ಹನುಮಭಕ್ತ ಯುವಕರ ಮೇಲೆ ಲಾಠಿಚಾರ್ಜ್;‌ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮಂಡ್ಯದ ಕೆರಗೋಡು ಗ್ರಾಮದ ಯುವಕರ ಮೇಲೆ ದಬ್ಬಾಳಿಕೆ ನಡೆಸಿ ಲಾಠಿಚಾರ್ಜ್‌ ಮಾಡಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕೆರಗೋಡು ಗ್ರಾಮದಲ್ಲಿ ಏನೆಲ್ಲಾ ಧ್ವಂಸ ಮಾಡಲಾಗಿಯೋ ಅದೆಲ್ಲಾ ಯಥಾಸ್ಥಿತಿಗೆ ಬರಬೇಕು. ನಾನು ಕೆರಗೋಡು ಗ್ರಾಮದ ಯುವಕರ ಜತೆ ಇದ್ದೇನೆ ಎಂದು ಘೋಷಣೆ ಮಾಡಿದ್ದಾರೆ.

ಮಂಡ್ಯದ ಕೆರಗೋಡುನಲ್ಲಿ ಹನುಮಧ್ವಜದ ವಿಷಯದಲ್ಲಿ ಪೊಲೀಸರು, ರಾಜ್ಯ ಕಾಂಗ್ರೆಸ್ ಸರಕಾರದ ವರ್ತನೆ ಅಕ್ಷಮ್ಯ, ಅನಾಗರೀಕ. ಕಾಂಗ್ರೆಸ್‌ʼನ ಕಣಕಣದಲ್ಲೂ ಜನದ್ವೇಷವೇ ತುಂಬಿದೆ. ಆ ಮನಃಸ್ಥಿತಿಯನ್ನು ಮತ್ತೆಮತ್ತೆ ರುಜುವಾತು ಮಾಡುತ್ತಿದೆ. ಮುಗ್ಧ ಯುವಕರ ಮೇಲೆ ಲಾಠಿಚಾರ್ಜ್ ಮಾಡುವವರೆಗೂ ಆ ದ್ವೇಷ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಅವರು

ಕೆರಗೋಡುನಲ್ಲಿ ಯುವಕರು ತಾವೇ ಹಣ ಸಂಗ್ರಹಿಸಿ ಭಕ್ತಿಯಿಂದ ಸ್ಥಾಪಿಸಿದ ಹನುಮ ಧ್ವಜಸ್ತಂಭ ಧ್ವಂಸ ಮಾಡಿ ಧ್ವಜ ಇಳಿಸಿದ್ದು, ಪ್ರಶ್ನಿಸಿದ ಹನುಮಭಕ್ತ ಯುವಕರ ಮೇಲೆ ಲಾಠಿಚಾರ್ಜ್‌ ಮಾಡಿರುವ ಪೊಲೀಸರ ವರ್ತನೆ ಅತಿರೇಖದ್ದು. ಲಾಠಿಚಾರ್ಜ್‌ ಮಾಡಲು ಇವರಿಗೆ ಆದೇಶಿಸಿದ ಆ ಪ್ರಭೃತಿ ಯಾರು? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

 

ಯುವಕರು ಪಂಚಾಯಿತಿ ಅನುಮತಿ ಪಡೆದೇ ದ್ವಜಸ್ತಂಭ ನಿರ್ಮಿಸಿದ್ದಾರೆ. ಧೈರ್ಯ, ಸಾಹಸ, ನಂಬಿಕೆ, ನಿಷ್ಠೆ, ಭಕ್ತಿಯ ಪ್ರತೀಕನಾದ ಹನುಮ ದೇವರು ಯುವಕರ ಆದರ್ಶ. ಹಳ್ಳಿಗರ ಭಾವನೆಗಳನ್ನು ಗೌರವಿಸದಷ್ಟು ಅಸಹಿಷ್ಣುತೆಯ ಉರಿಯಲ್ಲಿ ಸರಕಾರ ಬೇಯುತ್ತಿದೆ. ಶಾಸಕರನ್ನು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಮಾಡಬೇಕೆ? ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ.

ಕರ್ನಾಟಕ ಹನುಮ ಜನ್ಮಸ್ಥಳ. ನನ್ನ ಹೆಸರಿನಲ್ಲೂ ರಾಮನಿದ್ದಾನೆ ಎಂದು ಹುಸಿಭಕ್ತಿಯ ಢೋಂಗಿಗಳಿಗೆ ಹನುಮಭಕ್ತಿ ಅರ್ಥವಾಗುವುದೇ? ವೋಟಿಗಾಗಿ, ಅಧಿಕಾರಕ್ಕಾಗಿ ಜಾತಿ-ಧರ್ಮಗಳನ್ನು ಒಡೆದು ದೇವರನ್ನೂ ರಾಜಕಾರಣಕ್ಕೆ ಎಳೆದು ತರುತ್ತಿರುವುದು, ಓಲೈಕೆ ರಾಜಕಾರಣದ ವಿಕೃತಿ ಎಂದು ಅವರು ಕಿಡಿಕಾರಿದ್ದಾರೆ.

