ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಾಲ ವಸೂಲಾತಿ ಪದ್ಧತಿಗೆ ವಿರೋಧ || ಎತ್ತಿನ ಬಂಡಿ, ಟ್ರಾಕ್ಟರ್ ಮೆರವಣಿಗೆ
ಬಳ್ಳಾರಿ: ಕಳೆದ 285 ದಿನಗಳಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಮತ್ತು ಹಸಿರು ಸೈನ್ಯ ವತಿಯಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಿದರೂ ಈ ಬಗ್ಗೆ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಇಂದು ರೈತರು ಸಂಘದ ಮುಖಾಂತರ ಬೃಹತ್ ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟೀಕಾಯತ್‌ರವರ ಅನುಪಸ್ಥಿತಿಯಲ್ಲಿಯೂ ನಗರದಲ್ಲಿಂದು ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ನಡೆಸಿದ್ದು, ನೂರಾರು ಸಂಖ್ಯೆಯ ಎತ್ತಿನ ಬಂಡಿಗಳು, ನೂರಾರು ಸಂಖ್ಯೆಯ ಟ್ರ್ಯಾಕ್ಟರ್‌ಗಳಲ್ಲಿ ಸಾವಿರಾರು ಸಂಖ್ಯೆಯ ರೈತರು ನಗರದ ಮುನ್ಸಿಪಲ್ ಕಾಲೇಜು ಮೈದಾನದಿಂದ ಗಡಗಿ ಚೆನ್ನಪ್ಪ ವೃತ್ತ ಸುತ್ತುವರೆದು ಇಂದಿರಾಗಾಂಧಿ ವೃತ್ತ, ಸತ್ಯನಾರಾಯಣ ಪೇಟೆಯ ಮೂಲಕ ಸಾಗಿದ ಪ್ರತಿಭಟನಾ ಮೆರವಣಿಗೆಯು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದ ಪ್ರತಿಭಟನಾ ವೇದಿಕೆಗೆ ಬಂದು ತಲುಪಿತು.
ರಾಜ್ಯ ವಿಧಾನ ಪರಿಷತ್ತಿನ ಮಾಜಿ ಉಪಾಸಭಾಪತಿ ಹಾಗೂ ಹಾಲಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ೨೨ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಲಕ್ಷಾಂತರ ಮಂದಿ ರೈತರು ಸಾಲ ಪಡೆದುಕೊಂಡಿದ್ದಾರೆ. ಆದರೆ ಸರಿಯಾದ ಮಳೆ ಇಲ್ಲದೆ, ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಸಾಲ ತೀರಿಸಲಾಗಿಲ್ಲ. ಅದರಲ್ಲೂ ಬ್ಯಾಂಕಿನಿಂದ ೧ ಲಕ್ಷ ಹಣ ಪಡೆದವರಿಗೆ ೧೦ ಲಕ್ಷ ಹೀಗೆ ಹತ್ತು ಪಟ್ಟು ಹೆಚ್ಚಿನ ಮೊತ್ತ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಲಕ್ಷಾಂತರ ರೈತರಿಗೆ ತೀವ್ರತರವಾದ ಸಮಸ್ಯೆಗಳು ಎದುರಾಗುತ್ತಿವೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ದೀರ್ಘಾವಧಿಯಿಂದ ಬಾಕಿಯಿರುವ ಸಾಲವನ್ನು ತಿರುವಳಿ ಯೋಜನೆಯಡಿ ಶೇ.೫೦ರಷ್ಟು ಹಣವನ್ನು ಪಾವತಿಸಿಕೊಂಡು ಸಾಲಮುಕ್ತರನ್ನಾಗಿಸಬೇಕು. ಈ ಸಂಬಂಧ ಕಳೆದ ೮ ತಿಂಗಳಿಂದಲೂ ಬ್ಯಾಂಕ್ ಮುಂದೆಯೇ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಈ ವರೆಗೂ ಬ್ಯಾಂಕ್ ಮುಖ್ಯಸ್ಥರಾಗಲಿ, ರಾಜಕೀಯ ಪ್ರತಿನಿಧಿಗಳಾಗಲಿ ಈ ಬಗ್ಗೆ ಮಾತನಾಡಿಲ್ಲ. ಈ ನಿಟ್ಟಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ಸ್ಪರ್ಧೆ ಮಾಡಿ ಸಚಿವರಾದರೂ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಅದೇ ರೀತಿ ಲೋಕಸಭಾ ಸದಸ್ಯರು ಕೂಡ ಈ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ. ಕಾರ್ಪೋರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡುವ ಸರ್ಕಾರವು ಸಣ್ಣ ಪುಟ್ಟ ರೈತರ ಸಾಲಗಳನ್ನು ಮನ್ನಾ ಮಾಡುವ ವಿಚಾರದ ಬಗ್ಗೆ ಚರ್ಚೆಯೂ ಸಹ ಮಾಡಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು, ಸಿಎಂ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಮುಖಂಡರೋರ್ವರು ಮಾತನಾಡಿ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಎಸ್‌ಬಿಐ ನಂತಹ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಹ ತಮ್ಮ ಬ್ಯಾಂಕ್‌ನಿಂದ ರೈತರು ಪಡೆದಿರುವ ಕೃಷಿ ಸಾಲದ ಅಸಲಿನ ಶೇ.