ಬೆಂಗಳೂರು: ಕಾಚರಕನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಸಬ್ ರಿಜಿಸ್ಟ್ರಾರ್ ಕಚೇರಿಗಳು ಎಷ್ಟರ ಮಟ್ಟಿಗೆ ದಕ್ಷತೆಯಿಂದ ಜನಸ್ನೇಹಿ ಸೇವೆ ನೀಡುತ್ತಿದೆ ಎಂದು ಪರಿಶೀಲನೆ ನಡೆಸಿದರು. ಅಲ್ಲದೆ, ಒಂದು ಗಂಟೆಗೂ ಅಧಿಕ ಜನರ ಸಮಸ್ಯೆಗಳನ್ನು ಆಲಿಸಿದರು.
ರಾಜ್ಯಾದ್ಯಂತ ಪ್ರತಿನಿತ್ಯ 10,000ಕ್ಕೂ ಅಧಿಕ ನೋಂದಣಿಗಳು ನಡೆಯುತ್ತಿವೆ. ಸುಲಭ ಮತ್ತು ಸರಳ ನೋಂದಣಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ-2 ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೂ, ತಂತ್ರಾಂಶದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರುವ ಕುರಿತು ದೂರುಗಳು ಬರುತ್ತಿವೆ. ಇದರಿಂದ ಜನರಿಗೂ ಬೇರೆ ಬೇರೆ ರೀತಿಯ ಸಮಸ್ಯೆಗಳಾಗುತ್ತಿದೆ.

ಹೀಗಾಗಿ ಇಂದು ಕಾಚರಕನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡದ ಸಚಿವರು, ಅಲ್ಲಿನ ಕಚೇರಿ ಸಿಬ್ಬಂದಿಗಳು ಎಷ್ಟರ ಮಟ್ಟಿಗೆ ಜನಸ್ನೇಹಿ ಸೇವೆ ನೀಡುತ್ತಿದ್ದಾರೆ. ಕಾವೇರಿ 2 ತಂತ್ರಾಂಶದ ನೈಜ ಸಮಸ್ಯೆಗಳೇನು ಎಂದು ಅಧಿಕಾರಿಗಳಿಂದ ಮಾಹಿತಿ ಕೇಳಿ ಪಡೆದರು. ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನರಿಗೆ ಹೇಗೆ ಉತ್ತಮ ಸೇವೆ ನೀಡಬಹುದು ಎಂಬ ಕುರಿತು ಜನಸಾಮಾನ್ಯರಿಂದಲೇ ಅವರ ಸಮಸ್ಯೆಯನ್ನು ಸಲಹೆಯನ್ನು ಆಲಿಸಿದರು.
ಭ್ರಷ್ಟ ರಹಿತ ಜನಸೇವೆಗೆ ಕರೆ:
ಸಬ್ ರಿಜಿಸ್ಟ್ರಾರ್ ಕಚೇರಿ ಪರಿಶೀಲನೆ ನಂತರ ಅಧಿಕಾರಿ/ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕಂದಾಯ ಇಲಾಖೆಯಲ್ಲಿ ಆಡಳಿತ ಸುಧಾರಣೆ ಹಾಗೂ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜನರ ಸುಲಿಗೆ ಮತ್ತು ವಿಳಂಬ ಧೋರಣೆಗೆ ತಡೆ ಒಡ್ಡಲಾಗುವುದು ಎಂದು ಜನಸಾಮಾನ್ಯರಿಗೆ ಈಗಾಗಲೇ ಭರವಸೆ ನೀಡಲಾಗಿದೆ.

ಭರವಸೆಯಂತೆ ಅಧಿಕಾರಿಗಳು, ಸಿಬ್ಬಂದಿಗಳು ಜನರಿಗೆ ಸರಳ ಸುಲಭ ಸೇವೆ ನೀಡಬೇಕು. ಸುಲಿಗೆ ವಿಳಂಬ ಧೋರಣೆಗೆ ಅವಕಾಶ ನೀಡದೆ, ಭ್ರಷ್ಟಾಚಾರ ಮುಕ್ತ ಸೇವೆ ನೀಡಬೇಕು” ಎಂದು ಕರೆ ನೀಡಿದರು.
ಈ ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಡಾ| ಮಮತ ಬಿ.ಆರ್ ಇದ್ದರು.