ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ವಿರುದ್ಧ ನಿರ್ಣಯ ಮಂಡನೆಗೆ ಬಿಜೆಪಿ ಬೆಂಬಲ ನೀಡಲಿ: ಡಿ ಕೆ ಶಿವಕುಮಾರ್

ಬೆಂಗಳೂರು : ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ವಿರುದ್ದ ನಿರ್ಣಯ ಮಂಡಿಸಿದ್ದೇವೆ. ಬಿಜೆಪಿಯವರು ರಾಜ್ಯದ ಬೆಂಬಲಕ್ಕೆ ನಿಲ್ಲಲಿಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.

 

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಮಂಡನೆ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು;

 “ನಮ್ಮ ತೆರಿಗೆ ನಮ್ಮ ಹಕ್ಕುನಮ್ಮ ಪಾಲಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರ್ಣಯ ಮಂಡಿಸಿ ಸದನದಲ್ಲಿ ಅಂಗೀಕಾರ ಮಾಡಲಾಗಿದೆ. ಇದನ್ನು ಕೇಂದ್ರಕ್ಕೆ ಕಳುಹಿಸಲು ತೀರ್ಮಾನ ಮಾಡಿದ್ದೇವೆ. ಆದರೆ ಬಿಜೆಪಿಯವರು ರಾಜ್ಯದ ಬೆಂಬಲಕ್ಕೆ ಬಂದಿಲ್ಲ”.

ನಾವು ಕಾನೂನು ಚೌಕಟ್ಟಿನಲ್ಲೇ ನಿರ್ಣಯ ಮಂಡಿಸಿದ್ದೇವೆ. ಇದೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ, ಸಿದ್ದರಾಮಯ್ಯ ಅವರು ಮತ್ತು ಕೃಷ್ಣಬೈರೇಗೌಡರು ಮಾಡಿದ ಪ್ರಸ್ತಾವನೆಗೆ ಉತ್ತರ ಕೊಡುತ್ತಾ ನಾವೆಲ್ಲಾ ಸೇರಿ ಒಟ್ಟಿಗೆ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದರು. ಅವರ ಮಾತಿನಂತೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನೋವನ್ನು ಹೇಳಿದ್ದೇವೆಎಂದರು.

ಬಿಜೆಪಿ, ಜೆಡಿಎಸ್ ಚರ್ಚೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ

 

ರಾಜ್ಯಸಭೆ ಚುನಾವಣೆ ಸಂಬಂಧ ಕುಮಾರಸ್ವಾಮಿ ಮತ್ತು ಅಮಿತ್ ಶಾ ಭೇಟಿ ವಿಚಾರ ಕೇಳಿದಾಗ ಇಬ್ಬರೂ ಏನೇನು ಚರ್ಚೆ ಮಾಡಿದ್ದಾರೆ ಎನ್ನುವ ಅರಿವು ನಮಗಿದೆ. ಯಾವ, ಯಾವ ಶಾಸಕರಿಗೆ ದೂರವಾಣಿ ಕರೆ ಮಾಡಿ ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಶಾಸಕರ ಸಂಬಂಧಿಕರು, ಸ್ನೇಹಿತರ ಮೂಲಕ ಏನೇನು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ಅವರಿಗೆ ಗೊತ್ತಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಿದೆ. ಈ ವಿಚಾರಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಮೇಲೆ ನಾವು ನಿಗವಿಟ್ಟಿದ್ದೇವೆಎಂದರು. 

ಇತರೆ ಪಕ್ಷದವರು ನಮ್ಮ ಸಂಪರ್ಕದಲ್ಲಿ ಇದ್ದಾರೆ; ಹೆಸರು ಬಹಿರಂಗ ಮಾಡುವುದಿಲ್ಲ

ಕಾಂಗ್ರೆಸ್ ಶಾಸಕರಿಗೆ ದೆಹಲಿಯಿಂದ ಕರೆ ಬಂದಿದೆಯೇ ಎಂದು ಕೇಳಿದಾಗ “138 ಜನ ಶಾಸಕರು ನಮ್ಮ ಜೊತೆ ಇದ್ದಾರೆ. ಜನಾರ್ಧನ ರೆಡ್ಡಿ ಅವರ ಬಳಿಯೂ ಮತ ಹಾಕುವಂತೆ ಮನವಿ ಮಾಡುತ್ತೇನೆ. ಅಧಿವೇಶನ ಮುಗಿದ ನಂತರ ಹಿಲ್ಟನ್ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ಇದೆ. ಅಲ್ಲಿ ಅಣಕು ಮತದಾನ ನಡೆಸುತ್ತೇವೆ. ನಮ್ಮ ಬಳಿ ಹೆಚ್ಚುವರಿ ಮತಗಳಿವೆ. ನಮ್ಮ ಮನೆಯನ್ನು ಎಷ್ಟು ಬಿಗಿ ಮಾಡಿಕೊಳ್ಳಬೇಕೊ ಅದನ್ನು ಮಾಡುತ್ತೇವೆ. ಇತರೆ ಪಕ್ಷದವರು ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ, ಅದನ್ನು ಬಹಿರಂಗಗೊಳಿಸುವುದಿಲ್ಲ. ಅವರ ಜೀವನ ಹಾಳು ಮಾಡಲು ನನಗೆ ಇಷ್ಟವಿಲ್ಲಎಂದು ತಿಳಿಸಿದರು.

 

ಸಚಿವ ಎಚ್.ಸಿ.ಮಹದೇವಪ್ಪ ಅವರು ದಲಿತ ಸಿಎಂ ವಿಚಾರವನ್ನು ಮುನ್ನೆಲೆಗೆ ತಂದಿರುವ ಬಗ್ಗೆ ಕೇಳಿದಾಗ ಸೋಮವಾರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಬರುತ್ತಾರೆ ಅವರನ್ನು ಪ್ರಶ್ನಿಸಿಎಂದರು.

ಐಟಿ ಕಂಪೆನಿಗಳಲ್ಲಿ ಕನ್ನಡ ಭಾಷಿಕರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎನ್ನುವ ವಿಚಾರವಾಗಿ ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಯಾವುದೇ ನಿಯಮಗಳು ಇಲ್ಲ. ಒಂದಷ್ಟು ಕನ್ನಡ ಸಂಘಟನೆಯ ಸದಸ್ಯರು ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆಎಂದರು.

 

ಮೇಕೆದಾಟು ವಿಚಾರವಾಗಿ ಕೇಳಿದಾಗ ರಾಜ್ಯಸಭೆ ಚುನಾವಣೆಯಾದ ನಂತರ ಅದರ ಬಗ್ಗೆ ಚರ್ಚೆ ಮಾಡೋಣ” ಎಂದು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top