ಅಸ್ಪೃಶ್ಯತೆಮುಕ್ತ ಗ್ರಾಮ ಪಂಚಾಯಿತಿಗೆ ವಿಶೇಷ ಅನುದಾನ- ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ರಾಜ್ಯದಅಸ್ಪೃಶ್ಯತೆ ಮುಕ್ತ ಗ್ರಾಮ ಪಂಚಾಯಿತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ಅನುದಾನ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿನಯ ಸಾಮರಸ್ಯ ಯೋಜನೆ” ಈ ಬಾರಿ ಘೋಷಣೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ದಂಪತಿಯು 2 ವರ್ಷದ ಮಗುವನ್ನು ಕರೆದುಕೊಂಡು ದೇವಸ್ಥಾನಕ್ಕೆ ತೆರಳಿದ್ದಾಗ ಆ ಮಗು ದೇವಸ್ಥಾನದ ಒಳಕ್ಕೆ ತೆರಳಿದ್ದಕ್ಕೆ 25 ಸಾವಿರ ದಂಡ ವಿಧಿಸಿದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಆ ಹಿನ್ನೆಲೆಯಲ್ಲಿ ಆ ಮಗುವನ್ನು ದತ್ತು ಪಡೆದು ಆ ಮಗುವಿನ ಎಲ್ಲ ಶಿಕ್ಷಣದ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸಲಾಗುವುದು ಎಂದರು. ಆ ಮಗು ವಿನಯನ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಲಾಗುವುದು. ಗ್ರಾಮ ಗ್ರಾಮ ಮಟ್ಟದಲ್ಲೂ ಜನಜಾಗೃತಿ ನಡೆಯಲಿದೆ. ಮುಖ್ಯಮಂತ್ರಿ ಅವರಿಂದ ಚಾ¯ನೆ ಸಿಗಲಿದ್ದು, ಮಾನ್ಯ ಪ್ರಧಾನಮಂತ್ರಿಯವರು ಸಂದೇಶ ಕೊಡಲು ವಿನಂತಿಸಿದ್ದೇವೆ. ಸಮಾಜದ ಎಲ್ಲರೂ ಇದಕ್ಕೆ ಕೈಜೋಡಿಸಬೇಕಿದೆ. ರಾಜ್ಯದ ಸಂಸದರು, ಶಾಸಕರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿ 1 ಲಕ್ಷ ಜನಪ್ರತಿನಿಧಿಗಳು ಇದರಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು. ಕರ್ನಾಟಕದಲ್ಲಿ ಡಾ. ಅಂಬೇಡ್ಕರರು ಭೇಟಿ ಕೊಟ್ಟ ಸ್ಥಳಗಳ ಅಭಿವೃದ್ಧಿ ಮಾಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಇದಕ್ಕಾಗಿ 25 ಕೋಟಿ ಅನುದಾನದ ಘೋಷಣೆ ಮಾಡಿರುವುದಾಗಿ ವಿವರಿಸಿದರು.


ಇಂದು ಸಂವಿಧಾನಕರ್ತೃ ಡಾ. ಅಂಬೇಡ್ಕರರ ಜನ್ಮದಿನವಾಗಿದೆ. ಬಹುದೊಡ್ಡ ಕಾರ್ಮಿಕ ಕಾಯಿದೆಯ ಶಕಪುರುಷ ಅಂಬೇಡ್ಕರರ ಜನ್ಮದಿನವನ್ನು ನಮ್ಮ ಸರಕಾರವು ಅತ್ಯಂತ ಹೆಮ್ಮೆಯಿಂದ ಆಚರಿಸುತ್ತಿದೆ. ಡಾ. ಅಂಬೇಡ್ಕರ್ ಸ್ಫೂರ್ತಿ ಭವನ ವಿಚಾರ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ವಿಶೇಷ ಮುತುವರ್ಜಿ ವಹಿಸಿ ಕಡತಗಳ ವಿಲೇವಾರಿ ಮಾಡಿದ್ದು, ಇವತ್ತು ಶಿಲಾನ್ಯಾಸ ನೆರವೇರಿಸಿದ್ದಾರೆ. ಅಲ್ಲದೆ, 50 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ ಅಂಬೇಡ್ಕರ್ ಅಭಿಮಾನಿಗಳು ಮತ್ತು ಸಮುದಾಯಕ್ಕೆ ಸಂತೋಷ ಆಗಿರುವುದು ವ್ಯಕ್ತವಾಗಿದೆ ಎಂದು ವಿವರಿಸಿದರು.
2018ರಿಂದ ಇಲ್ಲಿನವರೆಗೆ ಬೇರೆ ಬೇರೆ ಕಾರಣಕ್ಕೆ ಡಾ. ಅಂಬೇಡ್ಕರ್ ಪ್ರಶಸ್ತಿ ನೀಡಿರಲಿಲ್ಲ. ಬಾಕಿ ಇದ್ದ ಅಂಬೇಡ್ಕರರ ಪ್ರಶಸ್ತಿಗೆ 5 ಜನರನ್ನು ಆಯ್ಕೆ ಸಮಿತಿ ಹಳ್ಳಿ ಹಳ್ಳಿಗೆ ಹೋಗಿ ಪರಿಶೀಲಿಸಿ ಆಯ್ಕೆ ಮಾಡಿದೆ. ಅರ್ಜಿ ಪರಿಗಣಿಸಿ ಪ್ರಶಸ್ತಿ ನೀಡಿದ್ದಲ್ಲ. ಅರ್ಹ ಸಾಧಕರಿಗೆ ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ ಎಂದರು.
ಸುಮಾರು 30-40 ಲಕ್ಷ ಪರಿಶಿಷ್ಟ ಜಾತಿ- ಪಂಗಡದವರಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ಭೂ ಒಡೆತನ ಖರೀದಿ ಮಿತಿಯನ್ನು 15 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ. ಹಿಂದುಳಿದ ವರ್ಗಗಳು ಮತ್ತು ಸಮಾಜಕಲ್ಯಾಣ ಇಲಾಖೆಯಡಿ 806 ವಸತಿ ಶಾಲೆಗಳು ಇವೆ. ಈ ಪೈಕಿ ಓಬವ್ವ ಆತ್ಮರಕ್ಷಣೆ ಕಲೆಯನ್ನು (ಕರಾಟೆ) ಹೆಣ್ಮಕ್ಕಳಿಗೆ ಕಲಿಸಲಾಗುತ್ತಿದೆ. ರಾಜ್ಯದ 1,704 ವಸತಿನಿಲಯಗಳಲ್ಲಿ ಕರಾಟೆ ಕಲಿಕೆ ನಡೆದಿದೆ ಎಂದರು.
ಅಂಬೇಡ್ಕರ್ ನಿಗಮ ಸೇರಿ ವಿವಿಧ ನಿಗಮಗಳಿಂದ ಈ ಸಾರಿ 19 ಸಾವಿರ ಕೊಳವೆಬಾವಿ ಮಂಜೂರು ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ 70- 75 ಕೊಳವೆಬಾವಿ ಮಂಜೂರಾಗಲಿದೆ. ದೂರುಗಳನ್ನು ತಪ್ಪಿಸಲು ಪಾರದರ್ಶಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ನೇರ ಫಲಾನುಭವಿಗೆ ಹಣ ನೀಡಿ ಅವರ ವಿವೇಚನೆಗೆ ಬಿಡಲು ಯೋಜಿಸಲಾಗಿದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top