ಸರ್ಕಾರಿ ಜಮೀನು ಭೂಗಳ್ಳರಿಂದ ಉಳಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಚಿಕ್ಕೋಬದೇನಹಳ್ಳಿ ಗ್ರಾಮಠಾಣಾದಲ್ಲಿ ಸುಮಾರು 46 ನಿವೇಶನಗಳಿಗೆ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ , ಸರ್ಕಾರಿ ಭೂ ಕಬಳಿಕೆ ಮಾಡಿರುವ ಚಿಕ್ಕೋಬದೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿಶ್ವನಾಥಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷ , ಅಧ್ಯಕ್ಷ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ತಿನ ಪ್ರಭಾರ ಅಧ್ಯಕ್ಷರಾಗಿದ್ದ ಬೀರಪ್ಪರವರು ಸರ್ಕಾರ ಭೂ ಕಬಳಿಕೆ ನಿವೇಶನಗಳನ್ನು ಅಕ್ರಮವಾಗಿ ಪರಬಾರೆ ಮಾಡಿ ಸರ್ಕಾರಕ್ಕೆ 15 ರಿಂದ 20 ಕೋಟಿ ನಷ್ಟ ಉಂಟು ಮಾಡಿದ್ದು ಇವರ ಮೇಲೆ ಸರ್ಕಾರಿ ಭೂ ಕಬಳಿಕೆ ಕಾಯ್ಡಿಯಡಿ ತಕ್ಷಣ ಬಂಧಿಸಿ , ಜೈಲಿಗೆ ಕಳುಹಿಸಬೇಕೆಂದು ಹಾಗೂ ಉಚ್ಚ ನ್ಯಾಯಾಲಯದಲ್ಲಿ ಹಾಕಿರುವ ರಿಟ್ ಪಿಟಿಷನ್ ಗಳನ್ನು ಕೂಡಲೇ ವಜಾಗೊಳಿಸಿ ಸರ್ಕಾರಿ ಗ್ರಾಮ ಠಾಣಾ ಜಮೀನನ್ನು ಯಥಾಸ್ಥಿತಿಗೆ ಸರ್ಕಾರದ ಸುಪರ್ಧಿಗೆ ಪಡೆದುಕೊಳ್ಳಬೇಕೆಂದು , ಹಾಗೂ ತಂತಿ ಬೇಲಿಯನ್ನು ಹಾಕಿ ಯಥಾಸ್ಥಿತಿ ಸಂರಕ್ಷಿಸಬೇಕೆಂದು ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನದ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಒತ್ತಾಯಿಸಿದರು.

ದೇವನಹಳ್ಳಿ ಪಟ್ಟಣದ ಮಿನಿ ವಿಧಾನಸೌಧ ಆವರಣದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಶಾಖೆ ವತಿಯಿಂದ ರಾಜ್ಯ ಸರ್ಕಾರದ ಹಾಗೂ ಭೂಕಬಳಿಕೆ ಕೋರರ ವಿರುದ್ಧ ಪ್ರತಿಭಟಿಸಿ ಧಿಕ್ಕಾರ ಕೂಗಿ ಮಾತನಾಡಿ, ಕರ್ನಾಟಕ ಸರ್ಕಾರ ಭೂ ಕಬಳಿಕೆ ನಿಷೇಧ ಅಧಿನಿಯಮ 2011 ಇತ್ತೀಚಿನ ಸರ್ಕಾರಿ ನೋಟಿಫಿಕೇಷನ್ ಪ್ರಕಾರ ಅಂದಿನ ವಿಶ್ವನಾಥಪುರ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆಗಿ ಅದೇ ಗ್ರಾಮ ಪಂಚಾಯತಿಯಲ್ಲಿ ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಯರಾಮೇಗೌಡ ಪ್ರಸ್ತುತ ಹಾಲಿ ಬಿದಲೂರು ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು , ಹಾಗೂ ಜಮುನ ಅಂದಿನ ವಿಶ್ವನಾಥಪುರ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಪ್ರಸ್ತುತ ಗ್ರಾಮಾಂತರ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರುಗಳನ್ನು ಸರ್ಕಾರದ ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಸರ್ಕಾರಿ ಭೂ ಕಬಳಿಕೆಯಡಿ ಕಾನೂನು ಶಿಕ್ಷೆ ವಿಧಿಸಬೇಕು ಎಂದರು.

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ರೈತರ ಮತ್ತು ಸಾಮಾನ್ಯ ಜನರ ಪಾಲಿಗೆ ಸಂಪೂರ್ಣ ಸತ್ತಂತ್ತಾಗಿದೆ ಸರ್ಕಾರಕ್ಕೆ ಎಚ್ಚರಿಸಲು ಇಂದು ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ತಾಲ್ಲೂಕು ಪಂಚಾಯತಿ ಮುಂಭಾಗ ಅನಿರ್ದಿಷ್ಟ ಧರಣಿ ಮಾಡುವುದಾಗಿ ತಿಳಿಸಿ ಇದೇ ರೀತಿ ಉದಾಸೀನವನ್ನು ಅಧಿಕಾರಿಗಳು ಮುಂದುವರೆಸಿದರೆ ಉಗ್ರ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ರೈತ ಸಂಘದ ಮುಖ್ಯಸ್ಥ ಸಿದ್ದಾರ್ಥ ಎಚ್ಚರಿಸಿದರು. ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸಿ ನಂತರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತಕುಮಾರ್ ಹಾಗೂ ಶಿರಸ್ಥೆದಾರ್ ಭರತ್ ರವರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ ತಾಲ್ಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಬೆಂಗಳೂರು ನಗರ ಅಧ್ಯಕ್ಷ ಅಯೂಬ್ ಖಾನ್, ಯಲಹಂಕ ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಮುಖಂಡರಾದ, ಚನ್ನಮಾರಪ್ಪ, ಅರುಣಾ, ಆಲೂರು ಮುನಿರಾಜು, ಬಿದಲೂರು ರಮೇಶ್, ರಾಮಾಂಜಿನಪ್ಪ, ರತ್ನಮ್ಮ, ಗೂಳ್ಯ ಹನುಮಯ್ಯ ಹಾಗೂ ರೈತ ಸಂಘದ ಮತ್ತು ಪಿ.ವಿ.ಸಿ ಸ್ವಾಭಿಮಾನ ಸಂಘಟನೆಯ ಪದಾಧಿಕಾರಿಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top