ದೇಶದಲ್ಲೇ ಅತಿಹೆಚ್ಚು ಸಾಮಾಜಿಕ ಭದ್ರತಾ ಪಿಂಚಣಿ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ: ಕೃಷ್ಣ ಬೈರೇಗೌಡ

v ರಾಜ್ಯದಲ್ಲಿ ಒಟ್ಟು 78,14,513 ವ್ಯಕ್ತಿಗಳಿಗೆ ನಾನಾ ರೀತಿಯ ಪಿಂಚಣಿ

v ಪಿಂಚಣಿಗಾಗಿ ರಾಜ್ಯ ಸರ್ಕಾರದಿಂದ ರೂ 10,500 ಕೋಟಿ ವ್ಯಯ

v ಕಾಲದಿಂದ ಕಾಲಕ್ಕೆ ಪಿಂಚಣಿ ಪರಿಷ್ಕರಿಸುವ ಬಗ್ಗೆಯೂ ಸ್ಪಂದನೆ

v ಕೇಂದ್ರದಿಂದ ಹೆಚ್ಚಿನ ನೆರವು ಸಿಗುವ ಬಗ್ಗೆ ಸಚಿವರ ವಿಶ್ವಾಸ

ಬೆಂಗಳೂರು: ವಿಕಲಚೇತನರ ಹಾಗೂ ಮನೋರೋಗಕ್ಕೆ ತುತ್ತಾಗಿರುವವರಿಗೆ ನೀಡುವ ಸಾಮಾಜಿಕ ಭದ್ರತಾ ಪಿಂಚಣಿ (ಮಾಶಾಸನ)ಯನ್ನು ದೇಶದಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್‌ಗೆ ಮಾಹಿತಿ ನೀಡಿದರು.

 

ವಿಧಾನ ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ವೈ.ಎಂ. ಸತೀಶ್‌ ಅವರು ವಿಕಲಚೇತನರಿಗೆ ಹಾಗೂ ಮನೋರೋಗಿಗಳಿಗೆ ನೀಡುವ ಮಾಶಾಸನದ ಬಗ್ಗೆ ಉಲ್ಲೇಖಿಸಿದರು. ಶೇ.40 ರಿಂದ ಶೇ.75 ರಷ್ಟು ಅಂಗವಿಕಲತೆ ಇರುವವರಿಗೆ 2021 ರಿಂದ 1,400 ರೂಪಾಯಿ ಹಾಗೂ ಶೇ.75ಕ್ಕೂ ಹೆಚ್ಚು ಅಂಗ ವಿಕಲತೆ ಹಾಗೂ ಮನೋರೋಗಿಗಳಿಗೆ 2,000 ರೂಪಾಯಿ ಮಾಶಾಸನ ನೀಡಲಾಗುತ್ತಿದೆ.  ಈ ಮಾಶಾಸನವನ್ನು ಹೆಚ್ಚಿಸಬೇಕು, ಕಾಲದಿಂದ ಕಾಲಕ್ಕೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಪರಿಷತ್‌ ಸದಸ್ಯ ವೈ.ಎಂ.ಸತೀಶ್‌ ಅವರ ಒತ್ತಾಯಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಅಂಗವೈಕ್ಯಲ ಹಾಗೂ ಮನೋವೈಕಲ್ಯ ಹೊಂದಿರುವವರ ಮಾಶಾಸನವನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಿಸಬೇಕು ಎಂಬುದು ನಿಜ. ಇದರಲ್ಲಿ ಸರ್ಕಾರಕ್ಕೆ ಬೇರೆ ಅಭಿಪ್ರಾಯ ಇಲ್ಲ. ರಾಜ್ಯದಲ್ಲಿ ಒಟ್ಟು 78,14,513 ವ್ಯಕ್ತಿಗಳಿಗೆ ನಾನಾ ರೀತಿಯ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುತ್ತಿದೆ. ಇದಕ್ಕಾಗಿಯೇ ಪ್ರತಿವರ್ಷ 10500 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.

 ಮುಂದುವರೆದು, “ದೇಶದಲ್ಲೇ ಸಾಮಾಜಿಕ ಭದ್ರತಾ ಹಣ ಅತಿಹೆಚ್ಚು ನೀಡುತ್ತಿರು ರಾಜ್ಯ ಕರ್ನಾಟಕ. ಈ ವಿಚಾರದಲ್ಲಿ ಬೇರೆ ರಾಜ್ಯಗಳಿಗಿಂತ ಕರ್ನಾಟಕ ಉದಾರ ನೀತಿ ಅನುಸರಿಸುತಿದೆ. ತಮಿಳುನಾಡು ನಮ್ಮ ತೀರಿಯದ್ದೇ ಮನಸ್ಥಿತಿ ಹೊಂದಿದೆ, ಜನಸಂಖ್ಯೆಯೂ ಅಧಿಕವಾಗಿದೆ. ಆದರೂ, ಸಾಮಾಜಿಕ ಭದ್ರತಾ ಪಿಂಚಣಿಯನ್ನು ಅತಿಹೆಚ್ಚು ನೀಡುತ್ತಿರುವ ರಾಜ್ಯ ಕರ್ನಾಟಕ. ನಾವು ಕಾಲದಿಂದ ಕಾಲಕ್ಕೆ ಈ ಮಾಶಾಸನವನ್ನು ಪರಿಷ್ಕರಣೆ ಮಾಡುತ್ತಾ ಬಂದಿದ್ದೇವೆ. ಮತ್ತೊಮ್ಮೆ ಪರಿಷ್ಕರಣೆ ಮಾಡುವ ಬಗ್ಗೆಯೂ ವಿಚಾರ ಮಾಡೋಣ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.

