ಸಾಹಿತ್ಯ, ಕಲೆಗಳ ಎಲ್ಲಾ ಪ್ರಾಕಾರಗಳಿಗೆ ಕರ್ನಾಟಕವೇ ತವರುಭೂಮಿ

ದೇವನಹಳ್ಳಿ: ಜಗತ್ತಿನ ಮತ್ತೆಲ್ಲಾ ಭಾಷೆಯ ಕವಿಗಳೊಡನೆ ಸರಿಸಮಾನವಾಗಿ ನಿಲ್ಲಬಲ್ಲಂತಹ ಕವಿಶ್ರೇಷ್ಟರು ಪ್ರಾಚೀನ ಕಾಲದಿಂದಲೂ ಕನ್ನಡದಲ್ಲಿದ್ದು, ಕನ್ನಡ ಸಾಹಿತ್ಯವನ್ನು ಯುವಪೀಳಿಗೆಯು ಅಧ್ಯಯನ ಮಾಡಬೇಕಿದೆ. ಕನ್ನಡದ ನೆಲ-ಜಲ, ಭಾಷೆ, ಸಾಹಿತ್ಯಕ್ಕೆ ಯಾವುದೇ ಧಕ್ಕೆಯಾದರೂ ಕನ್ನಡಿಗರೆಲ್ಲಾ ಒಗ್ಗೂಡಬೇಕು. ಶಿಲ್ಪಕಲೆ, ರಂಗಕಲೆ, ಚಿತ್ರಕಲೆಯಂತಹ ವಿವಿಧ ಪ್ರಾಕಾರಗಳಿಗೆ ಕರ್ನಾಟಕವೇ ತವರುಭೂಮಿ ಎಂದು ಶಿಕ್ಷಣತಜ್ಞ, ಸಾಹಿತಿ ಎಚ್.ಎಸ್.ರುದ್ರೇಶಮೂರ್ತಿ ಅಭಿಪ್ರಾಯಪಟ್ಟರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಾಂಧಿಚೌಕದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಹಂತಿನಮಠ ಸಭಾಂಗಣದಲ್ಲಿ ನಗರ್ತಮಹಿಳಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳದಿನಾಚರಣೆ, ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕನ್ನಡದ ಕಲೆಗಳಿಗೆ ಜಾಗತಿಕ ಮನ್ನಣೆ ಇದ್ದು, ಕಂಪ್ಯೂಟರೀಕರಣ, ಮಾಹಿತಿ ತಂತ್ರಜ್ಞಾನದ ಸೆರಗಿನಲ್ಲಿ ಅನೇಕ ಕಲೆಗಳು ನಶಿಸುತ್ತಿವೆ. ಅಳಿವಿನ ಅಂಚಿನಲ್ಲಿರುವ ಕಲೆಗಳನ್ನು ಉಳಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಇತರೆ ಕ್ಷೇತ್ರಗಳಂತೆ ಕನ್ನಡ ಸಾಹಿತ್ಯ, ಕಲಾಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ ವ್ಯಕ್ತಿಗಳ ನಿದರ್ಶನವಿದ್ದು, ಕೇವಲ ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳಂತೆಯೇ ಮಕ್ಕಳನ್ನು ಸಾಹಿತ್ಯ, ಕಲೆಗೂ ಪ್ರೋತ್ಸಾಹಿಸಬೇಕು. ಗಡಿ ಸಮಸ್ಯೆಗಳ ಪರಿಹಾರಕ್ಕೆ ಮಹಾಜನ್ ಆಯೋಗದ ವರದಿಯೇ ಅಂತಿಮ. ಅಖಂಡ ಕರ್ನಾಟಕದ ಮನೋಭಾವನೆ ಎಲ್ಲರಲ್ಲಿಯೂ ಜಾಗೃತಗೊಳ್ಳಬೇಕು ಎಂದರು.

