ಅಕ್ರಮ ಚಟುವಟಿಕೆ ತಡೆಗೆ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ನೀಡಿದ್ದ ಸೂಚನೆಗೆ ಕಲಬುರಗಿ ಪೊಲೀಸರ ಕ್ರಮ.

ಕಳೆದ ಜೂನ್ 20ರಂದು  ಪೊಲೀಸ್, ಅಬಕಾರಿ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಾಹಿತಿ ಹಾಗೂ ತಮತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಚಿವರ ನಿರ್ದೇಶನದಂತೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಮರುಳು ಸಾಗಾಣಿಕೆ, ಸರಿಯಾಗಿ ಕರ್ತವ್ಯ ನಿರ್ವಹಿಸದ ಚೆಕ್ ಪೋಸ್ಟ್ ಸಿಬ್ಬಂದಿ, ಓವರ್ ಲೋಡ್, ರಾಯಲ್ಟಿ ನೀಡಿರುವುದಕ್ಕೂ ಹಾಗೂ ಹಣ ಸಂದಾಯ ಮಾಡಿರುವುದಕ್ಕೂ ತಾಳೆಯಾಗದಿರುವುದು, ಮಟ್ಕಾ, ಇಸ್ಪೀಟ್, ಗಾಂಜಾ ಮಾರಾಟ, ಮನೆ ಕಳ್ಳತನ, ಮಹಿಳೆಯರು ಧರಿಸಿರುವ ಆಭರಣ ಕಳ್ಳತನ, ಕೊಲೆ, ಸುಲಿಗೆ, ರೌಡಿಗಳ ಅಟ್ಟಹಾಸ, ಮಹಿಳೆಯರು ಕಾಣೆಯಾಗಿರುವುದು ( ಮಾಧ್ಯಮಗಳ ವರದಿ ಉಲ್ಲೇಖ), ಕಿಡ್ನಾಪ್, ಡ್ರಗ್ ಮಾರಾಟ, ಮಂಗಳ ಮುಖಿಯರಿಂದ ಸಾರ್ವಜನಿಕರಿಗೆ ರಸ್ತೆಗಳ ಮೇಲೆ ಕಿರಿಕಿರಿ, ದರೋಡೆ, ಕ್ರಿಕೆಟ್ ಬೆಟ್ಟಿಂಗ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಅಪ್ರಾಪ್ತ ವಯಸ್ಕರರಿಗೆ ಮದ್ಯ ಮಾರಾಟ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸ್ಥಾಪನೆ, ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ ಹಾಗೂ ಅವುಗಳ ಕಾರ್ಯನಿರ್ವಹಣೆ, ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುವುದು, ಅಕ್ರಮ ಚಟುವಟಿಕೆ ಮಾಡುವವರೊಂದಿಗೆ ಪೊಲೀಸರ ಕೈಜೋಡಿಸುವಿಕೆ, ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ಒತ್ತಾಯದ ರಾಜಿ ಹೀಗೆ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಎಲ್ಲ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು ಎಂದು ಸಚಿವರು ಗಡುವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುರುಕಾದ ಪೊಲೀಸ್ ಇಲಾಖೆ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ತಮಗೆ ಸವಿವರವಾದ ವರದಿಯೊಂದನ್ನು ಸಲ್ಲಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಜಿಲ್ಲಾ ಪೊಲೀಸರು ನಿಡಿರುವ ವಿವರವಾದ ವರದಿಯ ಮುಖ್ಯಾಂಶಗಳು. 

• ಕಳೆದ ಎಂಟು ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಜನ ಎಎಸ್ ಐ, 58 ಜನ ಸಿಎಚ್ ಸಿ, 34 ಜನ ಸಿಪಿಸಿ ಸೇರಿದಂತೆ ಒಟ್ಟು 100 ಜನ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.  

• ಕಲಬುರಗಿ ನಗರ ವ್ಯಾಪ್ತಿಯಲ್ಲಿ 25 ಕ್ಲಬ್ ಗಳು ಸಕ್ರೀಯವಾಗಿದ್ದು ಅನಧಿಕೃತ ಚಟುವಟಿಕೆ ನಡೆಯದಂತೆ ನಿಗಾ ವಹಿಸಲು ಸೂಚಿಸಲಾಗಿದೆ.

• ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ವ್ಯವಹಾರ ಕೇಂದ್ರಗಳಾಗಿವೆ, ಅವುಗಳನ್ನು ನಿಯಂತ್ರಿಸಿ ಎಂಬ ನಿರ್ದೇಶನಕ್ಕೆ ಅನಗತ್ಯ ಹಸ್ತಕ್ಷೇಪ ಮಾಡುವವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

• ನಗರ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಪೈಕಿ ಮಹಿಳಾ ಠಾಣೆ ಹೊರತುಪಡಿಸಿ ಮಿಕ್ಕ 13 ಠಾಣೆಗಳಲ್ಲಿ ಒಟ್ಟು 52 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ,  ಜೊತೆಗೆ ನಗರದ ಪ್ರಮುಖ 25 ಸ್ಥಳಗಳಲ್ಲಿ ಒಟ್ಟು 60 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೇ, ನಗರದ 20 ಸ್ಥಳಗಳಲ್ಲಿ ಮಹಾನಗರ ಪಾಲಿಕೆವತಿಯಿಂದ 53 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಾರ್ಷಿಕ ನಿರ್ವಹಣೆ ಇಲ್ಲದ ಕಾರಣ ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿವೆ, ಕ್ಯಾಮೆರಾ ದುರಸ್ಥಿ ಹಾಗೂ ವಾರ್ಷಿಕ ನಿರ್ವಹಣೆಗೆ ತಗುಲುವ ಅನುದಾನವನ್ನು ಬಿಡುಗಡೆಗೊಳಿಸಲು ಅಂದಾಜು ಪಟ್ಟಿ ಸಲ್ಲಿಸಲಾಗಿದೆ.

• ನಗರ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಪೈಕಿ, ವಿಶ್ವವಿದ್ಯಾಲಯ, ಚೌಕ್ ಹಾಗೂ ಮಹಿಳಾ ಠಾಣೆಗಳನ್ನು ಹೊರತುಪಡಿಸಿ ಎಲ್ಲಾ ಠಾಣೆಗಳಲ್ಲಿ ಮಹಿಳಾ ಶೌಚಾಲಯಗಳಿವೆ. 

• ಅಕ್ರಮ ಮರುಳು ಸಾಗಾಟ ಮಾಡುವವರ ವಿರುದ್ಧ ಜೂನ್ 20ರಿಂದ 12 ಪ್ರಕರಣಗಳು ಹಾಗೂ ಅಕ್ರಮ ಮರುಳು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿರುದ್ದ 4 ಪಿಎಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ ದ್ದು, 2021 ರಲ್ಲಿ 215 ಹಾಗೂ 2022ರಲ್ಲಿ 119 ಪ್ರಕರಣಗಳು ದಾಖಲಾಗಿದ್ದವು, 2023ರಲ್ಲಿ 88 ಪ್ರಕರಣಗಳು ಸೇರಿದಂತೆ ಒಟ್ಟು 422 ಪ್ರಕರಣಗಳು ದಾಖಲಾಗಿವೆ. 

• ಕಳೆದ ಜೂನ್ 20 ರಿಂದ ಅಕ್ರಮ ಜೂಜಾಟ ಆಡುತ್ತಿರುವವರ ವಿರುದ್ದ 12 ಪ್ರಕರಣಗಳು ದಾಖಲಿಸಿ 74 ಜನರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ, ಅಲ್ಲದೇ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ, 2021 ರಲ್ಲಿ 170 ಪ್ರಕರಣಗಳು, 2022 ರಲ್ಲಿ 165 ಪ್ರಕರಣಗಳು ಹಾಗೂ 2023 ರಲ್ಲಿ 69 ಪ್ರಕರಣಗಳು ವರದಿಯಾಗಿದ್ದು ಒಟ್ಟು 2701 ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. 

• ಈ ವರ್ಷ   ಜೂನ್ 20 ರಿಂದ ಇಲ್ಲಿಯವರೆಗೆ ಮಟ್ಕಾ ಆಡುತ್ತಿದ್ದ 11 ಪ್ರಕರಣಗಳಿಗೆ ಸಂಬಂಧಿಸಿದಂತೆ 14 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 16 ಆರೋಪಿತರನ್ನು ಗಡಿಪಾರು ಮಾಡಲಾಗಿದೆ .

• ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿದ್ದ 2777 ಪ್ರಕರಣಗಳನ್ನು ದಾಖಲಿಸಲಾಗಿದೆ. 