ಪೊಲೀಸರು ಹನುಮ ಭಕ್ತರ ಮೇಲೆ ಲಾಠಿಚಾರ್ಜ್‌ ಮಾಡಿದ್ದು, ಏಕಪಕ್ಷೀಯವಾಗಿ ಹನುಮಧ್ವಜ ತೆರವು ಮಾಡಿದ್ದು ತಪ್ಪು. ಕೂಡಲೇ ಅಲ್ಲಿ ಎಲ್ಲವೂ ಯಥಾಸ್ಥಿತಿಗೆ ಬರಲೇಬೇಕು. ಗ್ರಾಮದಲ್ಲಿ ನಿಷೇಧಾಜ್ಞೆ ವಿಧಿಸಿ ಭಯಭೀತಿ ಉಂಟು ಮಾಡುವ ಅಗತ್ಯ ಇರಲೇ ಇಲ್ಲ. ಕೆರಗೋಡಿನ ಎಲ್ಲಾ ಸಮುದಾಯದ ಜನರೂ ಹನುಮಧ್ವಜ ಸ್ಥಾಪನೆಗೆ ಬೆಂಬಲ ಸೂಚಿಸಿದ್ದರೂ, ಓಲೈಕೆ ಕಾಂಗ್ರೆಸ್‌ ಸರಕಾರ ಹನುಮ ವಿರೋಧಿ ಕೆಲಸ ಮಾಡಿದೆ. ತನ್ನ ಹಳೆಚಾಳಿಯನ್ನು ಕಾಂಗ್ರೆಸ್ ಬದಲಿಸಿಕೊಳ್ಳದಿದ್ದರೆ ಈ ಸರಕಾರದ ವಿರುದ್ಧ ಇಡೀ ರಾಜ್ಯವೇ ದಂಗೆ ಏಳಬೇಕಾಗುತ್ತದೆ. ನಾನು ಕರೆಗೋಡಿನ ಯುವಕರ ಜತೆ ಇದ್ದೇನೆ, ಇರುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧನೆ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿಗಳು; ರಾಷ್ಟ್ರಪತಿಗಳಿಗೆ ಅಪಚಾರ ಎಸಗಿರುವ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯ ಮಾಡಿದ್ದಾರೆ.

ಆಚಾರಗೆಟ್ಟ ಮುಖ್ಯಮಂತ್ರಿ:

ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಎಂದು ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು ಎಂದಿರುವ ಕುಮಾರಸ್ವಾಮಿ ಅವರು, ಸಿಎಂ ಬಳಸಿರುವ ಪದವನ್ನು ಬರೆಯಲಾರೆ ಎಂದು ಎಂದಿದ್ದಾರಲ್ಲದೆ, ಸಿದ್ದರಾಮಯ್ಯ ಆಚಾರಗೆಟ್ಟ ಮುಖ್ಯಮಂತ್ರಿ ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಡೋಂಗೀ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಮಾನ್ಯ ರಾಜ್ಯಪಾಲರೇ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು. ಇದು ನನ್ನ ಆಗ್ರಹ ಎಂದಿದ್ದಾರೆ ಕುಮಾರಸ್ವಾಮಿ ಅವರು.

ಶೋಷಿತರ ಜಾಗೃತಿ ಸಮಾವೇಶದಲ್ಲೇ ಅಪಮಾನ:

ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊತ್ತ ಮೊದಲ ರಾಷ್ಟ್ರಪತಿಗಳು, ಅದರಲ್ಲಿಯೂ ಮಹಿಳೆ.. ಶೋಷಿತರ ಜಾಗೃತಿ ಸಮಾವೇಶದಲ್ಲೇ ಅವರಿಗೆ ಮುಖ್ಯಮಂತ್ರಿ ಅಪಮಾನ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವಕೀಲರಂತೆ, ಸ್ವಯಂಘೋಷಿತ ಸಂವಿಧಾನ ತಜ್ಞರಂತೆ.. ನಾಚಿಕೆಯಾಗಬೇಕು ಇವರಿಗೆ. ಸಾರ್ವಜನಿಕ ವೇದಿಕೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಮುಖ್ಯಮಂತ್ರಿಯೊಬ್ಬರು ಸಂಬೋಧಿಸುವ ರೀತಿಯೇ ಇದು. ಸಿದ್ದರಾಮಯ್ಯನವರ ನಡವಳಿಕೆ ಕರ್ನಾಟಕಕ್ಕೆ ಅಂಟಿದ ಅಳಿಸಲಾಗದ ಕಳಂಕ. ಅವರ ಈ ಕೀಳುಮಾತು ದೇಶಕ್ಕೆ, ಸಂವಿಧಾನಕ್ಕೆ ಆಗಿರುವ ಘೋರ ಅಪಚಾರ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಶನಿವಾರದಂದು ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

 

ಮಾತೆದ್ದಿದರೆ ಸಂವಿಧಾನ, ಪ್ರಜಾಪ್ರಭುತ್ವ, ವಕೀಲಿಕೆ ನಮ್ಮಪ್ಪನ ಮನೆ ಆಸ್ತಿ ಎಂದು ಜಾಗಟೆ ಹೊಡೆಯುವ ಸಿದ್ದರಾಮಯ್ಯನವರು ಮಾನ, ಮರ್ಯಾದೆ, ಮಹಿಳೆಯರ ಮೇಲೆ ಗೌರವ ಏನಾದರೂ ಇಟ್ಟುಕೊಂಡಿದ್ದರೆ, ಈ ಕ್ಷಣದಲ್ಲಿಯೇ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top