ಫ್ರೂಟ್ಸ್ ತಂತ್ರಾಶದಲ್ಲಿ ರೈತರ ಸಂಪೂರ್ಣ ಮಾಹಿತಿ ನವೀಕರಣಕ್ಕೆ ಡಿ.31ರ ಗಡುವು ನೀಡಿದ ಸಚಿವ ಕೃಷ್ಣ ಬೈರೇಗೌಡ

ವಿಜಯನಗರದಲ್ಲಿ ಶೇ.77 ರಷ್ಟು ಮಾಹಿತಿ ನವೀಕರಣ

ಫ್ರೂಟ್ಸ್ ಸಂಪೂರ್ಣ ನವೀಕರಣಕ್ಕೆ ಡಿ.31 ಗಡುವು!

ಆಧಾರ್ ಆರ್ಟಿಸಿ ಲಿಂಕ್ ಮಾಡಲು ಕರೆ

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಸೂಚನೆ

ಬಗರ್ ಹುಕುಂ ಅರ್ಜಿ ವಿಲೇಗೆ ಗಡುವು

ವಿಜಯನಗರ : ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ಮತ್ತು ಜಮೀನಿನ ಮಾಹಿತಿ ನವೀಕರಣಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಅವರು ಡಿಸೆಂಬರ್. 31 ರ ವರೆಗೆ ಗಡುವು ನೀಡಿದರು. 

 

ವಿಜಯನಗರ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಬರ ಪರಿಹಾರದ ಹಣ ರೈತರಿಗೆ ಆನ್ಲೈನ್ ಮೂಲಕವೇ ತಲುಪಲಿದೆ. “ಫ್ರೂಟ್ಸ್” ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ. 

ಆದರೆ, ವಿಜಯನಗರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರು ಎಲ್ಲಾ ರೈತರ ಜಮೀನಿನ ಒಟ್ಟು ವಿಸ್ತೀರ್ಣ ಹಾಗೂ ಬೆಳೆ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಶೇ. 77 ರಷ್ಟು ಮಾತ್ರ ನಮೂದಿಸಲಾಗಿದೆ. ಈ ಕೆಲಸ ಮುಗಿಯುವವರೆಗೆ ರೈತರಿಗೆ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.

“ರೈತರಿಗೆ ಮೊದಲ ಕಂತಿನ ಹಣ ನೀಡಲು ಸರ್ಕಾರದ ಬಳಿ ಹಣ ಇದೆ.‌ ಆದರೂ ಫ್ರೂಟ್ಸ್ ತಂತ್ರಾಂಶದ ನವೀಕರಣಗೊಳ್ಳದೆ ರೈತರಿಗೆ ಹಣ ಬಿಡುಗಡೆ ಸಾಧ್ಯವಿಲ್ಲ. ಹೀಗಾಗಿ ಡಿಸೆಂಬರ್ 31 ರ ಒಳಗಾಗಿ ಫ್ರೂಟ್ಸ್  ನಲ್ಲಿ ರೈತರ ಜಮೀನಿನ ಮಾಹಿತಿ ನಮೂದಿಸಿ” ಎಂದು ಗಡುವು ನೀಡಿದರು.

ಮುಂದುವರೆದು, “ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ.‌ ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಿ” ಎಂದು ಸೂಚಿಸಿದರು.

 

ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡಲು ಕರೆ:

ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ.

 

ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಕುಡಿಯುವ ನೀರು-ಮೇವಿನ‌ ಬಗ್ಗೆ ಎಚ್ಚೆತ್ತುಕೊಳ್ಳಿ:

ವಿಜಯನಗರ ಜಿಲ್ಲೆಯಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಮುಂಜಾಗ್ರತಾ ಕ್ರಮವಾಗಿ ಈಗಲೇ ಜಿಲ್ಲೆಯಲ್ಲಿ 272 ಟ್ಯಾಂಕರ್ ಗಳಿಗೆ ಟೆಂಡರ್ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು‌ ಅವರು ಪ್ರಶಂಸಿಸಿದರು.

