ಜೈನಮುನಿಯ ಹತ್ಯೆ ಪ್ರಕರಣ ವಿಧಾನ ಮಂಡಲ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು

ಬೆಂಗಳೂರು : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಳಿಯ ನಂದಿ ಆಶ್ರಮದ ಜೈನಮುನಿಯ ಹತ್ಯೆ ಪ್ರಕರಣ ವಿಧಾನ ಮಂಡಲ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ಸದಸ್ಯರುಗಳು ಈ ಹತ್ಯೆಯನ್ನು ಖಂಡಿಸಿದ್ದು, ಬಿಜೆಪಿ ಸದಸ್ಯರುಗಳು ಸಿಬಿಐ ತನಿಖೆಗೆ ಆಗ್ರಹಿಸಿದರು.

ವಿಧಾನಸಭೆಯಲ್ಲಿಂದು ಸದನ ಆರಂಭವಾಗುತ್ತಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಲುವಳಿ ಸೂಚನೆಯಡಿ ಜೈನ ಮುನಿಯ ಹತ್ಯೆ ಪ್ರಕರಣ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಲ್ಲಿ ಮನವಿ ಮಾಡಿದರು.  ಆಗ ಸಭಾಧ್ಯಕ್ಷರು ನಿಲುವಳಿ ಸೂಚನೆಯಡಿ ಬೇಡ, ಶೂನ್ಯ ವೇಳೆಯಲ್ಲಿ ವಿಷಯದ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು. ಅದರಂತೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಿದರು. ಆಗ ಮಾತನಾಡಿದ ಬಿಜೆಪಿಯ ಅಭಯ್‌ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್, ಶಶಿಕಲಾ ಜೊಲ್ಲೆ ಇವರುಗಳು ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿಯವರು ಈ ಹತ್ಯೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆದು ತಪ್ಪಿತಸ್ಥರಿಗೆ ಮರಣ ದಂಡನೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಅಭಯ ಪಾಟೀಲ್ ಅವರು, ಜೈನಮುನಿಯ ಕೊಲೆ ಖೇದಕರ ಘಟನೆಯಾಗಿದ್ದು, ಯಾರೂ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ. ಇತಿಹಾಸದಲ್ಲೇ ಎಂದೂ ನಡೆಯದಂತಹ ಕೃತ್ಯ ಇದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಕೃತ್ಯ ಇಡೀ ಜೈನ ಸಮುದಾಯದ ಹೆಸರು ಕೆಡಿಸುವಂತಿದೆ. ಪ್ರಕರಣದಲ್ಲಿ ಪೊಲೀಸರ ಮೇಲೆ ಒತ್ತಡ ಇರುವುದು ಗೊತ್ತಾಗಿದೆ. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.ಜೈನ ಮುನಿಗಳ ಕೊಲೆಯಲ್ಲಿ ಮೊದಲ ಆರೋಪಿಯಾದ ನಾರಾಯಣ ಮಾಳಿಯನ್ನು ಮಾತ್ರ ಬಂಧಿಸಿ, ಎರಡನೇ ಆರೋಪಿಯನ್ನು ಮುಚ್ಚಿಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಲಕ್ಷ್ಮಣಸವದಿ ಅವರು ಜೈನ ಮುನಿಗಳ ಹತ್ಯೆಯು ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದಾಗಿದೆ. ಯಾರೂ ನಿರೀಕ್ಷಿಸದಂತಹ ಭೀಕರ ಕೊಲೆ ನಡೆದಿದೆ. ಇದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಮರಣ ದಂಡನೆ ಶಿಕ್ಷೆಯಾಗುವಂತೆ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ನಂದಿ ಮಹಾರಾಜರು ನನ್ನ ಸ್ವಗ್ರಾಮದ ಪಕ್ಕದ ಕೋಟಕಪ್ಪ ಗ್ರಾಮದವರು. ೧೯೬೪ ರಲ್ಲಿ ಜನಿಸಿದ ಅವರು ದೆಹಲಿಯ ಅಶ್ರಮವೊಂದರಲ್ಲಿ ೧೫ ವರ್ಷಗಳ ಕಾಲ ನೆಲೆಸಿ ದೇಶಕ್ಕೆ ಶಾಂತಿ, ಅಹಿಂಸೆಯ ಸಂದೇಶ ಸಾರಿದರು. ಬಹುದೊಡ್ಡ ಜಮೀನ್ದಾರ ಹೂಗಾರ ಮನೆತನಕ್ಕೆ ಸೇರಿದ ಇವರು ಮುನಿಗಳಾಗುವ ಕಠೋರ ವ್ರತ ಮಾಡಿದ್ದಾರೆ. ಶರೀರ ದಂಡನೆ, ೨೪ ಗಂಟೆಗೆ ಒಂದು ಬಾರಿ ಆಹಾರ ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದರು.

ಇವರ ಹತ್ಯೆ ನಡೆದಿರುವುದು ಆಘಾತ ತಂದಿದೆ. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಬೇಕು. ಗೃಹ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದರು.ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಅಭಯ್ ಪಾಟೀಲ್ ಅವರು ರೊಕ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಿ ಎಂದು ಲಕ್ಷ್ಮಣಸವದಿಯವರನ್ನು ಉದ್ದೇಶಿಸಿ ಹೇಳಿದರು.

