ಬೆಳಗಾವಿಯಲ್ಲಿ ಉದ್ಯೋಗ ಮೇಳ;ಸರ್ವರಿಗೂ ಉದ್ಯೋಗ ಕಾರ್ಯಕ್ರಮ ಲೋಕಾರ್ಪಣೆ

ಬೆಳಗಾವಿ, ಡಿ. 23 :  ರಾಜ್ಯದಲ್ಲಿ ಶೀಘ್ರದಲ್ಲೇ ಅತ್ಯಂತ ರಚನಾತ್ಮಕವಾದ `ಉದ್ಯೋಗ ನೀತಿ’ಯನ್ನು ಜಾರಿಗೆ ತರಲಾಗುವುದು. ಈ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ಕೊಡುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಲ್ಲಿನ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಸರ್ವರಿಗೂ ಉದ್ಯೋಗ’ ಕಾರ್ಯಕ್ರಮ ಲೋಕಾರ್ಪಣೆ ಮತ್ತುಉದ್ಯೋಗ ಮೇಳ’ವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದುವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಮತ್ತು ಉತ್ತೇಜಕ ಭತ್ಯೆಗಳನ್ನು ಕೊಡಲಾಗುತ್ತಿತ್ತು. ಆದರೆ ಇನ್ನುಮುಂದೆ ಯಾವ ಸಂಸ್ಥೆಯು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ ಎನ್ನುವುದನ್ನು ಆಧರಿಸಿ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ,  ಕೌಶಲ್ಯ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಈ ಮೂರೂ ಅಂಶಗಳು ಒಂದರ ಜೊತೆಯಲ್ಲಿ ಇನ್ನೊಂದಿರುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಶಿಕ್ಷಣ ಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬೆಸೆಯಲಾಗಿದೆ. ಇನ್ನೊಂದೆಡೆಯಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವಾತಾವರಣದೊಂದಿಗೆ ಬೆಸೆಯಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಹತ್ತಾರು ಒಡಂಬಡಿಕೆಗಳನ್ನು ಮಾಡಿಕೊಂಡಿವೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಪ್ರತಿಯೊಬ್ಬ ವಿದ್ಯಾವಂತರಿಗೂ ಅವರಿಗೆ ಆಸಕ್ತಿ ಇರುವಂತಹ ಉದ್ಯೋಗಗಳೇ ದೊರಕುವಂತಾಗಬೇಕು ಎನ್ನುವುದು ಸರಕಾರದ ಸಂಕಲ್ಪವಾಗಿದ್ದು, ಈ ಮಹತ್ವಾ ಕಾಂಕ್ಷೆಯಿಂದಲೇ `ಸಕಲರಿಗೂ ಉದ್ಯೋಗ’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಬೆಳಗಾವಿಯಲ್ಲಿ ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೇಂದ್ರ ಕಚೇರಿ ಇದೆ. ರಾಜ್ಯದ ಒಟ್ಟು 6 ವಿ.ವಿ.ಗಳನ್ನು `ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಮತ್ತು 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ವಿಟಿಯು ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯು ಒಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ, ಬಸವರಾಜ ಭೈರತಿ, ಶಾಸಕ ಅಭಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಸಾವಿರಾರು ಆಸಕ್ತರು, ಅಚ್ಚುಕಟ್ಟುತನದ ಹೆಗ್ಗಳಿಕೆ : ಈ ಉದ್ಯೋಗ ಮೇಳಕ್ಕೆ ಬೆಳಗಾವಿ ಮತ್ತು ಅಕ್ಕಪಕ್ಕದ ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳು 5 ಸಾವಿರಕ್ಕೂ ಹೆಚ್ಚು ಬಿ.ಇ., ಡಿಪ್ಲೊಮಾ ಮತ್ತು ಐಟಿಐ ಪದವೀಧರರು ಉತ್ಸಾಹದಿಂದ ಬಂದಿದ್ದರು. ಬುಧವಾರ ಸಂಜೆಯ ಹೊತ್ತಿಗಾಗಲೇ 5,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಕಿಲ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಗುರುವಾರ ಮೇಳ ಆರಂಭವಾಗುವ ಹೊತ್ತಿಗಾಗಲೇ ಈ ಸಂಖ್ಯೆ ಇನ್ನೂ ಹೆಚ್ಚಾಗಿದ್ದು, ಗೋಗಟೆ ಕಾಲೇಜಿನ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮೇಳದಲ್ಲಿ 57 ಕಂಪನಿಗಳು ನೇರವಾಗಿ ಪಾಲ್ಗೊಂಡಿದ್ದು, ಇವುಗಳಿಗೆಲ್ಲ ಪ್ರತ್ಯೇಕ ಕೌಂಟರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮನ್ನು ಸಂದರ್ಶನಕ್ಕೆ ಆಹ್ವಾನಿಸಿರುವ ಕಂಪನಿಗಳ ಕೌಂಟರುಗಳನ್ನು ತಲುಪುತ್ತಿದ್ದರು. ಮೇಳದಲ್ಲಿ ಎಚ್.ಪಿ., ಓಲಾ, ಎಚ್.ಸಿ.ಎಲ್., ವಿಪ್ರೊ, ಬೈಜೂಸ್, ನಾರಾಯಣ ಗ್ರೂಪ್, ಟಾಟಾ ಬಿಜಿನೆಸ್ ಹಬ್ ಲಿ., ಟೊಯೊಟಾ ಮುಂತಾದ ಹೆಸರಾಂತ ಕಂಪನಿಗಳು ಭಾಗವಹಿಸಿದ್ದವು. ಇದಲ್ಲದೆ, 14 ಕಂಪನಿಗಳು ವರ್ಚುಯಲ್ ಆಗಿ ಪಾಲ್ಗೊಂಡಿದ್ದವು. ಈ ಉದ್ಯೋಗ ಮೇಳವು ಸರಕಾರದ ಬದ್ಧತೆಯ ಪ್ರತೀಕವಾಗಿದೆಯೇ ವಿನಾ ಪ್ರಚಾರ ಗಿಟ್ಟಿಸಿಕೊಳ್ಳಲೆಂದು ಇದನ್ನೆಲ್ಲ ಮಾಡುತ್ತಿಲ್ಲ. ಇಲ್ಲಿ ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಮಾಡಲಾಗಿದೆ. ಇದಕ್ಕಾಗಿ ನಾನು ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಅಶ್ವತ್ಥನಾರಾಯಣ ಅವರನ್ನು ಅಭಿನಂದಿಸುತ್ತೇನೆ.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ : ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು. ಜೊತೆಯಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಭೈರತಿ, ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top