ಜೋಗ ಜಲಪಾತಕ್ಕೆ ಜೀವಕಳೆ: ಹಾಲ್ನೊರೆಯ ವೈಭವಕ್ಕೆ ಸಾಕ್ಷಿಯಾಗಲು ಆಗಮಿಸುತ್ತಿದೆ ಪ್ರವಾಸಿಗರ ದಂಡು…..!!!

Kannada Nadu
ಜೋಗ ಜಲಪಾತಕ್ಕೆ ಜೀವಕಳೆ: ಹಾಲ್ನೊರೆಯ ವೈಭವಕ್ಕೆ ಸಾಕ್ಷಿಯಾಗಲು ಆಗಮಿಸುತ್ತಿದೆ ಪ್ರವಾಸಿಗರ ದಂಡು…..!!!

ಬೆಂಗಳೂರು: ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದ್ದು. ಶರಾವತಿ ಕಣಿವೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಜೋಗ ಮೈದುಂಬಿ ಹರಿಯುತ್ತಿದೆ. ಜೋಗ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.

ವ್ಯಾಪಕ ಮಳೆಯಿಂದಾಗಿ ಮಲೆನಾಡಿನ ಜೋಗ ಜಲಪಾತದ ವೈಭವಕ್ಕೆ ಮತ್ತೆ ಮೆರಗು ಬಂದಿದ್ದು, ಈ ನಯನ ಮನೋಹರ ದೃಶ್ಯ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಭೋರ್ಗರೆಯುತ್ತಿರುವ ಜೋಗದ ರಮಣೀಯ ಸೌಂದರ್ಯವನ್ನು ಸವಿಯಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಹಸಿರನ್ನೇ ಹಾಸಿ ಹೊದ್ದಿರುವ ಪ್ರಕೃತಿ…ಎತ್ತರದಿಂದ ಧುಮ್ಮುಕ್ತಿರುವ ಜಲಧಾರೆ…ನೀರಿನ ಸೊಬಗು..ಇದು ವಿಶ್ವವಿಖ್ಯಾತ ಜೋಗಜಲಪಾತದ ರುದ್ರ ರಮಣೀಯ ದೃಶ್ಯ.. ಸತತ ಮಳೆಯಿಂದ ವಿಶ್ವವಿಖ್ಯಾತ ಜೋಗ ಜಲಪಾತ ಮೈತುಂಬಿ ಧುಮ್ಮುಕ್ಕುತ್ತಿದೆ. ಜೋಗದ ವೈಯ್ಯಾರ ನೋಡಲು ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಹಸಿರು ಪ್ರಕೃತಿಯ ನಡುವೆ ಮಂಜುಗಟ್ಟಿದ ವಾತಾವರಣ ಜೋಗ ಜಲಪಾತದ ಕಳೆಯನ್ನು ಇಮ್ಮಡಿಗೊಳಿಸಿದೆ.

ಒಟ್ಟು 930 ಅಡಿ ಎತ್ತರದಿಂದ ರಾಜ, ರಾಣಿ, ರೋರರ್, ರಾಕೆಟ್ ಆಗಿ ಹರಿಯುವ ಜಲಪಾತ ನೋಡುಗರನ್ನು ಪುಳಕಿತರನ್ನಾಗಿಸುತ್ತಿದೆ. ಆ ಜಲಪಾತಗಳ ರುದ್ರರಮಣೀಯ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನೇದಿನೇ ಹೆಚ್ಚುತ್ತಿದೆ. ಶರಾವತಿ ಕಣಿವೆಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಸುರಿಯುವ ಮಳೆಯ ನಡುವೆ ಜೋಗ ಜಲಪಾತವನ್ನು ವೀಕ್ಷಿಸುವುದು ರೋಮಾಂಚನಕಾರಿ ಅನುಭವ.

