ಸಿಎಂ ರಾಜೀನಾಮೆ ನೀಡಲಿ; ದದ್ದಲ್, ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯಲಿ: ಎನ್.ರವಿಕುಮಾರ್ ಆಗ್ರಹ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಭಾರಿ ಹಗರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್ ಮತ್ತು ಸಚಿವ ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುವಂತೆ ಹಾಗೂ ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದಾದ ನಂತರ ಒಂದು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದು ದಲಿತರ ಹಣ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣ ಎಂದರಲ್ಲದೆ, ಇನ್ನೂ ಬೇರೆ ಬೇರೆ ಇಲಾಖೆಗಳಲ್ಲೂ ಭ್ರಷ್ಟಾಚಾರ ಹಗರಣ ನಡೆದ ವಾಸನೆ ನಮಗೆ ಸಿಗುತ್ತಿದೆ. ಇವುಗಳ ಸಾಕ್ಷ್ಯಾಧಾರ ಸಂಗ್ರಹದ ಪ್ರಯತ್ನ ನಡೆದಿದೆ ಎಂದು ಎಚ್ಚರಿಸಿದರು.

ಅತ್ಯಂತ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಪತ್ರದಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣದ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದ್ದರು ಎಂದರು.

ಇದೀಗ ಲೆಕ್ಕಾಧಿಕಾರಿ ಪರಶುರಾಮ್ ಅವರು 24ರಂದು ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅವರನ್ನು ಮುಖ್ಯಮಂತ್ರಿಗಳು ರಕ್ಷಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಭ್ರಷ್ಟರ ರಕ್ಷಣೆಯ ಖಾತೆಯನ್ನು ಮುಖ್ಯಮಂತ್ರಿಗಳು ಹೊಸದಾಗಿ ಸೇರಿಸಿಕೊಂಡಿದ್ದಾರಾ ಎಂದೂ ಅವರು ಕೇಳಿದರು. ಸಿದ್ದರಾಮಯ್ಯನವರು ಭ್ರಷ್ಟರ ರಕ್ಷಣಾ ಖಾತೆಯ ಮುಖ್ಯಮಂತ್ರಿ ಎಂದು ಆರೋಪಿಸಿದರು. ಸಿದ್ದರಾಮಯ್ಯನವರು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದರಲ್ಲದೆ, ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ನಡೆಸಿದ ಸಭೆಯ ಫೂಟೇಜ್ ಅನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಪರಶುರಾಮ್ ಅವರು ಈ ಫೂಟೇಜ್, ಸಾಕ್ಷ್ಯಾಧಾರವನ್ನು ರಕ್ಷಿಸಲು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಭ್ರಷ್ಟಾಚಾರ ಹಗರಣ ಕುರಿತು ರಾಹುಲ್ ಗಾಂಧಿಯವರ ಉತ್ತರ ಏನು?

ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ಶೇ 40 ಕಮಿಷನ್ ಇತ್ತು ಎಂದು ಆರೋಪಿಸಿದ ಸಂಬಂಧ ಬಿಜೆಪಿ ದೂರಿನಡಿ ಕೋರ್ಟ್ ವಿಚಾರಣೆಗೆ ನಿನ್ನೆ ರಾಹುಲ್ ಗಾಂಧಿಯವರು ಹಾಜರಾಗಿದ್ದರು. ಈಗ ಅವರು ಜಾಮೀನು ತೆಗೆದುಕೊಂಡಿದ್ದಾರೆ. ಶೇ 40 ಕಮಿಷನ್ ಅನ್ನು ಅವರು ಸಾಬೀತು ಪಡಿಸಬೇಕಿದೆ. ಕಾಂಗ್ರೆಸ್ಸಿನವರದು ಸತ್ಯ ಹರಿಶ್ಚಂದ್ರರ ಸರಕಾರ ಎನ್ನುತ್ತಿದ್ದರು. ಈ ಸರಕಾರದಲ್ಲಿ 187 ಕೋಟಿ ಭ್ರಷ್ಟಾಚಾರ ಆದ ಬಗ್ಗೆ ರಾಹುಲ್ ಗಾಂಧಿಯವರು ಏನು ಹೇಳುತ್ತಾರೆ ಎಂದು ರವಿಕುಮಾರ್ ಅವರು ಪ್ರಶ್ನೆಯನ್ನು ಮುಂದಿಟ್ಟರು.

ದಲಿತರ ಹಣ ಲೂಟಿ ಬಗ್ಗೆ ಏನು ಹೇಳುತ್ತಾರೆ? 11 ಸಾವಿರ ಕೋಟಿಗೂ ಹೆಚ್ಚು ಹಣ ಬೇರೆ ಇಲಾಖೆಗೆ ವರ್ಗಾವಣೆ ಮಾಡಿದ್ದರ ಕುರಿತು ಅವರು ಉತ್ತರ ಏನು? ದಲಿತರ ಹಣವನ್ನೇ ಈ ಸರಕಾರ ಲೂಟಿ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದರು. ಈ ಕುರಿತು ಸುರ್ಜೇವಾಲಾ ಅವರೂ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಕರ್ನಾಟಕದಿಂದ ರಾಹುಲ್ ಗಾಂಧಿಯವರಿಗೆ, ಸುರ್ಜೇವಾಲಾರಿಗೂ ಪಾಲು ಹೋಗಿದೆ ಎಂದು ಆರೋಪಿಸಿದರು.

ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಬ್ಬರು ಸಾಕ್ಷ್ಯಾಧಾರ ಕುರಿತು ಆತಂಕ ಸೂಚಿಸಿದ್ದಾರೆ. ಈ ರಾಜ್ಯದಲ್ಲಿ ಅಧಿಕಾರಿಗಳ ಸಾವಿಗೆ ಏನೇನೂ ಬೆಲೆ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಭೆ ನಡೆಸಿ ಬಹುಕೋಟಿ ಹಣ ವರ್ಗಾವಣೆಗೆ ಕಾರಣಕರ್ತರಾಗುವ ನಿರ್ಧಾರ ಕೈಗೊಂಡ ಶರಣಪ್ರಕಾಶ್ ಪಾಟೀಲರ ರಾಜೀನಾಮೆಯನ್ನೂ ಪಡೆಯಿರಿ ಎಂದು ಆಗ್ರಹಿಸಿದರು.

ಈ ಹಗರಣ ಸಂಘಟಿತ ಅಪರಾಧ..

 

ಈ ಹಗರಣ ಸಂಘಟಿತ ಅಪರಾಧ. ಇದೊಂದು ಅಂತರಾಜ್ಯ ಮಟ್ಟದ ಅಪರಾಧ ಹಗರಣ. ತೆಲಂಗಾಣಕ್ಕೆ ಹಣ ಕಳುಹಿಸಿದ್ದಾರೆ. ಆದ್ದರಿಂದ ಸಿಎಂ ಅವರ ರಾಜೀನಾಮೆ ಅಗತ್ಯ ಎಂದು ರವಿಕುಮಾರ್ ಅವರು ಒತ್ತಾಯಿಸಿದರು. ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಕನಿಷ್ಠ ನೈತಿಕತೆಯೂ ಇಲ್ಲ. ಚಂದ್ರಶೇಖರ್ ಅವರ ಆತ್ಮಹತ್ಯೆಯ 12 ದಿನಗಳ ನಂತರ ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದಾರೆ. ಶರಣಪ್ರಕಾಶ್ ಪಾಟೀಲರ ರಾಜೀನಾಮೆಯನ್ನು ಇನ್ನೂ ಪಡೆದಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಇದೇ ವೇಳೆ ಬಿಜೆಪಿ ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top