ಶೇ. 75ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಹೆಚ್ಚಿನ ಪಿಂಚಣಿಗೆ ಆಗ್ರಹ : ವೈ.ಎಂ. ಸತೀಶ್

ಬೆಂಗಳೂರು : ಕರ್ನಾಟಕದಲ್ಲಿರುವ ವಿಕಲಚೇತನರುಗಳಿಗೆ ಪಿಂಚಣಿಯನ್ನು ಹೆಚ್ಚಿಸಿ ಅವರಿಗೂ ಮತ್ತು ಅವರ ಕುಟುಂಬಕ್ಕೂ ಮಾನವೀಯತೆ ಆಧಾರದ ಮೇಲೆ ಆರ್ಥಿಕವಾಗಿ ನೆರವಾಗಲು ವಿಧಾನಪರಿಷತ್ ಸದಸ್ಯ ವೈ. ಎಂ. ಸತೀಶ್ ಅವರು ವಿಧಾನಪರಿಷತ್ತಿನಲ್ಲಿ ಬುಧವಾರ ಧ್ವನಿ ಎತ್ತಿದ್ದಾರೆ.

ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಕಳೆದ ಮೂರು ವರ್ಷಗಳ ಅವಧಿಯಲ್ಲಿ  ವಿಕಲಚೇತನರಿಗೆ ಪಿಂಚಣಿ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ಪಾಲು 4854 ಲಕ್ಷ ರೂಪಾಯಿಗಳು ಮತ್ತು ರಾಜ್ಯದ ಪಾಲು 388935.95 ಲಕ್ಷ ರೂಪಾಯಿ ಸೇರಿ ಒಟ್ಟು 393789.95 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದರು.

 

ಶೇ. 40 ರಿಂದ 75 ರಷ್ಟು ಅಂಗವಿಕಲತೆ ಇರುವವರಿಗೆ ಮಾಸಿಕ 800 ರೂಪಾಯಿ, ಶೇ. 75 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಇರುವವರಿಗೆ 1400 ರೂಪಾಯಿ ಮತ್ತು ಶೇ. 75 ರಷ್ಟು ಮನೋವೈಕಲ್ಯತೆ ಇರುವವರಿಗೆ 2000 ರೂಪಾಯಿಯನ್ನು ಪಿಂಚಣಿಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು. 

ಆಗ, ವೈ.ಎಂ. ಸತೀಶ್ ಅವರು, ಶೇ. 75 ರಷ್ಟು ಮನೋವೈಕಲ್ಯತೆಯನ್ನು ಹೊಂದಿರುವ ಮತ್ತು ಈ ಪ್ರಮಾಣಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳಿಗೆ ಹಾಗೂ ವಿಕಲಚೇತನರಿಗೆ ಮಾನವೀಯತೆಯ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.

 

ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಜೆಟ್ ಪೂರ್ವದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ಸ್ಪಷ್ಟಪಡಿಸಿದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top