ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ: ಅನಿಲ್ ಕುಮಾರ್


ದೇವನಹಳ್ಳಿ: ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಶೂನ್ಯ ಕಸ ಉತ್ಪಾದನೆ ಕಡೆಗೆ ಹೆಜ್ಜೆ ಹಾಕೋಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳಾದ ಅನಿಲ್ ಕುಮಾರ್ ಅವರು ತಿಳಿಸಿದರು. ಸ್ವಚ್ಛ ಭಾರತ ಕಾರ್ಯಕ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಇಂದು ಜೂಮ್ ಆ್ಯಪ್ ಮೂಲಕ ಆಯೋಜಿಸಲಾಗಿದ್ದ “ಸಿಂಗಲ್ ಯುಸ್ ಪ್ಲಾಸ್ಟಿಕ್” ವೆಬಿನಾರ್ ಕಾರ್ಯಕ್ರಮದಲ್ಲಿ ಅವರು ಜಾಗೃತಿ ನುಡಿಗಳನ್ನಾಡಿದರು. ಕೋವಿಡ್ ಸೋಂಕು ಆವರಿಸಿದ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಪ್ಯಾಂಕಿಂಗ್ ನಿಂದ ಪ್ಲಾಸ್ಟಿಕ್ ಬಳಕೆಯು ಹೆಚ್ಚಾಗಿದ್ದು, ಒಂದು ಬಾರಿ ಬಳಸಿ ಬೀಸಾಡುವ ಪ್ಲಾಸ್ಟಿಕ್ ಉತ್ಪನ್ನಗಳಾದ ನೀರಿನ ಬಾಟಲ್, ಸ್ಪೂನ್, ತಂಪು ಪಾನೀಯದ ಬಾಟಲ್, ಔಷಧೀಯ ಬಾಟಲ್, ರ್ಯಾಪರ್, ಪ್ಲಾಸ್ಟಿಕ್ ವೈಪ್ಸ್, ಪ್ಲಾಸ್ಟಿಕ್ ಕೈ ಚೀಲಗಳ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತಿರುವುದರಿಂದ ಇದನ್ನು ನಿಯಂತ್ರಿಸುವ ಉದ್ದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಂದಿದೆ ಎಂದು ತಿಳಿಸಿದರು. 2019ರ ಅಂದಾಜಿನಂತೆ ಪ್ರತಿನಿತ್ಯ 29,400 ಟನ್ ಆಸುಪಾಸು ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಕೆರೆ, ಕುಂಟೆ, ಕಾಲುವೆಗಳು, ನದಿ, ಸಮುದ್ರಗಳಿಗೆ ಪ್ಲಾಸ್ಟಿಕ್ ಸೇರಿ ಜೀವರಾಶಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದರಲ್ಲದೆ, ಭೂಮಿಯ ಫಲವತ್ತತೆ ಹದಗೆಡುತ್ತಿದೆ ಹಾಗೂ ಅಂತರ್ಜಲಮರುಪೂರಣವಾಗದಿರುವ ಸಾಧ್ಯತೆಗಳಿವೆ ಎಂದು ತಿಳಿಸಿದರು. ಪ್ಲಾಸ್ಟಿಕ್ ಅನ್ನು ಸುಟ್ಟಾಗ ಅಪಾಯಕಾರಿ ಅನಿಲಗಳು ಹೊರಸೂಸುವುದರಿಂದ ರಾಸುಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ಮನುಷ್ಯರು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಈ ಕುರಿತು ಸ್ಥಳೀಯ ಹಂತದಲ್ಲಿ ಗ್ರಾಮ ಪಂಚಾಯಿತಿ, ಮುನ್ಸಿಪಾಲಿಟಿ ಅವರು ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಹೇಳಿದರು.


ಪ್ಲಾಸ್ಟಿಕ್ ಮರು ಬಳಕೆ ಘಟಕಗಳನ್ನು ನಿರ್ಮಿಸಲಾಗಿದ್ದು, ಪ್ಲಾಸ್ಟಿಕ್ ಕೈಚೀಲ, ಕವರ್ ಗಳು 50 ಮೈಕ್ರಾನ್ ಗಿಂತ ಹೆಚ್ಚಿರುವ ಇರುವ ಪ್ಲಾಸ್ಟಿಕ್ ಬ್ಯಾಗ್ ಅನ್ನು ಬಳಕೆ ಮಾಡಲು ಅನುಮತಿ ಇರುವುದರಿಂದ, ಇಂತಹ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ ಮರು ಬಳಕೆ ಮಾಡಲು ಹಾಗೂ ಪರಿಶೀಲಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯು ಒತ್ತು ನೀಡಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ಉತ್ಪತ್ತಿ ಆಗುವ ಹಂತದಲ್ಲಿಯೇ ಬೇರ್ಪಡಿಸಿ, ಮರು ಬಳಕೆ ಮಾಡಲು ಘಟಕಗಳಿಗೆ ನೀಡಬೇಕು ಎಂದರಲ್ಲದೆ, ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ಅನ್ನು ರಸ್ತೆ ಕಾಮಗಾರಿ ಹಾಗೂ ಕೆಲವೊಮ್ಮೆ ಸಿಮೆಂಟ್ ಉದ್ದಿಮೆಗೆ ಬಳಕೆ ಮಾಡಲಾಗುತ್ತದೆ ಎಂದರು. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಹಾಗೂ ಆಹಾರ ಪದಾರ್ಥಗಳ ಪ್ಯಾಕಿಂಗ್ ನಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ತಗ್ಗಿಸಿ, ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ಕೈಚೀಲಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆ ತಡೆಗೆ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ಸರ್ಕಾರವು 2016 ರಲ್ಲಿ ಹೊರಡಿಸಿದ ಆದೇಶದನ್ವಯ, ಕ್ಯಾರಿ ಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ಥರ್ಮಕೋಲ್ ಗಳ ಬಳಕೆಯನ್ನು ನಿಲ್ಲಿಸಲಾಗಿದ್ದು, ಗ್ರಾಮ ಪಂಚಾಯಿತಿಗಳು, ಮುನ್ಸಿಪಾಲಿಟಿ ವತಿಯಿಂದ ಸ್ಥಳೀಯ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top