• 2020 ರಲ್ಲಿ ಮಹಿಳೆಯರ ನಾಪತ್ತೆಯಾದ 74 ಪ್ರಕರಣಗಳು ವರದಿಯಾಗಿದ್ದು, 72 ಪತ್ತೆಯಾಗಿರುತ್ತವೆ ಹಾಗೂ 2 ಪ್ರಕರಣಗಳು ತನಿಖೆ ಹಂತದಲ್ಲಿವೆ;  2021 ರಲ್ಲಿ 119 ಪ್ರಕರಣಗಳು ವರದಿಯಾಗಿದ್ದು, 114 ಪತ್ತೆಯಾಗಿದ್ದು 5 ಪ್ರಕರಣಗಳ ತನಿಖೆ ನಡೆಯುತ್ತಿದೆ; 2022 ರಲ್ಲಿ 111 ಪ್ರಕರಣಗಳು ವರದಿಯಾಗಿದ್ದು,  101 ಪತ್ತೆಯಾಗಿದ್ದು, 10 ಪ್ರಕರಣಗಳ ತನಿಖೆ ನಡೆಯುತ್ತಿದೆ; 2023ರಲ್ಲಿ46 ಪ್ರಕರಣಗಳು ವರದಿಯಾಗಿದ್ದು, 27 ಪತ್ತೆಯಾಗಿದ್ದು 19 ಪ್ರಕರಣಗಳ ತನಿಖೆ ನಡೆಯುತ್ತಿದೆ.ಕಳೆದ ಜೂನ್ ತಿಂಗಳಿನಿಂದ  8 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 350 ಪ್ರಕರಣಗಳಲ್ಲಿ 314 ಪತ್ತೆಯಾಗಿದ್ದು, 36 ತನಿಖೆ ಹಂತದಲ್ಲಿವೆ.

• ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುರಪಯೋಗ ಮತ್ತು ಅಕ್ರಮ ಸಾಗಾಣಿಕೆ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ. ಪೊಲೀಸ್ ಇಲಾಖೆ ವತಿಯಿಂದ  ಸಾಮಾಜಿಕ ಜಾಲ ತಾಣದಲ್ಲಿ ಮಾದಕ ದ್ರವ್ಯದ ಕುರಿತು ಅರಿವು ಮೂಡಿಸಲಾಗಿದೆ. 2021 ರಲ್ಲಿ 29 , 2022 ರಲ್ಲಿ 53 ಹಾಗೂ 2023 ರಲ್ಲಿ 22 ಪ್ರಕರಣಗಳು ವರದಿಯಾಗಿದ್ದು, 154 ಆರೋಪಿಗಳನ್ನು ಬಂಧಿಸಲಾಗಿದೆ. 

• 2020ರಲ್ಲಿ 25, 2021 ರಲ್ಲಿ 47, 2022 ರಲ್ಲಿ  40 ಹಾಗೂ 2023 ರಲ್ಲಿ 25 ಅಪಹರಣ ಪ್ರಕರಣಗಳು ವರದಿಯಾಗಿದ್ದು137 ಪ್ರಕರಣಗಳಲ್ಲಿ 107 ಮಂದಿ ಪತ್ತೆಯಾಗಿದ್ದು 27 ಪ್ರಕರಣಗಳು ತನಿಖೆ ಹಂತದಲ್ಲಿವೆ.

• 2021 ರಲ್ಲಿ 41, 2022 ರಲ್ಲಿ 56 ಪ್ರಕರಣಗಳು ಹಾಗೂ 2023ರಲ್ಲಿ 29 ಕೊಲೆ ಪ್ರಕರಣಗಳು ವರದಿಯಾಗಿದ್ದು 99 ಪ್ರಕರಣಗಳು ಪತ್ತೆಯಾಗಿವೆ.

• ಕೌಟುಂಬಿಕ ಕಲಹ ಮತ್ತುಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳು ತೀವ್ರ ಸ್ವರೂಪ ಪಡೆಯುವ ಮುನ್ನ ಅಂತವರ ವಿರುದ್ದ ಪಿಎಆರ್ ದಾಖಲಿಸಲಾಗುತ್ತಿದೆ.

