ಶ್ರಮ ಸಂಸ್ಕೃತಿಗೆ ಅಂತರಾಷ್ಟ್ರೀಯ ಮನ್ನಣೆ ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ

ಹೊಸಪೇಟೆ : ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಲಿದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕ. ಆದಿ ಕಾಲದ ಮಾನವನ ಸುಪ್ತ ಪ್ರಜ್ಞೆಯಲ್ಲಿ ಅರಳಿದ ಕಲೆಗಳು ಇಂದು ತಂತ್ರಜ್ಞಾನದ ಅತ್ಯುನ್ನತ ಮಟ್ಟ ತಲುಪಿವೆ. ತಾಂತ್ರಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳಿಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಸಾಕ್ಷಿಯಾಗಿದೆ. 

ಸೋಮವಾರ ವಿಶ್ವವಿಖ್ಯಾತ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಲಂಡನ್ ಗಿನ್ನಿಸ್ ಬುಕ್ ಆಪ್ ರೆಕಾರ್ಡ್ನ ಅಧಿಕೃತ ತೀರ್ಪುಗಾರ ರಿಷಿನಾಥ್ ಲಂಬಾಣಿ ಕಸೂತಿ ಕಲೆಗೆ ಸಂದ ಗಿನ್ನಿಸ್ ರೆಕಾರ್ಡ್ ಪ್ರಮಾಣ ಪತ್ರವನ್ನು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಅವರಿಗೆ ಹಸ್ತಾಂತರಿಸಿದರು. 

ಸಂಡೂರಿನ ಲಂಬಾಣಿ ಕಲಾ ಕೇಂದ್ರದ 450ಕ್ಕೂ ಹೆಚ್ಚು ಮಹಿಳೆಯರು 1755 ವಿವಿಧ ರಚನಾ ಕ್ರಮವುಳ್ಳ ಹಸ್ತದಿಂದ ರಚಿಸಿದ ಕಸೂತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಈ ಹಿಂದಿನ ಗಿನ್ನೆಸ್ ದಾಖಲೆಯಲ್ಲಿ 1000 ಕಸೂತಿ ಕಲೆಗಳನ್ನು ಪ್ರದರ್ಶನಕ್ಕೆ ಇರಿಲಾಗಿತ್ತು. 

ಲಂಬಾಣಿ ಕಸೂತಿಗೆ ಜಿ.ಐ. ಟ್ಯಾಗ್

1988 ರಲ್ಲಿ ಸಂಡೂರಿನಲ್ಲಿ ಕೇವಲ 5 ಲಂಬಾಣಿ ಮಹಿಳೆಯರಿಂದ ಆರಂಭವಾದ ಲಂಬಾಣಿ ಕುಶಲ ಕಲಾ ಕೇಂದ್ರ ಇಂದು 600 ಕುಶಲ ಕಸೂತಿ ಕಲೆ ಕಲಿತ ಮಹಿಳೆಯರಿಂದ ನಡೆಸಲ್ಪಡುತ್ತಿದೆ. ಪಾರಂಪರಿಕವಾಗಿ ಮನೆಗಳು ಹಾಗೂ ತಾಂಡಗಳಿಗೆ ಸೀಮಿತವಾಗಿದ್ದ ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿ.ಐ.(ಗ್ಲೋಬಲ್ ಇಂಡಿಕೇಷನ್) ಟ್ಯಾಗ್ ಪಡೆಯುವಲ್ಲಿ ಸಂಡೂರಿನ ಕಲಾ ಕೇಂದ್ರ ಯಶಸ್ವಿಯಾಗಿದೆ. ವಿವಿಧ ರೀತಿಯ 29 ಕಲಾತ್ಮಕ ಕಸೂತಿಗಳನ್ನು ಇಲ್ಲಿ ಮಾಡಲಾಗುತ್ತಿದೆ. ಈ ಕೇಂದ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ, ಯುನಿಸ್ಕೋ ಮನ್ನಣೆ ಹಾಗೂ ಕಮಲಾದೇವಿ ಛಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ. ಈಗ ಹಂಪಿಯಲ್ಲಿ ಜಿ-20 ಶೃಂಗ ಸಭೆಯಲ್ಲಿ ಗಿನ್ನಿಸ್ ದಾಖಲೆಯು ಮುಡಿಗೇರಿದೆ.

ಲಂಬಾಣಿ ಕಸೂತಿಗೆ ಉದ್ದಿಮೆ ರೂಪ

ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಉದ್ದೇಶದಂತೆ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಆರ್ಥಿಕತೆಯ ಪ್ರಚಾರ ಮಾಡುವ ನಿಟ್ಟಿನಲ್ಲಿ ಲಂಬಾಣಿ ಕಸೂತಿ ವಸ್ತು ಪ್ರದರ್ಶನವನ್ನು ಹಂಪಿಯಲ್ಲಿ ಏರ್ಪಡಿಸಲಾಗಿದೆ. ಲಂಬಾಣಿ ಕಸೂತಿಗೆ ಉದ್ದಿಮೆ ರೂಪ ನೀಡಿ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಈ ಸಂದರ್ಭದಲ್ಲಿ ಹೇಳಿದರು. 

