ಸರಕಾರದ ರಾಜೀನಾಮೆಗೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಪಕ್ಷವು ಸಂವಿಧಾನದ ರಕ್ಷಣೆ ಮಾಡುತ್ತಿದೆಯೇ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶ್ನಿಸಿದರು. ಈ ಸರಕಾರ ತಕ್ಷಣ ರಾಜೀನಾಮೆ ಕೊಡಬೇಕಾದ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.

 

ನಗರದ ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಪ್ರಶ್ನೆಗೆ ಕಾಂಗ್ರೆಸ್ಸಿಗರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರಕಾರವು ಇಲ್ಲಿನವರೆಗೆ ಭಯೋತ್ಪಾದಕರಿಗೆ ಹೊರಗಿನಿಂದ ಬೆಂಬಲ ಕೊಡುತ್ತಿತ್ತು. ಭಯೋತ್ಪಾದಕರನ್ನು ಅವರು ಆರೋಪಿಗಳಷ್ಟೇ, ಅಪರಾಧಿಗಳಲ್ಲ ಎನ್ನುತ್ತಿದ್ದರು. ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ವ್ಯಕ್ತಿ ನಾಸಿರ್ ಹುಸೇನ್ ಕೂಡ ಮಾಧ್ಯಮದವರಿಗೆ ಬೈಯ್ಯುವ ಕೆಲಸ ಮಾಡಿದ್ದಾರೆ ಎಂದು ಖಂಡಿಸಿದರು.

ಕರ್ನಾಟಕದಲ್ಲಿ ರಾಷ್ಟ್ರಭಕ್ತ ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಅತ್ಯಂತ ನಾಚಿಕೆಗೇಡು ಎಂದು ವಿಧಾನಪರಿಷತ್ತಿನಲ್ಲಿ ಉಲ್ಲೇಖಿಸಿದ್ದೇವೆ ಎಂದು ತಿಳಿಸಿದರು.

ಇದೊಂದು ಅತ್ಯಂತ ನಾಚಿಕೆ ಮತ್ತು ಅಗೌರವದ ವಿಚಾರ ಎಂದು ಅವರು ಖಂಡಿಸಿದರು. ಈ ವಿಷಯದಲ್ಲಿ ಜಾಮೀನಿನಡಿ ಬಿಡುವ ಎಫ್‍ಐಆರ್ ದಾಖಲು ಮಾಡಿದ್ದಾರೆ. ಒಬ್ಬರನ್ನೂ ಇನ್ನೂ ಬಂಧಿಸಿಲ್ಲ. ಅಲ್ಲಿ ಏನೂ ಹೇಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಹೇಳಿಕೆ ಕೊಟ್ಟದ್ದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

 

ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದಲ್ಲಿ ಸ್ಪಷ್ಟವಾಗಿ ಬಂದಿದೆ. ವಿಡಿಯೋದಲ್ಲೂ ಅದು ಸ್ಪಷ್ಟಗೊಂಡಿದೆ. ರಾಜ್ಯದ 7 ಕೋಟಿ ಜನರು ಕೇಳಿದ್ದಾರೆ. ಎಲ್ಲರಿಗೂ ಸ್ಪಷ್ಟತೆ ಇದ್ದರೂ ಕಾಂಗ್ರೆಸ್ಸಿಗರು ಜಾಣಕಿವುಡಿನ ಮೊರೆ ಹೋಗಿದ್ದಾರೆ ಎಂದು ಆಕ್ಷೇಪಿಸಿದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ..

ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, ನಾಸಿರ್ ಹುಸೇನ್ ಅವರು ಗೆದ್ದ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಹಾಗಿದ್ದರೆ ನಾಸಿರ್ ಹುಸೇನ್ ಪಾಕಿಸ್ತಾನದ ಏಜೆಂಟಾ, ಐಎಸ್‍ಐ ಏಜೆಂಟಾ ಎಂದು ಪ್ರಶ್ನಿಸಿದರು. ನಾಸಿರ್ ಹುಸೇನ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸದಂತೆ ತಡೆಹಿಡಿಯಬೇಕೆಂದು ಆಗ್ರಹಿಸಿದರು.

ನಾಸಿರ್ ಹುಸೇನ್ ಗೆದ್ದ ತಕ್ಷಣ ಮಾಲೆ ಹಾಕಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ನಾವು ಈ ವಿಷಯವನ್ನು ವಿಧಾನಪರಿಷತ್ತಿನಲ್ಲಿ ಪ್ರಸ್ತಾಪ ಮಾಡಿದಾಗ, “ಈ ಥರದ್ದು ಘಟನೆ ನಡೆದಿಲ್ಲ; ತನಿಖೆ ನಡೆಸುತ್ತೇವೆಎಂದು ಎಚ್.ಕೆ.ಪಾಟೀಲರು ಹೇಳಿದ್ದಾರೆ. ಏನು ತನಿಖೆ ನಡೆಸುತ್ತೀರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ಕೇಳಿದರು.

 

ನೂರಾರು ಚಾನೆಲ್‍ಗಳಲ್ಲಿ ಬರುತ್ತಿದೆ. ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಪ್ರಿಯಾಂಕ್ ಖರ್ಗೆಯವರು ಈ ಘಟನೆ ನಡೆದೇ ಇಲ್ಲ ಎಂದಿದ್ದಾರೆಎಂದು ರವಿಕುಮಾರ್ ಅವರು ಆಕ್ಷೇಪ ಸೂಚಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top