ಕುಡಿಯುವ ನೀರಿನ‌ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡರು 24 ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. 15 ದಿನಗಳಲ್ಲಿ ಬಿಲ್ ಗೆ ಹಣ ಪಾವತಿ ಮಾಡಬೇಕು.

ಮೇವಿನ ವಿಚಾರದಲ್ಲೂ ಮುಂಜಾಗ್ರತಾ ತಯಾರಿ ಮಾಡಿಕೊಳ್ಳಬೇಕು. ರಾಜ್ಯದ ಮೇವನ್ನು ಪಕ್ಕದ ರಾಜ್ಯಗಳಿಗೆ ಕಳ್ಳಸಾಗಾಣೆ ಮಾಡುವುದನ್ನು ನಿರ್ಬಂಧಿಸಿ ಎಂದು ಅವರು ತಿಳಿಸಿದರು.

 

ನರೇಗಾದಲ್ಲಿ ಮಾನವ ದಿನ ಹೆಚ್ಚಿಸಲು ಕೇಂದ್ರಕ್ಕೆ ಮತ್ತೊಮ್ಮೆ ಮನವಿ

ನರೇಗಾ ಯೋಜನೆಯ ಅಡಿಯಲ್ಲಿ ಮಾನವ ದಿನ ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಎದುರು ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

 

ವಿಜಯನಗರ ಜಿಲ್ಲೆಯಲ್ಲಿ 6000 ಕ್ಕೂ ಹೆಚ್ವು ಜನರ ನರೇಗಾ ಮಾನವ ದಿನ ಈಗಾಗಲೇ ಮುಗಿದಿದ್ದು, ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬರ ಘೋಷಿಸುತ್ತಿದ್ದಂತೆ ನರೇಗಾ ಮಾನವ ದಿನ ಹೆಚ್ಚಿಸಲೇಬೇಕು. ಆದರೆ, ಕೇಂದ್ರ ಸರ್ಕಾರ ಈವರೆಗೆ ನಮ್ಮ ಮನವಿಗೆ ನಿರ್ಧಾರ ತೆಗೆದುಕೊಂಡಿಲ್ಲ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಬಗ್ಗೆ ಮತ್ತೊಮ್ಮೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮೂಲಕ ಮನವಿ ಮಾಡಲಾಗುವುದು ಎಂದರು. 

ಬಗರ್ ಹುಕುಂ ಅರ್ಜಿಗಳ ಶೀಘ್ರ ವಿಲೇಗೆ ಸೂಚನೆ

ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿಗಳ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, “ನಮೂನೆ  57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ವಿಜಯನಗರ ಜಿಲ್ಲೆಯಲ್ಲಿ 26,365 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಹೇಗೆ ವಿಲೇವಾರಿ ಮಾಡುವಿರಿ? ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ಪ್ರಶ್ನಿಸಿದರು.

ಮುಂದುವರೆದು, “ನಿಜವಾದ ಸಾಗುವಳಿದಾರರಿಗೆ ಭೂ ನೀಡುವ ಸಲುವಾಗಿ ಬಗರ್ ಹುಕುಂ ಆ್ಯಪ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ಅರ್ಜಿದಾರರ ನಿರ್ದಿಷ್ಟ ಪ್ರದೇಶಕ್ಕೆ ತೆರಳಿ ಆ್ಯಪ್ ಮೂಲಕ “ಜಿಯೋ ಫೆನ್ಸಿಂಗ್” ಮಾಡಬೇಕು. ಆ ಮೂಲಕ ಸ್ಯಾಟಲೈಟ್ ಇಮೇಜ್ ಪಡೆದು ಕೃಷಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.