ಆಗ ಲಕ್ಷ್ಮಣಸವದಿಯವರು ಪತ್ರಿಕೆಗಳಲ್ಲಿ ಬಂದಿದ್ದೆಲ್ಲ ಬ್ರಹ್ಮಲಿಪಿ ಎಂದು ನಾನು ಹೇಳಲ್ಲ. ಕೆಲವರು ತಮ್ಮದೇ ಆದ ವರದಿಗಳನ್ನು ಬರೆದಿದ್ದಾರೆ. ತನಿಖೆಯಾಗಲಿ. ಎಲ್ಲವೂ ಹೊರ ಬರುತ್ತದೆ ಎಂದರು.ನಂತರ ಮಾತನಾಡಿದ ಬಿಜೆಪಿ ಶಶಿಕಲಾ ಜೊಲ್ಲೆ ಅವರು, ಜೈನಮುನಿಯವರ ಗ್ರಾಮ ನನ್ನ ಸ್ವಂತ ಊರಿಗೆ ೭-೮ ಕಿಲೋ ಮೀಟರ್ ದೂರದಲ್ಲಿದೆ. ಅವರ ಹತ್ಯೆ ಆಘಾತ ತಂದಿದೆ. ಆ ಜಾಗದಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ದರು. ಈ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದಾದ ನಂತರ ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಜೈನ ಮುನಿಗಳ ಹತ್ಯೆಯಾಗಿ ಮೂರು ದಿನ ಕಳೆದರೂ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿಲ್ಲ. ಬೇರೆ ಕೋಮಿನವರು ಆಗಿದ್ದರೆ ಸುಮ್ಮನಿರುತ್ತಿದ್ದರೆ. ಹಿಂದೂಗಳಿಗೆ ರಕ್ಷಣೆ ಇಲ್ಲವೇ ಎಂದು ಪ್ರಶ್ನಿಸಿದರು.

ಜೈನ ಮುನಿಗಳು ಕಠಿಣ ವ್ರತ ಆಚರಿಸಿ ಅಹಿಂಸಾ ಸಂದೇಶ ಸಾರುವವರು. ಅಂತಹವರು ಯಾವುದೇ ಕಾರಣಕ್ಕೂ ಹಣಕಾಸು ವ್ಯವಹಾರ ಮಾಡಲು ಸಾಧ್ಯವಿಲ್ಲ. ಜಾತಿ ಆಧಾರದ ಮೇಲೆ ಭಯಾನಕ ಹತ್ಯೆಯನ್ನು ನೋಡಬಾರದು. ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷೆ ನೀಡಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಮ್ಮ ಪೊಲೀಸ್ ವ್ಯವಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಜೈನ ಮುನಿಗಳ ಹತ್ಯೆಯು ಭಯಾನಕವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು. ಬಿಜೆಪಿಯ ಸುನೀಲ್‌ಕುಮಾರ್ ಮಾತನಾಡಿ, ಈ ಭಯಾನಕ ಕೃತ್ಯದಿಂದ ರಾಜ್ಯದ ಜನತೆ ಆಘಾತಕ್ಕೆ ಒಳಗಾಗಿದ್ದಾರೆ. ಪ್ರಕರಣದಲ್ಲಿ ಮೊದಲ ಆರೋಪಿಯನ್ನು ಬಹಿರಂಗ ಪಡಿಸಿ, ಉಳಿದ ಆರೋಪಿಗಳ ಹೆಸರನ್ನು ಬಹಿರಂಗ ಮಾಡುತ್ತಿಲ್ಲ. ಯಾವ ಕಾರಣಕ್ಕೆ ಇತರ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಜೈನ ಮುನಿಗಳು ಉಪಹಾರ ಸೇವನೆಯಲ್ಲೂ ಬಹಳ ಕಟ್ಟುನಿಟ್ಟು. ಅವರ ಬಗ್ಗೆ ನಮಗೆ ಗೌರವ ಹೆಚ್ಚಾಗಬೇಕು. ಹಣಕಾಸಿನ ವ್ಯವಹಾರವನ್ನು ಅವರು ಮಾಡುತ್ತಾರೆ ಎಂಬುದನ್ನು ಯಾರೂ ನಂಬಲು ಸಾಧ್ಯವಿಲ್ಲ. ಕ್ರೂರವಾಗಿ ನಡೆದ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಸಿದ್ದು ಸವದಿ ಮಾತನಾಡಿ, ಜೈನ ಮುನಿಗಳನ್ನು ಭಯಾನಕವಾಗಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದರೂ ತಪ್ಪಿಲ್ಲ. ಮರಣ ದಂಡನೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಈ ಮಧ್ಯೆ ವಿಧಾನ ಪರಿಷತ್ತಿನಲ್ಲೂ ಜೈನಮುನಿ ಹತ್ಯೆ ಮಾರ್ದನಿಸಿತು. ಪ್ರತಿಪಕ್ಷಗಳ ಸದಸ್ಯರು ಘಟನೆಯನ್ನು ತೀವ್ರವಾಗಿ ಖಂಡಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಉತ್ತರಿಸಿದ ಜೈನಮುನಿ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಡಿವೈಎಸ್‌ಪಿ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top