ಬಳ್ಳಾರಿ, ಡಿ.01(ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಪರಿಷತ್ ನ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮತ್ತು ಲೋಪದೋಷಗಳಿಗೆ ಅಸ್ಪದ ನೀಡದಂತೆ ಚುನಾವಣಾ ಕಾರ್ಯ ನಡೆಸಬೇಕು ಎಂದು ಚುನಾವಣಾ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು. ಕರ್ನಾಟಕ ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಧಾನಪರಿಷತ್ ಚುನಾವಣೆಯು ವಿಧಾನಸಭಾ ಚುನಾವಣೆಗಿಂತ ಅತ್ಯಂತ ಭಿನ್ನವಾದುದು. ಇಲ್ಲಿ ಪ್ರಾಶಸ್ತ್ಯದ ಮತಗಳಿರುತ್ತವೆ. ಈ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಯಾವುದೇ ಸಮಸ್ಯೆಗಳಾಗದಂತೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ನಡೆಸುವ ಹೊಣೆಗಾರಿಕೆ ತಮ್ಮೆಲ್ಲರ ಮೇಲಿದೆ ಎಂದು ಚುನಾವಣಾ ಸಿಬ್ಬಂದಿಗಳಿಗೆ ಹೇಳಿದ ಚುನಾವಣಾ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದರು.
ಚುನಾವಣಾ ಸಂಬಂಧಿಸಿದ ಇನ್ನೀತರ ನೀತಿ ನಿಯಮಗಳ ಕುರಿತು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಪಿ.ಆರ್.ಒ ಮತ್ತು ಎ.ಪಿ.ಆರ್.ಒ ಗಳಿಗೆ ತಿಳಿಸಿದರು.
ಚುನಾವಣಾ ಪ್ರಕ್ರಿಯೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಿವಲಿಂಗರೆಡ್ಡಿ ಮತ್ತು ಹಟ್ಟಿ ಶಿವರಾಜ್ ಅವರು ಚುನಾವಣಾ ಸಿಬ್ಬಂದಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಸಿಬ್ಬಂದಿ ಮತ್ತು ಚುನಾವಣೆಗೆ ನಿಯೋಜಿತರಾದ ಪಿ.ಆರ್.ಒ ಮತ್ತು ಎ.ಪಿ.ಆರ್.ಒ ಗಳು ಇದ್ದರು.