ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

 

ಕೆಎಂಇಆರ್ ಸಿ ಗೆ CEPMIZ ಯೋಜನೆಯಡಿ ಒಟ್ಟು 24,996.30 ಕೋಟಿ ರೂ. ಒದಗಿಸಲಾಗಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಒದಗಿಸಲಾಗಿದೆ. ಇದರಲ್ಲಿ ಯೋಜನೆಗಳ ಆಯ್ಕೆ ಹಾಗೂ ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಒಟ್ಟು 7928.78 ಕೋಟಿ ರೂ. ಮೊತ್ತದ 358 ಯೋಜನೆಗಳನ್ನು ಅನುಮೋದಿಸಿದ್ದಾರೆ.

ಈ ಪೈಕಿ ಒಟ್ಟು 3469.41 ಕೋಟಿ ರೂ. ವೆಚ್ಚದ 182 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 135 ಯೋಜನೆಗಳಿಗೆ ಟೆಂಡರ್‌ ಕರೆಯಲಾಗಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 23 ಕಾಮಗಾರಿಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು,  ಈ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದೊಳಗೆ ಡಿ.ಪಿ.ಆರ್. ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸಿಎಂ ಸೂಚಿಸಿದರು.

ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸುವಂತೆ ಸೂಚಿಸಲಾಯಿತು. ಅಲ್ಲದೇ ವರ್ಷ ಕಳೆದರೂ DPR ಆಗದೇ ಇದ್ದುದಕ್ಕೆ ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ. ಅಧಿಕಾರಿಗಳ ವಿಳಂಬ ಧೋರಣೆಗೆ  ಗರಂ ಆಗಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

 

ಇದು ವಿಶೇಷ ಕಾರ್ಯಕ್ರಮವಾಗಿದ್ದು, ಟೆಂಡರ್‌ ನ ವಾಡಿಕೆಯ ಷರತ್ತುಗಳು ಅನ್ವಯಿಸುವುದಿಲ್ಲ. ಟೆಂಡರ್‌ನಲ್ಲಿ ನಿಗಮವು ವಾರದೊಳಗೆ ಬಿಲ್‌ ಪಾವತಿಸಲಾಗುವುದರಿಂದ ಯಾವುದೇ mobilization advance ನೀಡಲಾಗದು ಎಂಬುದನ್ನು ಗುತ್ತಿಗೆದಾರರಿಗೆ ಸ್ಪಷ್ಟ ಪಡಿಸಲು ಸೂಚಿಸಿದರು.

 ರೈಲ್ವೆ ಯೋಜನೆಗಳಿಗೆ 5271.96 ಕೋಟಿ ರೂ. , ಕುಡಿಯುವ ನೀರಿನ ಯೋಜನೆಗಳಿಗೆ 4929.84 ಕೋಟಿ ರೂ., ಆರೋಗ್ಯ ಕ್ಷೇತ್ರಕ್ಕೆ 1915.78 ಕೋಟಿ ರೂ., ಪರಿಸರ ಪುನಃಸ್ಥಾಪನೆಗೆ 2655.17 ಕೋಟಿ ರೂ., ರಸ್ತೆಗಳು ಮತ್ತು ಸಂವಹನ ಯೋಜನೆಗಳಿಗೆ 2559.17 ಕೋಟಿ ರೂ. , ವಸತಿ ಯೋಜನೆಗಳಿಗೆ 1193.98 ಕೋಟಿ ರೂ. ನಿಗದಿ ಪಡಿಸಲಾಗಿದೆ. ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಶೀಘ್ರವೇ ಗುರುತಿಸಲು ಸೂಚಿಸಿದರು.

 

ಸಣ್ಣ ನೀರಾವರಿ ಇಲಾಖೆ 14 ಯೋಜನೆಗಳ ಪೈಕಿ 7 ಯೋಜನೆಗಳ ಕಾಮಗಾರಿ ಆರಂಭಿಸಲಾಗಿದೆ. ಉಳಿದ 7 ಯೋಜನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ ಕಾಮಗಾರಿ ಅನುಷ್ಠಾನ‌ಮಾಡುವಂತೆ ಸಿಎಂ ಸೂಚಿಸಿದರು

ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಾಲೆಗಳ ಕಟ್ಟಡ ದುರಸ್ತಿ, ಕೊಠಡಿ, ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು. ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳು ಮತ್ತಿತರ ಯೋಜನೆಗಳಿಗೆ ಒತ್ತು ನೀಡುವಂತೆ ಸೂಚಿಸಿದರು. ಲಭ್ಯವಿರುವ ಅನುದಾನದಲ್ಲಿ ಈ ನಾಲ್ಕೂ ಜಿಲ್ಲೆಗಳು ಮಾದರಿ ಜಿಲ್ಲೆಗಳಾಗಿ ಅಭಿವೃದ್ಧಿ ಮಾಡುವಂತೆ ಅಭಿವೃದ್ಧಿ ಆಯುಕ್ತರಿಗೆ ಸೂಚಿಸಿದರು. ಮುಂದಿನ ಸಭೆಯಲ್ಲಿ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹ ಭಾಗವಹಿಸುವಂತೆ ಸೂಚಿಸಿದರು.

ಕಾಮಗಾರಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟವನ್ನು ಖಾತರಿಪಡಿಸಬೇಕು ಎಂದರು.

 

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top