ಕೊಪ್ಪಳದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಕೊಪ್ಪಳ,ಮಾ,18 : ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಮಕ್ಕಳು, ಯುವಕರು ಬಣ್ಣದಲ್ಲಿ ಮಿಂದೆದ್ದರು. ಅಲ್ಲಿದ್ದವರ ಯಾರ ಮುಖವೂ ಗುರುತು ಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರ ಮುಖ, ದೇಹವೆಲ್ಲ ವಿವಿಧ ಬಣ್ಣಗಳು ಆವರಿಸಿಕೊಂಡಿದ್ದವು. ಅಲ್ಲಿ ಕಿರಿಯರು, ಹಿರಿಯರು ಎಂಬ ಭೇದ ಕಂಡು ಬರಲಿಲ್ಲ. ಗಂಡು-ಹೆಣ್ಣೆಂಬ ವ್ಯತ್ಯಾಸವಿರಲಿಲ್ಲ. ಅಲ್ಲಿದ್ದದ್ದು ಬರೀ ಹೋಳಿ ಸಂಭ್ರಮ. ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ಕೊಪ್ಪಳ ನಗರದ ವಿವಿಧ ಗಲ್ಲಿ,ಓಣಿ,ರಸ್ತೆಗಳಲ್ಲಿ ಕಂಡು ಬಂದ ದೃಶ್ಯಗಳಿವು. ಬೆಳಿಗ್ಗೆಯಿಂದಲೇ ಕೊಪ್ಪಳ ನಗರದ ಬಹುತೇಕ ಗಲ್ಲಿಗಳಲ್ಲಿ ಹೋಳಿ ಸಂಭ್ರಮ ಕಂಡು ಬಂತು. ಮಕ್ಕಳು ಪರಸ್ಪರ ಗುಲಾಲ್‌ ಎರಚಿಕೊಂಡು ಬಣ್ಣದಲ್ಲಿ ಮಿಂದೆದ್ದರು. ಯುವಕ- ಯುವತಿಯರು, ಹಿರಿಯರು ಗಂಡು ಮತ್ತು ಹೆಣ್ಣು ಮಕ್ಕಳು ಅದಕ್ಕೆ ಹೊರತಾಗಿರಲಿಲ್ಲ.

ಮನೆ ಮುಂದೆ ಕಟ್ಟೆಯ ಮೇಲೆ ಬಣ್ಣ ತುಂಬಿಟ್ಟುಕೊಂಡು ನಿಂತಿದ್ದ ಚಿಣ್ಣರು, ದಾರಿಯಲ್ಲಿ ಹೋಗುವರ ಮೇಲೆ ಬಣ್ಣ ಎರಚಿ ಖುಷಿ ಪಟ್ಟರು. ಮಕ್ಕಳ ಸೇನೆಯಿಂದ ತಪ್ಪಿಸಿಕೊಳ್ಳಲು ಕೆಲವರು ಅವರ ಮಾರ್ಗವನ್ನೇ ಬದಲಿಸಿಕೊಂಡು ದೈನಂದಿನ ಕೆಲಸಗಳಿಗೆ ಹೋದರು. ಯುವಕರು ಗುಂಪುಗಳು ಬೈಕ್‌ ಮೇಲೆ ಸವಾರಿ ಮಾಡುತ್ತ, ರಸ್ತೆಯಲ್ಲಿ ಕಾಣಸಿಗುತ್ತಿದ್ದ ತಮ್ಮ ಸ್ನೇಹಿತರಿಗೆ ಬಣ್ಣ ಬಳಿದು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಯುವಜನರು ಮತ್ತು ಮಕ್ಕಳು ಹೋಳಿ ಸಂಭ್ರಮದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು ಕಂಡು ಬಂದಿತು. ಕಾಮದಹನವು ಕೊಪ್ಪಳ ನಗರದ ವಿವಿಧ ಗಲ್ಲಿ ಹಾಗೂ ವಿವಿಧ ವೃತ್ತಗಳಲ್ಲಿ ಗುರುವಾರ ತಡರಾತ್ರಿ ಕಾಮದಹನ ಮಾಡಲಾಯಿತು. ಕಟ್ಟಿಗೆ, ಕುಳ್ಳು ಜೋಡಿಸಿ ದಹಿಸಿದರು. ಜನ ನಿದ್ದೆಗೆಟ್ಟು ಕಾಮದಹನಕ್ಕೆ ಸಾಕ್ಷಿಯಾದರು.

Leave a Comment

Your email address will not be published. Required fields are marked *

Translate »
Scroll to Top