ಬಳ್ಳಾರಿಯಲ್ಲಿ ಗೊಲ್ಲರ ಸಂಘದಿಂದ ಬೃಹತ್ ಪ್ರತಿಭಟನೆ : ನ್ಯಾಯಕ್ಕಾಗಿ ಒತ್ತಾಯ
ಬಳ್ಳಾರಿ: ಇತ್ತೀಚೆಗಷ್ಟೇ ಕೋಲಾರ ಜಿಲ್ಲೆಯ ಕೆಂದಟ್ಟಿ ಗ್ರಾಮದ ಬಳಿ ಇರುವ ಕಲ್ಲು ಕ್ವಾರಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಳ್ಳಾರಿ ಮೂಲಕ ವೈದ್ಯಕೀಯ ವಿದ್ಯಾರ್ಥಿನಿ ದರ್ಶಿನಿ ಸಾವಿಗೆ ಎಂವಿಜೆ ಕಾಲೇಜಿನ ಪ್ರಾದ್ಯಾಪಕರೇ ಕಾರಣರಾಗಿದ್ದು, ಆ ಯುವತಿಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಗೊಲ್ಲರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ನಗರದ ನಗರೂರು ನಾರಾಯಣರಾವ್ ಪಾರ್ಕ್‌ಬಳಿ ಜಮಾಯಿಸಿದ್ದ ಜಿಲ್ಲಾ ಗೊಲ್ಲರ ಸಂಘದ ಮುಖಂಡರು, ಮತ್ತಿತರರು ಪ್ರತಿಭಟನಾ ಮೆರವಣಿಗೆ ಮಾಡಿ, ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಕಾಲೇಜಿನ ಆಡಳಿತ ಮಂಡಳಿ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ, ಗೊಲ್ಲರ ಸಂಘದ ಜಿಲ್ಲಾಧ್ಯಕ್ಷ, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಸರ್ಕಾರದ ಕೋಟಾದಡಿ ವೈದ್ಯಕೀಯ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಬಳ್ಳಾರಿ ಮೂಲಕ ದರ್ಶಿನಿ ಆತ್ಮಹತ್ಯೆ ಮಾಡಿಕೊಳ್ಳಲು ಎಂವಿಜೆ ಕಾಲೇಜಿನ ಆಡಳಿತ ಮಂಡಳಿಯೇ ಪ್ರಮುಖ ಕಾರಣವಾಗಿದೆ. ಈ ಕುರಿತು ಸರ್ಕಾರವು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲದೆ, ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಿರಿಯ ವೈದ್ಯ ಮಹೇಶ್ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಇದ್ದು, ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಮೃತಳ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮೃತ ಯುವತಿಯ ಸೋದರ ಮಾವ ಅವರು ಮಾತನಾಡಿ, ಇಂದು ದುಡ್ಡಿದ್ದವರಿಗೆ ಮಾತ್ರ ಎಲ್ಲಾ ಅನುಕೂಲಗಳು ಸಿಗಲಿವೆ. ನಮ್ಮ ದರ್ಶಿನಿ ಹಿಂದುಳಿದ ವರ್ಗದವಳು ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಮುಂದೆ ಯಾವುದೇ ವಿದ್ಯಾರ್ಥಿಗೂ ಇಂತಹ ಸಮಸ್ಯೆ ಬಾರದಿರಲು ಕಾಲೇಜಿನ ಹಿರಿಯ ವೈದ್ಯರ ಮೇಲೆ ಕ್ರಮ ಜರುಗಿಸಬೇಕು ಎಂದರಲ್ಲದೆ, ಕಾಲೇಜಿನ ಮಾನ್ಯತೆ ರದ್ದಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗೊಲ್ಲ ಸಮುದಾಯದ ಹಿರಿಯ ಮುಖಂಡರು ಸೇರಿದಂತೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.