ನೇರ- ನಿಷ್ಠುರ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ

Ø  ಹೊನಕೆರೆ ನಂಜುಂಡೇಗೌಡ, ಹಿರಿಯ ಪತ್ರಕರ್ತ

ಅದು 1990ನೇ ಇಸ್ವಿ. ಮೈಸೂರಿನ  ಕೆಲವು ಪತ್ರಿಕೆಗಳಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ಬಳಿಕ ʻಸಂಜೆವಾಣಿʼ  ಪತ್ರಿಕೆಯಲ್ಲಿ ಕೆಲಸ ಸಿಕ್ಕಿ ತು. ಆದರೆ, ಹುಬ್ಬಳ್ಳಿಗೆ ಕಳುಹಿಸಲಾಯಿತು.  ಅಲ್ಲಿ ಯಾರ ಪರಿಚಯವೂ ಇರಲಿಲ್ಲ. ಉತ್ತರ ಕರ್ನಾಟಕದ  ಭಾಷಾ ಸೊಗಡಿನ ಅರಿವಿರಲಿಲ್ಲ. ಜೋಳದ ರೊಟ್ಟಿ ತಿಂದು ಅಭ್ಯಾಸ ಇರಲಿಲ್ಲ.  ಹೊಸ ಊರು.. ಹೊಸ ಜನ…  ಅಂಜುತ್ತಾ, ಅಳುಕುತ್ತಲೇ ಹೋದೆ. ದಿನ ಕಳೆದಂತೆ ಅಹಿರಾಜ್‌ ಸಂಪರ್ಕಕ್ಕೆ ಬಂದ.  ಆತ ʻಟೈಮ್ಸ್‌ʼ ಅರೆಕಾಲಿಕ ವರದಿಗಾರನಾಗಿದ್ದ. ʻದ ಹಿಂದೂ ʼ ಪತ್ರಿಕೆ ವಿಶೇಷ ಪ್ರತಿನಿಧಿಯಾಗಿದ್ದ ಮತ್ತಿಹಳ್ಳಿ ಮದನ ಮೋಹನ್‌ ಅವರನ್ನು ಪತ್ರಿಕಾ ಗೋಷ್ಠಿಗಳಲ್ಲಿ ನೋಡಿದ್ದೆ. ಮದನ್‌ ಮೋಹನ್‌, ʻಎಕ್ಸ್‌ಪ್ರೆಸ್‌ʼ ವರದಿಗಾರರಾಗಿದ್ದ ಎಚ್‌.ಜಿ. ಬೆಳಗಾಂವಕರ, ಅಹಿರಾಜ್‌ ಅವರದ್ದು ಒಂದು ಗುಂಪು.  ಪತ್ರಕರ್ತ ಮಿತ್ರ ಗೋವಿಂದ ಬೆಳಗಾಂವಕರ ಅವರು ತಯಾರಾಗಿದ್ದೇ ಈ ಗರಡಿಯಲ್ಲಿ.  ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ನನಗೂ ಮದನ್‌ ಮೋಹನ್‌  ಗುಂಪಿಗೆ  ಎಂಟ್ರಿ ಸಿಕ್ಕಿತು.

ಪತ್ರಕರ್ತರಾಗಿ 48 ವರ್ಷ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಮದನ್‌ ಮೋಹನ್‌ ಅವರದ್ದು ನಿಷ್ಠುರ ನಡವಳಿಕೆ. ಯಾರಿಗೂ ಸೊಪ್ಪು ಹಾಕಿದವರಲ್ಲ. ಪತ್ರಿಕಾ ಗೋಷ್ಠಿಗಳಿಗೆ ಸಂಪೂರ್ಣ ಸಿದ್ಧತೆಯೊಂದಿಗೇ ಬರುತ್ತಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸಲು  ಮಂತ್ರಿಗಳು, ಮುಖ್ಯ ಮಂತ್ರಿಗಳು ತಿಣುಕಾಡಿದ್ದೂ ಇದೆ. ಎಷ್ಟೋ ರಾಜಕಾರಣಿಗಳು ಪತ್ರಿಕಾ ಗೋಷ್ಠಿಗಳಲ್ಲಿ ಬೆವರು ಒರೆಸಿಕೊಂಡಿದ್ದರು.  ಅವರ ಈ ನಡವಳಿಕೆ ಕೆಲ ಪತ್ರಕರ್ತರಿಗೆ ಹೊಟ್ಟೆಕಿಚ್ಚಿನ ವಿಷಯವಾಗುತಿತ್ತು. ʻನಮಗೆ ಪ್ರಶ್ನೆ ಕೇಳಲು ಅವಕಾಶ ಸಿಗುತ್ತಿಲ್ಲʼವೆಂದು ಕಿಡಿ ಕಾರಿದ್ದೂ ಉಂಟು. 

