ಬಸ್ ನಿಲ್ದಾಣದಲ್ಲಿ ವಿದ್ಯುತ್ ವೈರ್ ತಗಲಿ ವ್ಯಕ್ತಿ ಸಾವು

ಬೆಂಗಳೂರು: ಬಸ್ ನಿಲ್ದಾಣಕ್ಕೆ ಅಳವಡಿಸಿದ್ದ ಅಕ್ರಮ ಜಾಹೀರಾತು ಫಲಕದ ಮೆಟಲ್ ಬೋರ್ಡ್ ತಗಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಈ ಕುರಿತು ಹೆಬ್ಬಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ, ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದು , ನಿನ್ನೆ ರಾತ್ರಿ ಸುಮಾರು 9.30 ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಟೈಮ್ಸ್ ಇನೋವೆಟಿವ್ ಮೀಡಿಯಾ ಹೆಸರಿನ ಖಾಸಗಿ ಜಾಹೀರಾತು ಕಂಪೆನಿಯೊಂದು ಅಕ್ರಮವಾಗಿ ಬಸ್ ನಿಲ್ದಾಣದ ಸಮೀಪದ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬಸ್ ನಿಲ್ದಾಣದ ಸುತ್ತಲು ಜಾಹೀರಾತು ಫಲಕ ಅಳವಡಿಸಿತ್ತು. ಜಾಹೀರಾತು ಫಲಕದ ಮೆಟಲ್ ವೈರ್ ಸಂಪರ್ಕಕ್ಕೆ ಬಂದು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಜಾಹೀರಾತು ಫಲಕಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಡಿಸೆಂಬರ್ 2020 ರಲ್ಲಿ ಸ್ಥಗಿತಗೊಳಿಸಲಾಗಿತ್ತು.ಆದರೆ ಇತ್ತೀಚೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಜಾಹೀರಾತು ಫಲಕವನ್ನು ಸಂಸ್ಥೆ ಅಳವಡಿಸಿತ್ತು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿದ್ಯುತ್ ಅವಘಡ ಬೆಸ್ಕಾಂ ನಿರ್ಲಕ್ಷ್ಯದಿಂದ ಆಗಿಲ್ಲ , ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವ ಖಾಸಗಿ ಜಾಹೀರಾತು ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೆಬ್ಬಾಳ ವಿಭಾಗದ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಬೆಸ್ಕಾಂನ ವಿಚಕ್ಷಣ ದಳದ ಅಧಿಕಾರಿಗಳು ಖಾಸಗಿ ಜಾಹೀರಾತು ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.

Leave a Comment

Your email address will not be published. Required fields are marked *

Translate »
Scroll to Top