ಆನಂತರ ಅರ್ಜಿದಾರರಿಗೆ ಬೇರೆಲ್ಲೂ ಕೃಷಿ ಭೂಮಿ ಇಲ್ಲ ಎಂಬ ಕುರಿತು ಮಾಹಿತಿ ಖಚಿತಪಡಿಸಿಕೊಂಡು ಭೂ ಮಂಜೂರು ಮಾಡಬೇಕು. ಕನಿಷ್ಟ ಪ್ರತಿ ವಾರಕ್ಕೊಂದು ಗ್ರಾಮಗಳಲ್ಲಿ ಈ ಕೆಲಸ ಆಗಬೇಕು. ಸಾಗುವಳಿ ಚೀಟಿ ಹಾಗೂ ಹಣ ಪಾವತಿ ಎರಡೂ ಡಿಜಿಟಲ್ ರೂಪದಲ್ಲಿ ಇರಬೇಕು, ತಹಶೀಲ್ದಾರರೇ ಕ್ರಯ ಮಾಡಿಕೊಟ್ಟು ರೈತರಿಗೆ ತುಸು ನೆಮ್ಮದಿ ನೀಡಿ” ಎಂದು ಅವರು ಎಚ್ಚರಿಸಿದರು.

 

ಅಲ್ಲದೆ,  “ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು” ಎಂದು ಅವರು ತಾಕೀತು ಮಾಡಿದರು.

ಕಂದಾಯ ಗ್ರಾಮಗಳ ಘೋಷಣೆಗೆ ಜನವರಿಯ ಗಡುವು!

ಕಂದಾಯ ಗ್ರಾಮಗಳ ಘೋಷಣೆ ವಿಚಾರದಲ್ಲಿ ವಿಜಯನಗರದಲ್ಲಿ 115 ಗ್ರಾಮಗಳು ಅಂತಿಮ ಘೋಷಣೆಗೆ ಬಾಕಿ ಇದ್ದು, 48 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, 203 ಗ್ರಾಮಗಳನ್ನು ದಾಖಲೆ ರಹಿತ ಜನವಸತಿ ಪ್ರದೇಶ ಎಂದು ಗುರುತಿಸಲಾಗಿದ್ದು, ನಗರ ಪ್ರದೇಶದಿಂದ 1 ಕಿಮೀ ದೂರವಿರುವ ಮತ್ತು 50ಕ್ಕೂ ಹೆಚ್ಚು ಜನವಸತಿ ಇರುವ ಗ್ರಾಮಗಳನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರಿಸಿ. ಜನವರಿ ಅಂತ್ಯದೊಳಗೆ ಕಂದಾಯ ಗ್ರಾಮಗಳನ್ನು ಘೋಷೊಸಿ ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.

ಇದು ಬಡವರ ಕೆಲಸ. ಅಧಿಕಾರಿಗಳು ದಯವಿಟ್ಟು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಹೀಗಾಗಿ ಮುಂದಿನ ಒಂದು ವಾರದಲ್ಲಿ ಯಾವೆಲ್ಲಾ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬಹುದು ಎಂದು ಇಲಾಖೆಗೆ ಪಟ್ಟಿ ಕೊಡಿ, ಬಿಟ್ಟುಹೋದ ಗ್ರಾಮಗಳನ್ನು ಸೇರಿಸಿ. ಜನವರಿ ಅಂತ್ಯದೊಳಗಾಗಿ ಎಲ್ಲರಿಗೂ ಹಕ್ಕುಪತ್ರ ನೀಡಿ ಎಂದು ಗಡುವು ನಿಗದಿಗೊಳಿಸಿದರು.

ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಮೀನು ಉಳಿಸಲು ಕರೆ

 ‌         ಸಭೆಯಲ್ಲಿ ಸರ್ಕಾರಿ ಭೂ ಒತ್ತುವರಿ ತೆರವಿನ ಬಗ್ಗೆಯೂ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು,”ಸರ್ಕಾರಿ ಭೂ ಒತ್ತುವರಿಯನ್ನು ತೆರವುಗೊಳಿಸಲು ಸಿಎಂ ಸಿದ್ದರಾಮಯ್ಯ ಸಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೂ, ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸದಿರಲು ಕಾರಣವೇನು? ಎಂದು ಅಸಮಾಧಾನ ಹೊರಹಾಕಿದರು.