೧೦ರಷ್ಟು ಹಣ ಕಟ್ಟಿಸಿಕೊಂಡು ಉಳಿದ ಸಾಲವನ್ನು ಮನ್ನಾ ಮಾಡಿವೆ. ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬಂದಿದೆ. ರೈತರ ಕೃಷಿ ಸಾಲಕ್ಕೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ನೀತಿಯೋಜನೆ ರೂಪಿಸಿಲ್ಲ ಮತ್ತು ಸಾಲ ವಸೂಲಾತಿ ಸಲುವಾಗಿ ವಕೀಲರ ಮೂಲಕ ಲೀಗಲ್ ನೋಟೀಸ್‌ಗಳನ್ನು ರೈತರಿಗೆ ನೀಡಿ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡಿ ರೈತರಿಗೆ ತೀವ್ರ ಕಿರುಕುಳ ಕೊಡುವ ಕಾರ್ಯವನ್ನು ಮುಂದುವೆರೆಸಿದೆ ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ವತಿಯಿಂದ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮುಂಬಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಈ ಹೋರಾಟಕ್ಕೆ ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರ ಬೆಂಬಲ ಸೂಚಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆರ್. ಮಾಧವ ರೆಡ್ಡಿ ಕರೂರು ಮಾತನಾಡಿ, ಇಂದು ಮಾಡುತ್ತಿರುವ ಹೋರಾಟದ ಸ್ವರೂಪ ತೀವ್ರವಾಗಿದ್ದು, ನಾಳೆ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಉಪಾಸಭಾಪತಿ ಹಾಗೂ ಹಾಲಿ ಶಾಸಕ ಬಿ.ಆರ್.ಪಾಟೀಲ್ ನೇತೃತ್ವದ ನಿಯೋಗ ಸಿಎಂ ಬಳಿಗೆ ತೆರಳಲಿದ್ದು, ಅಲ್ಲಿ ಬ್ಯಾಂಕ್‌ನ ಮುಖಸ್ಥರೊಂದಿಗೆ ಸಮಾಲೋಚನೆ ನಡೆಸಲಿದೆ. ಇದರಲ್ಲಿ ನಮ್ಮ ರೈತರಿಗೆ ನ್ಯಾಯ ದೊರೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಸ್ವರೂಪ ತಾಳಲಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ರಘುನಾಥ್ ಕೋಲಾರ್ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರೈತ ಪರ ಹೋರಾಟಗಾರ ನೇತೃತ್ವದಲ್ಲಿ ನಡೆದ ಭಾರೀ ಬೃಹತ್ ಪ್ರತಿಭಟನೆಯಲ್ಲಿ ರೈತಪರ ಹೋರಾಟಗಾರರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಅರಳಾಪುರ ಮಂಚೇಗೌಡ, ಶೈಲೇಂದ್ರ ಪಾಟೀಲ್, ದಯಾನಂದ ಪಾಟೀಲ್, ಬಿ.ಬಸವರಾಜ್, ಕಾಳಿದಾಸ, ಗೋಪಾಲ್ ರೆಡ್ಡಿ ಮುಕ್ಕುಂದ, ಸಿದ್ದಲಿಂಗಯ್ಯ, ಭಾಸ್ಕರ್ ರಾವ್, ಕೊಮಲ್ ಸಮತಳ, ರೂಪಾ ಸುರೇಶ್, ಸಿದ್ದನಗೌಟ ಪಾಟೀಲ್, ಶರಣಪ್ಪ ದೊಡ್ಡಮನಿ, ಶಿವಕುಮಾರ್, ತಿಮ್ಮನಗೌಡ, ಲೇಪಾಕ್ಷಿ, ಅಬ್ದುಲ್ ಸುಕುಲ್, ಹಾಗೂ ಸದಸ್ಯರುಗಳಾದ ನಾಗವೇಣೀ, ಭಾರತಿ, ಕೆ,ಬಸವರೆಡ್ಡಿ, ಬಸವರಾಜ ಸ್ವಾಮಿ, ಕಲ್ಲುಕಂಬ ಪಂಪಾಪತಿ, ಸುರೇಂದ್ರ, ಕೆ.ವೈ.ಕಿರಣ್ ಕುಮಾರ್ ಸೇರಿದಂತೆ ರಾಜ್ಯದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಒಳಗೊಡಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಖ್ಯೆಯಲ್ಲಿ ಆಗಮಿಸಿದ್ದ ಸಾವಿರಾರು ಮಹಿಳಾ ರೈತರು, ಕೃಷಿ ಕಾರ್ಮಿಕರು, ಕೃಷಿಕರು, ರೈತರು ಭಾಗವಹಿಸಿದ್ದರು.
ಪ್ರತಿಭಟನೆ ವೇಳೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ರೈತ ವಿರೋಧಿ ನೀತಿಯ ವಿರುದ್ದ ರೈತರು ಕಿಡಿಕಾರಿದರು. ಸತತ 8 ತಿಂಗಳಿಂದಲೂ ಪ್ರತಿಭಟನೆ ಮಾಡುತ್ತಿದ್ದರೂ ಇದಕ್ಕೆ ಮಧ್ಯಸ್ಥಿಕೆ ವಹಿಸಲು ಮುಂದಾಗದ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.