ವಿವಿಧ ಧಮನಿಗಳಲ್ಲಿ ಮಳೆ ಬೀಳುವಾಗ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಧಾರೆ ಮೋಡದೊಳಗೆ ಮುಸುಕಿಬಿಡುತ್ತದೆ. ರಜಾ ದಿನಗಳಲ್ಲಿ ದಿನವೊಂದಕ್ಕೆ ಸುಮಾರು 2 ಸಾವಿರಕ್ಕೂ ಅಧಿಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಸಾಕ್ಷಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ 180 ಕೋಟಿ ರೂಪಾಯಿ ವೆಚ್ಚದಲ್ಲಿ ಜೋಗ ಜಲಪಾತ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಜೋಗ ಜಲಪಾತವನ್ನು ಎಲ್ಲಾ ಕೋನಗಳಿಂದ ವೀಕ್ಷಿಸಲು ಅನುಕೂಲವಾಗುವಂತೆ ವ್ಯೂವ್ ಡೆಕ್ ಗಳನ್ನು ನಿರ್ಮಿಸಲಾಗುತ್ತಿದೆ. ಇವು ಮೂರು ಹಂತಗಳನ್ನು ಒಳಗೊಂಡಿದ್ದು, ಏಕಕಾಲಕ್ಕೆ 5 ಸಾವಿರ ಜನರು ದಟ್ಟಣೆ ಇಲ್ಲದಂತೆ ನಿಂತು ದುಮ್ಮಿಕ್ಕುವ ಜಲಪಾತವನ್ನು ವೀಕ್ಷಿಸಬಹುದಾಗಿದೆ. ಜಲಪಾತದ ಆವರಣದಲ್ಲಿ ಪ್ರವೇಶದ ದ್ವಾರವನ್ನು ಅತ್ಯಂತ ಆಕರ್ಷಕವಾಗಿ ನಿರ್ಮಿಸಲಾಗುತ್ತಿದೆ.

ಜೋಗದಲ್ಲಿ ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ, ಜೊತೆಯಲ್ಲಿ ಲೇಜರ್ ಕಾರಂಜಿ, ಅದಕ್ಕೆ ಸಂಗೀತ ಅಳವಡಿಕೆ, ಮಕ್ಕಳ ಉದ್ಯಾನವನ, ಆಕರ್ಷಕ ದೇಶಿ ವಸ್ತುಗಳ ಮಾರಾಟ ಮಳಿಗೆ ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ.

ಪ್ರವಾಸಿಗ ಕೃಷ್ಣಮೂರ್ತಿ ಮಾತನಾಡಿ, ವಿಶ್ವವಿಖ್ಯಾತ ಜೋಗಜಲಪಾತವನ್ನು ಜೂನ್‌, ಜುಲೈ ತಿಂಗಳಿನಲ್ಲಿ ವೀಕ್ಷಿಸುವುದೇ ರೋಮಾಂಚನಕಾರಿ ಅನುಭವ. ಜೋಗ ಈಗ ಮೊದಲಿನಂತಿಲ್ಲ. ತುಂಬಾ ಅಭಿವೃದ್ಧಿ ಕಾಣುತ್ತಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಕಾಮಗಾರಿ ಕೈಗೆತ್ತಿಕೊಂಡಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದರು.

ಬೆಂಗಳೂರಿನ ಪ್ರವಾಸಿ ಕವಿತಾ, ಜೋಗ ಜಲಪಾತ ಪ್ರಕೃತಿಯ ರಮಣೀಯತೆಯಿಂದ ಕೂಡಿದೆ. ಪ್ರವಾಸಿಗರು ಇಂತಹ ಸ್ಥಳವನ್ನು ಅಚ್ಚುಕಟ್ಟಾಗಿ ಕಾಪಾಡುವ ಜವಾಬ್ದಾರಿ ನಿಭಾಯಿಸಬೇಕು ಎಂದರು.

ಪ್ರವಾಸಿ ಸುಮನ್ ಮಾತನಾಡಿ, ಮೋಡದ ಮರೆಯಲ್ಲಿ ಮಂಜಿನ ಮಧ್ಯೆ ಜೋಗ ಜಲಪಾತ ನೋಡುವುದೇ ಒಂದು ವಿಶಿಷ್ಟ ಅನುಭವ. ತಾವು ನಯಾಗರ ಜಲಪಾತವನ್ನು ಕೂಡಾ ನೋಡಿದ್ದೇನೆ. ಅದನ್ನೂ ಮೀರಿದ ಅನುಭವ ನಮ್ಮ ಜಲಪಾತ ನೋಡುವಾಗ ಭಾಸವಾಗುತ್ತದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ ಮಾತನಾಡಿ, ರಾಜ್ಯ ಸರ್ಕಾರವು 183.22 ಕೋಟಿ ವೆಚ್ಚದಲ್ಲಿ ವಿಶ್ವವಿಖ್ಯಾತ ಜೋಗಜಲಪಾತದ ಸಮಗ್ರ ಅಭಿವೃದ್ಧಿಯನ್ನು ನಡೆಸುತ್ತಿದ್ದು, ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ನೀಡುವುದೇ ಪ್ರಮುಖ ಉದ್ದೇಶವಾಗಿದೆ ಎಂದರು.

ಒಟ್ಟಿನಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ” ಎನ್ನುವಂತೆ ಕಣ್ಮನ ಸೆಳೆಯುವ ಜಲಪಾತದ ದೃಶ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲವಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";