ವಿಜಯನಗರದಲ್ಲಿ 62840 ಜಾಗಗಳನ್ನು ಸರ್ಕಾರಿ ಆಸ್ತಿ ಎಂದು ಗುರುತಿಸಲಾಗಿದೆ. ಇನ್ನಾದರೂ ಈ ಆಸ್ತಿಗಳು ಒತ್ತುವರಿಯಾಗದಂತೆ ತಡೆಯಬೇಕು. ಸರ್ಕಾರಿ ಆಸ್ತಿಯ ಸುತ್ತ ಬೇಲಿ ಗುರುತು ಹಾಕಬೇಕು. ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸರ್ಕಾರಿ ಆಸ್ತಿಗಳ ಸುತ್ತ ಪೊಲೀಸರ ರೀತಿ ಬೀಟ್ ಹಾಕುವ ಪದ್ಧತಿ ಆರಂಭಿಸಬೇಕು ಎಂದರು

 

ಅಲ್ಲದೆ, ಇನ್ನಾದರೂ ಅಧಿಕಾರಿಗಳು ವಾರದಲ್ಲಿ ಒಂದು ದಿನ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಹಾಗೆಂದು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರ ಮೇಲೆ ನಿಮ್ಮ ದರ್ಪ ತೋರಿಸಬೇಡಿ ಎಂದು ಅವರು ಕಿವಿಮಾತು ಹೇಳಿದರು.

ಇ- ಆಫೀಸ್ ಅನುಷ್ಠಾನ, ಸಚಿವರ ತೀವ್ರ ಅಸಮಾಧಾನ!

ವಿಜಯನಗರದಲ್ಲಿ ಇ-ಆಫೀಸ್ ಬಳಕೆ ಬಳಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಸರಾಸರಿಯಾಗಿ ಜಿಲ್ಲಾ ಭವನದಲ್ಲಿ ಮಾತ್ರ ಇ-ಆಫೀಸ್ ಬಳಕೆ ಹೆಚ್ಚಾಗಿದೆ. ತಹಶೀಲ್ದಾರ್ ಹಾಗೂ ಎಸಿ ಮಟ್ಟದಲ್ಲಿ ಈಗಲೂ ಇ-ಆಫೀಸ್ ಬಳಕೆ ಗಣನೀಯವಾಗಿ ಏರಿಕೆಯಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.

ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಕಚೇರಿಗೆ ದಿನಕ್ಕೆ ಸರಾಸರಿಯಾಗಿ 30 ರಿಂದ 40 ಮಾತ್ರ ಹೊಸ ಕಡತ-ಟಪಾಲುಗಳು ಬರುತ್ತವೆ. ಇವನ್ನು ಇ-ಆಫೀಸ್ ಮೂಲಕ ವಿಲೇವಾರಿ ಮಾಡಲು ಏನು ಸಮಸ್ಯೆ? ಎಂದು ಪ್ರಶ್ನಿಸಿದ ಸಚಿವರು, ಇನ್ಮುಂದೆ ಭೌತಿಕ ಕಡತಗಳನ್ನು ಸ್ವೀಕರಿಸುವಂತಿಲ್ಲ.‌

 

ಜನರಿಂದ ಟಪಾಲು ಸ್ಬೀಕರಿಸುತ್ತಿದ್ದಂತೆ ಇ-ಆಫೀಸ್ ಫೈಲ್ ಸೃಷ್ಟಿಸಬೇಕು. ಜನರಿಗೆ ಶೀಘ್ರ ಮತ್ತು ಸುಲಭ ಆಡಳಿತ ನೀಡುವ ಮತ್ತು ಭ್ರಷ್ಟಾಚಾರಕ್ಕೆ ತಡೆಯೊಡ್ಡುವ ಸಲುವಾಗಿಯೇ ಇ-ಆಫೀಸ್ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ಇದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ತಾಕೀತು ಮಾಡಿದರು.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top