ಹಂಪಿ ವಿಜಯನಗರ ಸುವರ್ಣಯುಗ ಕಂಡ ಸಾಮ್ರಾಜ್ಯವಾಗಿ ಇತಿಹಾಸದಲ್ಲಿ ದಾಖಲಾಗಿದೆ. 15-16ನೇ ಶತಮಾನದ ಬಹುದೊಡ್ಡ ಪುರಾತನ ಶಿಲ್ಪಕಲೆ, ವಾಸ್ತುಶಿಲ್ಪದಲ್ಲಿ ಜ್ಞಾನ ತಂತ್ರಜ್ಞಾನ ಇತ್ತು. ಸಾಮ್ರಾಜ್ಯ ಶ್ರೀಮಂತವಾಗಿರಲು ಆಳುವವರಲ್ಲಿ ಮತ್ತು ಪ್ರಜೆಗಳಲ್ಲಿ ಅಷ್ಟೇ ಪ್ರಾಮಾಣಿಕತೆ ಇತ್ತು. ದೇಶ-ವಿದೇಶಗಳ ಇತಿಹಾಸಕಾರರು ಸಹ ಇದರ ಕುರಿತು ಉಲ್ಲೇಖಿಸಿದ್ದಾರೆ. ಹಂಪಿಯ ಸ್ಮಾರಕಗಳು ಇಂದಿಗೂ ಆ ವೈಭವನ್ನು ಸಾರುತ್ತಿವೆ ಎಂದು ಕೇಂದ್ರ ಸಚಿವ ಪಲ್ಹಾದ್ ಜೋಶಿ ಸ್ಮರಿಸಿದರು. 

ಜಾಗತಿಕ ಜೋಡಣೆಗೆ ಮಾದರಿ ಕಸೂತಿ ಕಲೆ 

ಹಲವು ತುಣುಕುಗಳು ಸೇರಿ ಕಸೂತಿ ಕಲೆಯಲ್ಲಿ ಸುಂದರ ಕಲಾಕೃತಿಗಳು ಆಗುವಂತೆ, ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳು ಒಂದಾಗಬೇಕು ಎಂಬ ತತ್ವವನ್ನು ಲಂಬಾಣಿ ಕಸೂತಿ ಕಲೆ ಜಗತ್ತಿಗೆ ಸಾರುತ್ತಿದೆ. ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವಿವಿಧ ದೇಶಗಳ ಪ್ರತಿನಿಧಿಗಳು ಲಂಬಾಣಿ ಕಸೂತಿ ಬಟ್ಟೆಗಳನ್ನು ಹಿಡಿದು ಲಂಬಾಣಿ ಮಹಿಳೆಯರ ಜೊತೆ ಪೋಟೋ ಸಾಕ್ಷೀಕರಿಸಿದರು. 

ಲಂಬಾಣಿ ನೃತ್ಯದ ಮೂಲಕ ಜಿ-20 ಪ್ರತಿನಿಧಿಗಳಿಗೆ ಸಾಂಪ್ರದಾಯಿಕ ಸ್ವಾಗತ

ವಸ್ತು ಪ್ರದರ್ಶನಕ್ಕಾಗಿ ಹಂಪಿಯ ಎದುರು ಬಸವಣ್ಣ ವೇದಿಕೆ ಬಳಿ ಆಯೋಜಿಸಿದ್ದ ಮಳಿಗೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳಿಗೆ ಲಂಬಾಣಿ ನೃತ್ಯದ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. 

ವಸ್ತು ಪ್ರದರ್ಶನ ಸ್ಥಳಕ್ಕೆ ಪ್ರತಿನಿಧಿಗಳು ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಲಂಬಾಣಿ ಮಹಿಳೆಯರು ತಲೆ ಮೇಲೆ ಮಣ್ಣಿನ ಹೂಕುಂಡ ಹೊತ್ತು ತಮಟೆ ವಾದನಕ್ಕೆ ಹೆಜ್ಜೆ ಹಾಕುತ್ತಾ ಸ್ವಾಗತ ಕೋರಿದರು. ಅತ್ಯುನ್ನತ ಪ್ರತಿನಿಧಿಗಳಿಗೆ ಲಂಬಾಣಿ ಮಹಿಳೆಯರ ಸಾಂಪದ್ರಾಯಿಕ ತೊಡುಗೆ, ನೃತ್ಯ ಗಮನಸೆಳೆದವು.

ಸಂಡೂರಿನ ಕುಶಲ ಕಲಾಕೇಂದ್ರದ ಶಾಂತಾಬಾಯಿ ಮಾತನಾಡಿ ಕಳೆದ 29 ವರ್ಷಗಳಿಂದ ಈ ಕೇಂದ್ರದಲ್ಲಿ ಲಂಬಾಣಿ ಮತ್ತು ಕಸೂತಿಯನ್ನು ಮಾಡುತ್ತಿರುವೆ, ರಾಷ್ಟಿçÃಯ ಮನ್ನಣೆ ಪಡೆದ ನಮ್ಮ ಕಲಾಕೇಂದ್ರ ಇಂದು ಗಿನ್ನೆಸ್ ದಾಖಲೆಗೆ ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಶೃತಿ ಮುನಿಯಪ್ಪ ಸಂಸ್ಥೆ ಬೆಳೆದ ಬಂದು ಹಾದಿಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕಲಬುರ್ಗಿ ಸಂಸದ ಉಮೇಶ್ ಜಾಧವ್, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ, ವಿವಿಧ ದೇಶಗಳಿಂದ ಆಗಮಿಸಿದ ಜಿ-20ಯ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೆ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಬಿ.ಎಲ್. ಸಂಡೂರು ಲಂಬಾಣಿ ಕಲಾ ಕೇಂದ್ರದ ನಿರ್ದೇಶಕಿ ಸೂರ್ಯಪ್ರಭಾ ಘೋರ್ಪಡೆ, ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top