ಕೆ.ಆರ್.ಪುರ : ಜೈ ಶ್ರೀ ರಾಮ್ ಘೋಷಣೆ ಭಕ್ತಿಯನ್ನು ಹುಟ್ಟುಸಬೇಕೆ ಹೊರತು, ದ್ವೇಷವನ್ನಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರು ಕೆ ಆರ್ ಪುರಂ ಬಳಿಯ ಬಿದರಹಳ್ಳಿ ಹೋಬಳಿ, ಹಿರಂಡನ ಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ದೇವಾಲಯ ಮತ್ತು 33 ಅಡಿ ಎತ್ತರದ ಏಕಶಿಲಾ ಆಂಜನೇಯ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಸರ್ಕಾರ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದೆ, ಸ್ವಾತಂತ್ರ್ಯಾ ನಂತರ ದೇಶದ ಆಡಳಿತದ ಚುಕ್ಕಾಣಿ ಹಿಡಿದು ನೂರಾರು ದೇವಾಲಯಗಳನ್ನು ಅಭಿವೃದ್ಧಿಪಡಿಸಿದೆ ಗಮುಜರಾಯಿ ಇಲಾಖೆ ಮತ್ತು ಪುರಾತತ್ವ ಇಲಾಖೆ ಸ್ಥಾಪಿಸಿ ಸಂರಕ್ಷಣೆ ಮಾಡಿದೆ. ಆದರೆ ಎಂದಿಗೂ ದೇವಾಲಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ ಎಂದರು.
ರಾಮಾಯಣ ಮತ್ತು ಮಹಾಭಾರತ ಭಾರತದ ಎರಡು ಕಣ್ಣುಗಳಿದ್ದಂತೆ ಅದೇ ರೀತಿ ಕರ್ನಾಟಕದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳಾಗಿವೆ ಎಂದರು.
ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಎಲ್ಲಾ ಘಟನೆಗಳು ನಮ್ಮ ಉತ್ತಮ ಜೀವನಕ್ಕೆ ಅಡಿಪಾಯವಾಗಿವೆ. ಶ್ರೀರಾಮ ಪಿತೃವಾಕ್ಯ ಪರಿಪಾಲನೆ ಮಾಡಿದ, ಲಕ್ಷ್ಮಣ ಕಷ್ಟಕಾಲದಲ್ಲಿ ಸೋದರನ ಹೊಣೆಯನ್ನು ನಿಭಾಯಿಸಿದ, ಭರತ ರಾಮನ ಪಾದುಕೆ ಇಟ್ಟು ರಾಜ್ಯಭಾರ ಮಾಡಿ ಆದರ್ಶಪ್ರಾಯನಾದ ಎಂದರು.
ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಗೆ ನಡೆಯಬೇಕು ಎಂಬ ನೀತಿಯನ್ನು ಭಗವದ್ಗೀತೆಯಲ್ಲಿ ವಿವರಿಸಿದ್ದರೆ, ರಾಮ ಹೇಗೆ ಬದುಕಬೇಕು ಎಂದು ನಡೆದು ತೋರಿಸಿದ್ದಾರೆ ಎಂದು ತಿಳಿದರು.
ಹೀಗಾಗಿಯೇ ಹಿರಿಯರು ಶ್ರೀರಾಮ ನಡೆದಂತೆ ನಡೆಯಬೇಕು; ಶ್ರೀ ಕೃಷ್ಣ ಗೀತೆಯಲ್ಲಿ ನುಡಿದಂತೆ ನಡೆಯಬೇಕು ಎಂದು ಹೇಳುತ್ತಾರೆ,ನಾವೆಲ್ಲರೂ ಶ್ರೀ ರಾಮನ ನಡೆದಂತೆ ನಡೆಯೋಣ ಎಂದು ಹೇಳಿದರು.
ರಾಮರಾಜ್ಯ ಎಂದರೆ ಎಲ್ಲರನ್ನೂ ಒಳಗೊಂಡ ನೆಮ್ಮದಿಯ ಸುಖಿರಾಜ್ಯ. ಅಂದರೆ ಪ್ರತಿಯೊಬ್ಬರೂ ಶಾಂತಿ ನೆಮ್ಮದಿಯಿಂದ ಇರಬೇಕು, ನಮ್ಮ ಧರ್ಮವನ್ನು ಗೌರವಿಸಬೇಕು. ಅನ್ಯ ಧರ್ಮದೊಂದಿಗೆ ಸಹಿಷ್ಣುತೆ ಇರಬೇಕು. ಹಾಗಾದಾಗ ಮಾತ್ರ ದೇಶ ನೆಮ್ಮದಿಯಿಂದ ಇರಲು ಸಾಧ್ಯ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬಸವ, ಬುದ್ಧ, ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಪಾಲಿಸುತ್ತಾ ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸುತ್ತಿದೆ, ಶ್ರೀರಾಮನ ತತ್ವ ಆದರ್ಶಗಳನ್ನು ಪಾಲಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.