ಮಲ್ಲಿ ಪಟ್ಟಣ ಏತನೀರಾವರಿ ಮೇ 2022ಕ್ಕೆ ಪೂರ್ಣ : ಗೋವಿಂದ ಎಂ. ಕಾರಜೋಳ

ಬೆಳಗಾವಿ: ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯನ್ನು ಮೇ 2022ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ರವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಅರಕಲಗೂಡು ಕ್ಷೇತ್ರದ ಶಾಸಕರಾದ ಎ.ಟಿ.ರಾಮಸ್ವಾಮಿ ರವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರವಾಗಿ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯ ಮೊದಲನೇ ಹಂತದಲ್ಲಿ ರೂ.106.03 ಕೋಟಿ ಮೊತ್ತದ ಕಾಮಗಾರಿಯನ್ನು ದಿನಾಂಕ 21-10-2019 ರಂದು ಪ್ರಾರಂಭಿಸಲಾಗಿದ್ದು, ದಿನಾಂಕ 20-04-2021 ಕ್ಕೆ ಪೂರ್ಣಗೊಳಿಸಬೇಕಾಗಿತ್ತು.

ದಿನಾಂಕ 18-10-2021 ರಂದು ಗುತ್ತಿಗೆದಾರರೊಂದಿಗೆ ನಡೆದ ಸಭೆಯಲ್ಲಿ ಕಾಮಗಾರಿಯನ್ನು ಮೇ – 2022 ರೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿ ಪರಿಷ್ಕೃತ ಕಾರ್ಯಕ್ರಮ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಅದರನ್ವಯ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎರಡನೇ ಹಂತದಲ್ಲಿ ಬಾಕಿ ಉಳಿದ ಕಾಮಗಾರಿಗಳಾದ ಗ್ರಾವಿಟಿ ಮೈನ್ ನಿರ್ಮಿಸಿ 53 ಕೆರೆ ಮತ್ತು 30 ಕಟ್ಟೆಗಳಿಗೆ ನೀರು ತುಂಬಿಸುವ ಕಾಮಗಾರಿಗಾಗಿ ರೂ.70.00 ಕೋಟಿ ಮೊತ್ತದ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಸಚಿವರು ವಿವರಗಳನ್ನು ನೀಡಿದರು. ಇದೇ ರೀತಿ ರಂಗೇನಹಳ್ಳಿ ಏತ ನೀರಾವರಿಯ 2ನೇ ಹಂತದ ಕೆ.ಆರ್.ಪೇಟೆ ತಾಲ್ಲೂಕಿನ 11 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top