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳು ಪ್ಲಸ್‌ ಗೋವಾ ಮದನ್‌ ಮೋಹನ್‌ ಅವರ ಕಾರ್ಯಕ್ಷೇತ್ರವಾಗಿತ್ತು. ಇವತ್ತು ಹುಬ್ಬಳ್ಳಿಯಲ್ಲಿದ್ದರೆ, ಮರುದಿನ ಬೇರೆ ಯಾವುದೋ ಊರಿನಲ್ಲಿ ಇರುತ್ತಿದ್ದರು. ಯಾವಾಗಲೂ ಬಸ್‌ನಲ್ಲೇ ಪ್ರಯಾಣ. ಪುಟ್ಟ ಟೈಪ್‌ರೈಟರ್‌ ಅನ್ನು ಹೆಗಲಿಗೆ ಹಾಕಿಕೊಂಡೇ ಓಡಾಟ. ಖಾದಿ ಬಟ್ಟೆ ತೊಡುತ್ತಿದ್ದರು. ಗ್ರಾಮೀಣ ಅಭಿವೃದ್ಧಿ- ಪಂಚಾಯತ್‌ ರಾಜ್‌ ನೆಚ್ಚಿನ ವಿಷಯ. ಪಂಚಾಯತ್‌ ರಾಜ್‌ ಮೇಲೆ ಬೇಕಾದಷ್ಟು ಲೇಖನಗಳನ್ನು ಬರೆದಿದ್ದರು. ನೀರಾವರಿ, ಅದರಲ್ಲೂ ಕೃಷ್ಣಾ ನದಿ ನೀರಿನ ವಿವಾದವನ್ನು ಅರೆದು ಕುಡಿದಿದ್ದರು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಕುರಿತು ನಿಖರವಾದ ಸಮೀಕ್ಷೆ ಮಾಡುತ್ತಿದ್ದರು. 1952ರಿಂದ ಹಿಡಿದು ಈಚಿನ ಚುನಾವಣೆವರೆಗೆ ಎಲ್ಲ ಅಂಕಿಅಂಶಗಳನ್ನು ಇಟ್ಟುಕೊಂಡಿದ್ದರು.

ಗದಗ ಜಿಲ್ಲೆಯ ಸೊರಟೂರಿನಲ್ಲಿ ಒಮ್ಮೆ ಸವರ್ಣೀಯರು ಹಾಗೂ ದಲಿತರ ನಡುವೆ ಸಂಘರ್ಷ ನಡೆದಿತ್ತು. ಆಗ  ಪೊಲೀಸರು ನಡೆಸಿದ ಗೋಲಿಬಾರ್‌ಗೆ ನಾಲ್ವರು ಬಲಿಯಾದರು. ಗಲಭೆ ಬಳಿಕ ಇಡೀ ಊರು ಖಾಲಿಯಾಗಿತ್ತು. ಸ್ಮಶಾನ ಮೌನ ಆವರಿಸಿತ್ತು. ಮರು ದಿನ ಹಳ್ಳಿಗೆ ಹೋಗಿದ್ದೆ. ಅಲ್ಲಿಗೆ ಹೋಗಲು ಬಸ್‌ ಸೌಕರ್ಯ ಇರಲಿಲ್ಲ. ಗದಗದವರೆಗೂ ಬಸ್‌ನಲ್ಲಿ ಪ್ರಯಾಣಿಸಿ, ಬಳಿಕ ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿ ಹಳ್ಳಿ ತಲುಪಿದ್ದೆ. ಅಷ್ಟು ಹೊತ್ತಿಗೆ ಮದನ್‌ ಮೋಹನ್‌ ಅವರ ತಂಡ ಅಲ್ಲಿತ್ತು. ಬಾಡಿಗೆ ಕಾರು ಹಿಡಿದು ಬಂದಿತ್ತು. ನನ್ನನ್ನು ಕಂಡು ಅವರಿಗೆ ಅಚ್ಚರಿಯಾಗಿತ್ತು. ಬಹುತೇಕರ ಬಳಿ ಅವರು, ನಾನು ಕಷ್ಟಪಟ್ಟು ಸೊರಟೂರಿಗೆ ಹೋಗಿದ್ದ ವಿಷಯ ಹಂಚಿಕೊಂಡಿದ್ದರು.

