ಬೆಂಗಳೂರು : ಅತಿವೃಷ್ಠಿಯಿಂದ ಮನೆಗಳು ಹಾನಿಗೆ ಒಳಗಾಗಿ ಪರಿಹಾರ ನೀಡುವಾಗ ಅಧಿಕಾರಿಗಳು ಹಣ ದುರುಪಯೋಗ ಪಡಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿಂದು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ವಿನಯ್‌ಕುಲಕರ್ಣಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಅತಿವೃಷ್ಠಿಯಿಂದ ಮನೆ ಬಿದ್ದ ಕುಟುಂಬಗಳನ್ನು ಗುರುತಿಸಿ ಮನೆ ನಿರ್ಮಾಣಕ್ಕೆ ಹಣವನ್ನು ನೀಡಿದ್ದೇವೆ. ಈಗ ಈ ಹಣವನ್ನು ಫಲಾನುಭವಿಗಳಿಂದ ವಾಪಸ್ ಪಡೆಯಲು ಸಾಧ್ಯವಿಲ್ಲ. ಈ ಹಣ ಬಿಡುಗಡೆ ಸಂದರ್ಭದಲ್ಲಿ ಅವ್ಯವಹಾರಗಳು ನಡೆದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅತಿವೃಷ್ಠಿಯಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಪರಿಹಾರ ಪಾವತಿಸಲು ತಾರತಮ್ಯವೆಸಗಿದ ದೂರುಗಳು ದಾಖಲಾದಲ್ಲಿ ಅಂತಹ ಪ್ರಕರಣಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾನಿಗೆ ಒಳಗಾದ ಮನೆಗಳ ಬಗ್ಗೆ ಪುನರ್ ಸಮೀಕ್ಷೆ ನಡೆಸುವುದಾಗಿಯೂ ಅವರು ಹೇಳಿದರು.
ಈ ಹಿಂದೆ ದೂರುಗಳು ಬಂದಿದ್ದಾಗ ಪುನರ್ ಸಮೀಕ್ಷೆ ನಡೆಸಿ ೯೭೩ ಮನೆ ಹಾನಿಯಾಗಿದ್ದ ಪ್ರಕರಣಗಳಲ್ಲಿ ೨೪೩ ಪ್ರಕರಣಗಳನ್ನು ರದ್ದು ಮಾಡಿ ಉಳಿದವರಿಗೆ ಮನೆ ಕಟ್ಟಲು ಪರಿಹಾರ ನೀಡಲಾಗಿದೆ. ಇದರಲ್ಲೂ ಅನರ್ಹರು ಇದ್ದಾರೆ ಎಂದಾದರೆ ಮತ್ತೆ ಪುನರ್ ಸಮೀಕ್ಷೆ ನಡೆಸುವುದಾಗಿಯೂ ಅವರು ತಿಳಿಸಿದರು.
ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ತಾರತಮ್ಯವಾಗಿದೆ. ಮನೆ ಬಿದ್ದವರಿಗೆ ಪರಿಹಾರ ಸಿಕ್ಕಿಲ್ಲ. ಮನೆ ಬೀಳದವರಿಗೆ ಪರಿಹಾರ ಸಿಕ್ಕಿದೆ. ಹಾಗಾಗಿ ಪುನರ್ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.