ಬೆಂಗಳೂರು : ಶಾಸಕರು ಪ್ರತಿವರ್ಷ ಆಸ್ತಿ ವಿವರ ಘೋಷಿಸಬೇಕೆಂದು ಲೋಕಾಯುಕ್ತ ಕಾನೂನು ಹೇಳುತ್ತದೆ. ಕಾನೂನು ಎಲ್ಲರಿಗೂ ಒಂದೇ. ಅದು ಲೋಕಾಯುಕ್ತರಿಗೂ ಅನ್ವಯಿಸಬೇಕಲ್ಲವೇ ?. ಹೌದು ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಪ್ರತಿವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಿಸುವ ಕುರಿತಾದ ಕಾನೂನು ಜಾರಿ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿರುವ ಲೋಕಾಯುಕ್ತರಿಗೂ ಕೂಡ ಶಾಸಕರಂತೆ ಆಸ್ತಿ ವಿವರಗಳನ್ನು ಪ್ರಕಟಿಸುವ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಪ್ರಾರಂಭವಾಗಿದೆ.

ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಈ ಕುರಿತು ಮುಖ್ಯಮಂತ್ರಿ ಅವರಿಗೆ ಜುಲೈ 12 ರಂದು ಬರೆದಿದ್ದ ಪತ್ರವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ರವಾನಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಆದರೆ ಶಾಸನ ರಚನಾ ಇಲಾಖೆ ಈ ವಿಷಯ ತಮಗೆ ಸಂಬಂಧಿಸಿದ್ದಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ವ್ಯಾಪ್ತಿಗೆ ರವಾನಿಸಿದೆ. ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳಬೇಕಾಗಿ ಸಲ್ಲಿಸಿದ್ದ ಮನವಿ ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಗಳ ಪ್ರವೇಶಿಸಿದೆ.