಾಟೀಲ ಗಡುವು ವಿಧಿಸಿದರು.

          800 ಕೋಟಿ ರೂಪಾಯಿ ಬಾಕಿ

          ಎಸ್ಸಿ ಮತ್ತು ಎಸ್ಟಿ ಉದ್ಯಮಗಳಿಗೆ ಸರಕಾರವು ಶೇ.75ರಷ್ಟು ರಿಯಾಯಿತಿ ದರದಲ್ಲಿ ಜಮೀನು ನೀಡುತ್ತಿದೆ. ಈ ಬಾಬ್ತಿನಲ್ಲಿ‌ ಕೆಐಎಡಿಬಿಗೆ 800 ಕೋಟಿ ರೂಪಾಯಿ ಸರಕಾರದಿಂದ ಬರಬೇಕಾಗಿದೆ. ಈ ಬಗ್ಗೆ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಚಿವರು ಮಾತನಾಡಿ ತಕ್ಷಣ ಬಿಡುಗಡೆಗೆ ಸೂಚಿಸಿದರು.

          ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ ಪ್ರಭಾವಿಗಳಷ್ಟೇ ಕೈಗಾರಿಕಾ ನಿವೇಶನಗಳನ್ನು ಪಡೆದುಕೊಳ್ಳುತ್ತಿದ್ದಾರೆ.  ಇದು ಉದ್ಯಮಶೀಲ ಬಡವರಿಗೂ ಸಿಗುವಂತೆ ಆಗಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸಲು ಸೂಚಿಸಿದರು.

 

 

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್, ಕೆಎಸ್ಡಿಎಲ್ ಎಂಡಿ ಪ್ರಶಾಂತ್, ಕೆಎಂಸಿಎ ಎಂಡಿ ಸಿದ್ದಲಿಂಗಯ್ಯ ಪೂಜಾರ್ ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Facebook

Leave a Comment

Your email address will not be published. Required fields are marked *

Translate »
Scroll to Top