ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಸೇತುವೆ ಬಳಿ ಎರಡು ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 7 ಜನ ಸಾವನ್ನಪ್ಪಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ನಿನ್ನೆ ಬಕ್ರೀದ್ ಹಬ್ಬ ಮುಗಿಸಿಕೊಂಡು ಇಂದು ತುಂಗಭದ್ರಾ ಜಲಾಶಯ ನೋಡಲು ಬಳ್ಳಾರಿಯಿಂದ ಹೊರಟಿದ್ದ ಎರಡು ಕುಟುಂಬದವರು ಎರಡು ಆಟೋಗಳಲ್ಲಿ ತೆರಳಿದ್ದು, ಹೊಸಪೇಟೆ ಹತ್ತಿರದ ವಡ್ಡರಹಳ್ಳಿ ಸೇತುವೆ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಮೊದಲನೇ ಆಟೋ ಸೇತುವೆ ಮೇಲೆಯಿಂದ ಕೆಳಗೆ ಬಿದ್ದಿದ್ದು, ಆ ಆಟೋದಲ್ಲಿದ್ದ ಒಂದೇ ಕುಟುಂಬದ ಆರೂ ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಇನ್ನೊಂದು ಆಟೋದಲ್ಲಿದ್ದವರಲ್ಲಿ ಓರ್ವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಪಟ್ಟವರು ಬಳ್ಳಾರಿ ಮೂಲದ ಆಂದ್ರಾಳ್, ಕೌಲ್ ಬಜಾರ್‍ನ ಗೌತಮ ನಗರದವರು ಎಂದು ತಿಳಿದುಬಂದಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಇಬ್ಬರು ಮಕ್ಕಳು ಸೇರಿ ಓರ್ವ ಮಹಿಳೆಯನ್ನು ಬಳ್ಳಾರಿಯ ವಿಮ್ಸ್‍ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಶಾಸಕ ಗವಿಯಪ್ಪ ಭೇಟಿ:
ನಗರದ ಹೊರಭಾಗದಲ್ಲಿ ನಡೆದ ಘಟನೆ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಗವಿಯಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ವಡ್ಡರಹಳ್ಳಿ ಬಳಿ ಇರುವ ಸೇತುವೆ ಅಭಿವೃದ್ಧಿ ಆಗಬೇಕಿದೆ. ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸುವುದು ಹೆಚ್ಚಾಗಿದೆ. ಇಂದು ನಡೆದ ಈ ಘಟನೆ ಮನಸ್ಸಿಗೆ ನೋವಾಗಿದೆ. ಅವರಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ, ಸಚಿವ ನಾಗೇಂದ್ರ ಅವರು ಕೂಡ ಚರ್ಚೆ ಮಾಡಲಿದ್ದಾರೆ.