ರಾಣೆಬೆನ್ನೂರಿನಲ್ಲಿ ಕೆ.ಬಿ. ಕೋಳಿವಾಡರ ಹತ್ತಿ ಗಿರಣಿ ಉದ್ಘಾಟನೆ ಇತ್ತು.  ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೆ ಮೂರು ಸಲ ಅವರನ್ನು ಮಾತನಾಡಿಸಿ, ಬೇರೆ ಬೇರೆ ವರದಿಗಳನ್ನು ಫೈಲ್‌ ಮಾಡಿದ್ದರು ಮದನ್‌ ಮೋಹನ್‌. ಅವರ ಜತೆ ನಾನೂ ಇದ್ದೆ. ಮದನ್‌ ಮೋಹನ್‌ ಅವರ ಕಾರ್ಯಕ್ಷಮತೆಗೆ ಇದು ಸಾಕ್ಷಿ. 1996ರಲ್ಲಿ ಹೆಗಡೆ ಅವರನ್ನು  ದಳದಿಂದ ಉಚ್ಚಾಟಿಸಿದ ಸಂದರ್ಭದಲ್ಲಿ ನಾನು, ಡೆಕ್ಕನ್‌ ಹೆರಾಲ್ಡ್‌ನಲ್ಲಿದ್ದ ಲೈಕ್‌ ಅಹಮ್ಮದ್‌ ಖಾನ್‌ ಒಂದು ವಾರ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿದೆವು. ಹೆಗಡೆ  ಜನ ಸಂಪರ್ಕ ಸಭೆಗಳನ್ನು ನಡೆಸುತ್ತಿದ್ದರು. ಮದನ್‌ ಮೋಹನ್‌ ಅವರೂ ಬಂದಿದ್ದರು. ಅವರು ಪ್ರತಿ ದಿನ ಮುಂಜಾನೆ ಐದು ಗಂಟೆಗೆ ಎದ್ದು ಸುದ್ದಿ ಟೈಪ್‌ ಮಾಡಿ ತಮ್ಮ ಕಚೇರಿಗೆ ಕಳುಹಿಸುತ್ತಿದ್ದರು. 

90ರ ದಶಕದಲ್ಲಿ ಆದ ಮದನ್‌ ಮೋಹನ್‌ ಅವರ ಪರಿಚಯ ಇದುವರೆಗೂ ಮುಂದುವರೆದಿತ್ತು.    ಗೋವಿಂದ್‌ ಬೆಳಗಾಂವಕರ ಅವರ ಮಗಳು ಮೇಧಾ ಅವರ ಆರತಕ್ಷತೆಗೆ ಮೇ 12ರಂದು ಹುಬ್ಬಳ್ಳಿಗೆ ಹೋಗಿದ್ದಾಗ ಮದನ್‌ ಮೋಹನ್‌ ಅವರೂ ಬಂದಿದ್ದರು. ನಾನು, ʼಪ್ರಜಾವಾಣಿʼಯ ಡೆಪ್ಯುಟಿ ಎಡಿಟರ್‌ ಎಂ. ನಾಗರಾಜ್‌ ಮತ್ತು ಸಹಾಯಕ ಸಂಪಾದಕ ಎನ್‌. ಉದಯ್‌ ಕುಮಾರ್‌ ಒಟ್ಟಿಗೇ ಹೋಗಿದ್ದೆವು. ಆರತಕ್ಷತೆ ನೆಪದಲ್ಲಿ ಮದನ್‌ ಮೋಹನ್‌ ಅವರನ್ನು ನೋಡುವ ಉದ್ದೇಶವೂ ಇತ್ತು. ಅವರು ‘ಮನೆಗೆ ಬನ್ನಿʼ ಎಂದು ಒತ್ತಾಯಿಸಿದರು. ʻದೇವರೇ ಭಕ್ತರ ಬಳಿಗೆ ಬಂದಿರುವಾಗ ಗುಡಿಗೆ ಹೋಗುವ ಅಗತ್ಯವಿಲ್ಲ” ಎಂದು ಹೇಳಿದ್ದೆ. ಅದೇ ನಮ್ಮ ಕೊನೆಯ ಭೇಟಿ.