ನಗರ್ತ ಮಹಿಳಾಸಂಘದ ಅಧ್ಯಕ್ಷೆ ಲೀಲಾವತಿ ರುದ್ರಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕಗಳು ನೈಜವಾಗಿ ಪರಂಪರೆ, ಸಂಸ್ಕೃತಿಯನ್ನು ತಲೆಮಾರುಗಳ ಹಾದಿಯಲ್ಲಿ ರವಾನಿಸಲು ಉತ್ತಮ ಮಾಧ್ಯಮಗಳು, ಕಾರ್ಯಕ್ರಮಗಳಲ್ಲಿ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಹಂಚಬೇಕು. ಯುವಪೀಳಿಗೆ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಕನ್ನಡದ ಕಾರ್ಯಕ್ರಮಗಳಲ್ಲಿ ಸಾಹಿತಿಗಳು, ಕಲಾವಿದರನ್ನು ಗುರ್ತಿಸಿ ಪೋಷಿಸಲುಬೇಕು ಎಂದರು.ನಗರ್ತ ಯುವಕಸಂಘದ ಅಧ್ಯಕ್ಷ ಬಿ.ಸಿ.ಸಿದ್ಧರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವರಲ್ಲಿಯೂ ಕನ್ನಡತನದ ಸೃಜನಶೀಲತೆಯನ್ನು ಬೆಳೆಸಬೇಕು. ಕನ್ನಡದ ಉತ್ಸವಗಳು ನಿತ್ಯೋತ್ಸವಗಳಾಗಬೇಕು. ಇಂಗ್ಲೀಷ್, ಹಿಂದಿ ಭಾಷೆಗಿಂತಲೂ ಕನ್ನಡ ಭಾಷೆಯು ಶ್ರೇಷ್ಟವಾದುದೆಂಬ ಭಾವನೆ ಬಂದು ಶ್ರೀಮಂತವಾದ ಪರಂಪರೆಯನ್ನು ಉಳಿಸುವ ಕರ್ತವ್ಯ ಎಲ್ಲಾ ಕನ್ನಡಿಗರಿಗೆ ಇದೆ ಎಂದರು.ಬೆಂಗಳೂರಿನ ನಗರ್ತ ವಿದ್ಯಾವರ್ಧಕಸಂಘದ ನಿರ್ದೇಶಕಿ ಭಾರತಿಪ್ರಭುದೇವ್ ಅವರು ಪ್ರತಿಭಾಪುರಸ್ಕಾರ ನೆರವೇರಿಸಿ ಮಾತನಾಡಿ, ಕನ್ನಡನಾಡಿನಲ್ಲಿ ಕನ್ನಡವೇಸಂಪೂರ್ಣ ಆಡಳಿತಭಾಷೆಯಾಗಬೇಕು. ಕನ್ನಡವನ್ನು ಮಾತನಾಡಬೇಕು, ಕಲಿಸಬೇಕು. ಆ ಮೂಲಕ ಕನ್ನಡಾಭಿಮಾನವು ಹೆಚ್ಚಬೇಕು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ವೃದ್ಧಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕಿದೆ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಸಂದರ್ಭೋಚಿತ ಮಾರ್ಗದರ್ಶನದ ಅಗತ್ಯವಿದೆ ಎಂದರು.

ನಗರ್ತ ಮಹಿಳಾಸಂಘದ ಸಲಹೆಗಾರರಾದ ಸಿ.ಬಸಪ್ಪ, ಪಿ.ಚಂದ್ರಪ್ಪ, ನಿರ್ದೇಶಕಿ ಶ್ವೇತಾಮಂಜುನಾಥ್, ಚಂಪಕವಲ್ಲಿನಾಗರಾಜು, ಭಾರತಿವಿಶ್ವನಾಥ್, ರಶ್ಮಿಶಿವರುದ್ರ, ವೀಣಾನಟಶೇಖರ್ ಮಾತನಾಡಿದರು.ಬಾಲಪ್ರತಿಭೆ ಪ್ರಜ್ಞಾಲಿಂಗರಾಜು ಅವರನ್ನು ಅಭಿನಂದಿಸಲಾಯಿತು. ಮಕ್ಕಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹನ್ಸಿಕಾನವೀನ್, ನಿಶಿಕವೀರೇಶ್,ಲೇಖನಾ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಳೆದ ಸಾಲಿನ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಇತ್ತೀಚೆಗೆ ನಿಧನರಾದ ಕಾಮಾಕ್ಷಮ್ಮ, ನಟ ಪುನೀತ್‌ ರಾಜಕುಮಾರ್ ಅವರಿಗೆ ಮೊಂಬತ್ತಿ ಹಚ್ಚಿ ನುಡಿನಮನ ಸಲ್ಲಿಸಲಾಯಿತು.

Leave a Comment

Your email address will not be published. Required fields are marked *

Translate »
Scroll to Top