ಕೇಂದ್ರದಿಂದಲೂ ನೆರವು ಸಿಗುವ ನಿರೀಕ್ಷೆ:

ಸಾಮಾಜಿಕ ಭದ್ರತಾ ಪಿಂಚಣಿ ಅಡಿಯಲ್ಲಿ ವಿಕಲಚೇತನರು ಹಾಗೂ ಮನೋರೋಗಕ್ಕೆ ತುತ್ತಾಗಿರುವವರಿಗೆ ನೀಡುತ್ತಿರುವ ಮಾಶಾಸನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ರಾಜ್ಯ ಸರ್ಕಾರಕ್ಕಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

 

ಈ ಬಗ್ಗೆಯೂ ಸದನದ ಗಮನ ಸೆಳೆದ ಸಚಿವರು, “ ಕೇಂದ್ರ ಸರ್ಕಾರದ ಆಯವ್ಯಯ ಪೂರ್ವ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಾನೆ ಹೊಗಿದ್ದೆ. ರಾಜ್ಯ ಸರ್ಕಾರ 78 ಲಕ್ಷ ಜನರಿಗೆ ಮಾಶಾಸನ ನೀಡುತ್ತಿದ್ದರೆ, ಕೇಂದ್ರ ಸರ್ಕಾರ ಕೇವಲ 13 ಲಕ್ಷ ಜನರಿಗೆ ಮಾತ್ರ ಅವರ ಪಾಲಿನ ಹಣ ನೀಡುತ್ತಿದೆ. ಅದರಲ್ಲೂ ನಾವು ರೂ.1,400 ರಿಂದ ರೂ. 2,000 ಹಣ ಮಾಶಾಸನ ನೀಡುತ್ತಿದ್ದರೆ, ಕೇಂದ್ರದ ಅನುದಾನ ಕೇವಲ ರೂ.200 ರಿಂದ ರೂ.400 ರೂಪಾಯಿ ಮಾತ್ರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಗಮನಕ್ಕೆ ತರಲಾಗಿತ್ತು” ಎಂದರು.

ಈ ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಕೇಂದ್ರ ಸರ್ಕಾರ ಕೊನೆಯದಾಗಿ ಪರಿಷ್ಕರಣೆ ಮಾಡಿದ್ದು, ನವೆಂಬರ್‌ 8, 2012 ರಲ್ಲಿ. ಕಳೆದ 12 ವರ್ಷಗಳಿಂದ ಒಂದು ಪೈಸೆಯೂ ಪರಿಷ್ಕರಣೆ ಮಾಡೇ ಇಲ್ಲ.  ಹೀಗಾಗಿ ರಾಜ್ಯದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ನಮ್ಮ ಸರ್ಕಾರದ ಪರವಾಗಿ ನಾನು ಮೆಮೋರಾಂಡಂ ಸಲ್ಲಿಸಿದ್ದೇನೆ. ಆ ಮೆಮೋರಾಂಡಂ ನಲ್ಲಿ ಮಾಶಾಸನ ದರವನ್ನು ಪರಿಷ್ಕರಿಸಿ ಹಾಗೂ ನಾವು 78 ಲಕ್ಷ ಜನರಿಗೆ ಮಾಶಾಸನ ನೀಡುತ್ತಿದ್ದೇವೆ. ಈ ಪೈಕಿ ಕೇಂದ್ರ ಸರ್ಕಾರ ಕೇವಲ 13 ಲಕ್ಷ ಜನರಿಗೆ ಮಾತ್ರ ಅನುದಾನ ನೀಡುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು.

 

ಆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸಹ ಈ ದರ ಏಕೆ ಈವರೆಗೆ ಪರಿಷ್ಕರಣೆಯಾಗಿಲ್ಲ? ಎಂದು ಪ್ರಶ್ನಿಸಿದ್ದರು. ಅಲ್ಲದೆ, ನಮ್ಮ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸಿರುವ ಬಗ್ಗೆ ನಾನು ಈವರೆಗೆ ನೋಡಿಲ್ಲ. ಸಪ್ಲಿಮೆಂಟರಿಯಲ್ಲಿ ಡೀಟೈಲ್ ಆಗಿ ಇದೆಯಾ‌ ಎಂದು ನೋಡಬೇಕು. ಸಾಮಾಜಿಕ ಭದ್ರತಾ ಪಿಂಚಣಿಗೆ ಕೇಂದ್ರದಿಂದ ಅನುದಾನ ಬರುವ ನಿರೀಕ್ಷೆಯಂತೂ ನನಗೆ ಖಂಡಿತ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ತಿಳಿಸಿದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top