ನಾನು ʻಪ್ರಜಾವಾಣಿʼಗೆ ಬರೆಯುತ್ತಿದ್ದ ʻದೆಹಲಿ ನೋಟʼ ಅಂಕಣವನ್ನು ಮದನ್‌ ಮೋಹನ್‌ ತಪ್ಪದೇ ಓದುತ್ತಿದ್ದರು. ಚೆನ್ನಾಗಿ ಬರೆದಾಗ ಬೆನ್ನು ತಟ್ಟುತ್ತಿದ್ದರು. ಅವರಿಗೆ ನನ್ನ ನಿಲುವು ಇಷ್ಟ ಆಗದಿದ್ದಾಗ ಟೀಕಿಸುತ್ತಿದ್ದರು. ನನ್ನ ಬೆಳವಣಿಗೆಯಲ್ಲಿ ಅವರ ಕೊಡುಗೆ ಇದೆ. ಬೇಕಾದಷ್ಟು ಸಲ ನನ್ನನ್ನು ತಿದ್ದಿ, ತೀಡಿದ್ದ ಮದನ್‌ ಮೋಹನ್‌ ನನ್ನ ಗುರುಗಳು, ಮಾರ್ಗದರ್ಶಕರೂ ಆಗಿದ್ದರು.

ʻಖಾದ್ರಿ ಶಾಮಣ್ಣ ಟ್ರಸ್ಟ್‌ ಕಳೆದ ವರ್ಷ ನನ್ನನ್ನು ಖಾದ್ರಿ  ಶಾಮಣ್ಣ ಪ್ರಶಸ್ತಿಗೆ ಆಯ್ಕೆ ಮಾಡಿದಾಗ ಮದನ್‌ ಮೋಹನ್‌ ಟ್ರಸ್ಟ್‌ ಅಧ್ಯಕ್ಷ ಎಚ್‌.ಆರ್‌. ಶ್ರೀಶ ಅವರಿಗೆ ಕರೆ ಮಾಡಿ ʻಅತ್ಯುತ್ತಮ ಆಯ್ಕೆʼ ಎಂದು ಹೇಳಿದ್ದರಂತೆ. ಅದನ್ನು ಶ್ರೀಶ ಈಗಷ್ಟೇ ನೆನಪು ಮಾಡಿಕೊಂಡರು.

ಕೂಡ್ಲಿ ಗುರುರಾಜ್‌ ಮೇ 22ರಂದು ʻಜನಮಿತ್ರʼದಲ್ಲಿ ಮದನ್‌ ಮೋಹನ್‌ ಅವರನ್ನು ಕುರಿತು ಲೇಖನ ಬರೆದಿದ್ದಾಗ ಕೊನೆಯದಾಗಿ ಮೊಬೈಲ್‌ನಲ್ಲಿ ಮಾತಾಡಿ, ಅಭಿನಂದಿಸಿದ್ದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೂಡ್ಲಿಯೇ ಕರೆ ಮಾಡಿ ʼವಿಷಯ ಗೊತ್ತಾಯ್ತಾʼ ಎಂದು ಕೇಳಿದಾಗ ನಂಬಲು ಆಗಲಿಲ್ಲ. ಮದನ್‌ ಮೋಹನ್‌ ತಮ್ಮ ಕೆಲಸದಿಂದಾಗಿ ಯಾವಾಗಲೂ ನಮ್ಮೊಂದಿಗಿರುತ್ತಾರೆ ಎಂಬುದು ನನ್ನ  ನಂಬಿಕೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top