• ಜಿಲ್ಲೆಯಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ವಿರುದ್ದ ಮುಂಜಾಗ್ರತಾ ಕ್ರಮವಾಗಿ ಪಿಎಆರ್ ದಾಖಲಿಸಲಾಗುತ್ತಿದೆ.

• 2021 ರಲ್ಲಿ 02, 2022 ರಲ್ಲಿ 05 ಹಾಗೂ 2023 ರಲ್ಲಿ 02 ಡಕಾಯಿತಿ ಪ್ರಕರಣಗಳು ವರದಿಯಾಗಿದ್ದು 07 ಪತ್ತೆಯಾಗಿವೆ.

• ತುರ್ತು ಸೇವೆಗೆ ESRR 112 ವಾಹನ ಪೆಟ್ರೋಲಿಂಗ್ ನಲ್ಲಿರುತ್ತದೆ. ರಾತ್ರಿ ಗಸ್ತಿನಲ್ಲಿ ಪರಿಣಾಮಕಾರಿ ಸ್ಮಾರ್ಟ್ ಇ ಬೀಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. 

• ಮಲಕೂಡ ಕ್ರಾಸ್ ರೋಡ್ ಹಂಪ್ಸ್, ಕಡಗಂಚಿ ಕ್ರಾಸ್ ರೋಡ್ ಹಂಪ್ಸ,  ಜೇವರ್ಗಿ ಬಸ್ ಡಿಪೋ, ಗೊಬ್ಬೂರು ಕ್ರಾಸ್,  ಮತ್ತು ನೆಲೋಗಿ ಟೋಲ್ ಗೇಟ್ ಬಳಿ ನಿಲ್ಲುತ್ತಿದ್ದ ಮಂಗಳ ಮುಖಿರಿಗೆ ಸೂಕ್ತ ತಿಳುವಳಿಕೆ ನೀಡಿ ರಸ್ತೆಗಳಲ್ಲಿ ನಿಲ್ಲದಂತೆ ಸೂಚಿಸಲಾಗಿದೆ.

• ಫಿರ್ಯಾದಿ ನೀಡಲು ಬಂದ ಸಾರ್ವಜನಿಕರಿಗೆ ಸೌಜನ್ಯದಿಂದ ಮಾತನಾಡಿಸಿ ಅವರ ಹೇಳಿಕೆ ಪಡೆದುಕೊಂಡು ಅವರಿಗೆ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ಕಳಿಸಲಾಗುತ್ತದೆ. ಫಿರ್ಯಾದಿ ನೀಡಲು ಬಂದ ಸಾರ್ವಜನಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮುಂತಾದ ಮೂಲ ಸೌಕರ್ಯ ನೀಡಲಾಗುತ್ತದೆ.

• ಯೂತ್ ಕಮಿಟಿ, ನೊಂದವರ ದಿನಾಚರಣೆ, ದಲಿತ ದಿನಾಚರಣೆ, ಮೊಹಲ್ಲಾ ಮೀಟಿಂಗ್ ಮತ್ತು ಗ್ರಾಮ ಸಭೆಗಳನ್ನು ಕೈಗೊಂಡು ಸಾರ್ವಜನಿಕರ ಕುಂದುಕೊರತೆ ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

• ಸಂಚಾರಿ ನಿಯಮಗಳ ಬಗ್ಗೆ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಮಾಡಲಾಗುತ್ತಿದೆ.

• ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಶಾಲಾ ಹೆಣ್ಣು ಮಕ್ಕಳಿಗೆ ಫೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

• ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ಯೂ ಆರ್ ಕೋಡ್ ಮೂಲಕ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.

• ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.

• ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ 598 ಪ್ರಕರಣಗಳಲ್ಲಿ 678 ಆರೋಪಿತರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಒಟ್ಟು 10 ಪ್ರಕರಣಗಳನ್ನು ದಾಖಲಿಸಿ 19 ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ. 

• ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ದ ನಿಗಾ ವಹಿಸಲಾಗುತ್ತಿದೆ. 

• ಜಿಲ್ಲೆಯ ಯಾವುದೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ರೌಡಿ ಷೀಟರ್ ಗಳೊಂದಿಗೆ ಸೇರಿ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಿಲ್ಲ.  ಒಂದು ವೇಳೆ ರೌಡಿ ಷೀಟರ್ ಗಳೊಂದಿಗೆ ಸಂಪರ್ಕದಲ್ಲಿರುವುದು ಕಂಡುಬಂದರೆ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top