ಸಚಿನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಈಶ್ವರಪ್ಪ

ಬೆಂಗಳೂರು,ಏ, 14; ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮತ್ತು ಶೇ 40 ರಷ್ಟು ಕಮೀಷನ್ ಆರೋಪದ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆಗೆ ಕೊನೆಗೂ ಮಣಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪಡೆಯುವಂತೆ ನೀಡಿದ ಕಡಕ್ ಸೂಚನೆ ನೀಡಿದ್ದರು. ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ತೀರ್ಮಾನ ಪ್ರಕಟಿಸಿದರು.

ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ, ವಿಧಾನಸೌಧದ ಪೂರ್ವದ್ವಾರದಲ್ಲಿ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಕರೆದ ಈಶ್ವರಪ್ಪ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತ್ಯಾಗ ಪತ್ರ ಸಲ್ಲಿಸುವುದಾಗಿ ಹೇಳಿದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರಿಗೆ ಇರಿಸು, ಮುರಿಸು, ಮುಜುಗರ ಉಂಟಾಗಬಾರದು ಎಂಬ ಒಂದೇ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ, ನಾಳೆ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.

ಇಡೀ ಪ್ರಕರಣದಲ್ಲಿ ತಮ್ಮದು ಒಂದೇ ಒಂದು ತಪ್ಪು ಇಲ್ಲ. ಹಾಗೇನಾದರೂ ತಪ್ಪು ಮಾಡಿದ್ದರೆ ದೇವರು ತಮಗೆ ಶಿಕ್ಷೆ ಕೊಡಲಿ. ಆದರೆ ತಮಗೆ ಅದಮ್ಯ ವಿಶ್ವಾಸವಿದೆ, ಈ ಎಲ್ಲಾ ಆರೋಪಗಳಿಂದ ಮುಕ್ತವಾಗಿ ಹೊರ ಬರುತ್ತೇನೆ. ತಾಯಿ ಚೌಡೇಶ್ವರಿ ತಮ್ಮನ್ನು ರಕ್ಷಿಸುತ್ತಾಳೆ ಎಂದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ತಾವು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದು, ಸಮಗ್ರ ತನಿಖೆಗೆ ಒಪ್ಪಿದ್ದಾರೆ. ಬಳಿಕ ಸತ್ಯಾಂಶ ಹೊರ ಬರಲಿದೆ ಎಂದರು. ತಾವು ಇಷ್ಟು ಸಮಯ ಸಚಿವರಾಗಿ ಕೆಲಸ ಮಾಡಲು ಸಹಕರಿಸಿದ ಹಿರಿಯರು, ನನಗೆ ಬೆಂಬಲ ನೀಡಿದ ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಿಕ್ಕಿದ್ದು ನನ್ನ ಪುಣ್ಯ, ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ. ಆದರೆ ಈ ಪ್ರಕರಣದಲ್ಲಿ ನಾನು ಬಲಿಪಶು ಆಗುವುದಿಲ್ಲ ಎಂದರು.

ಈ ಮಧ್ಯೆ ಒಂದೆರಡು ದಿನಗಳಲ್ಲಿ ಈಶ್ವರಪ್ಪ ರಾಜೀನಾಮೆ ನೀಡಬಹುದು ಎನ್ನುವ ಸುದ್ದಿ ಹರಡಿತ್ತು. ಬಿಜೆಪಿಯ ಮತ್ತೊಂದು ಮೂಲದ ಪ್ರಕಾರ ಹೊಸಪೇಟೆಯಲ್ಲಿ ಇದೇ 16 ಮತ್ತು 17 ರಂದು ನಡೆಯಲಿರುವ ಬಿಜೆಪಿ ಕಾರ್ಯಕಾರಿ ಸಭೆಯ ಬಳಿಕ ರಾಜೀನಾಮೆ ಪಡೆಯುಬಹುದು ಎನ್ನಲಾಗಿತ್ತು. ರಾಜೀನಾಮೆ ಪಡೆಯದಿದ್ದರೆ ಪ್ರಕರಣ ಬೇರೆ ಸ್ವರೂಪ ಪಡೆಯಬಹುದು. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರವಾಗಬಹುದು ಎನ್ನುವ ಕಾರಣಕ್ಕೆ ಹೈಕಮಾಂಡ್ ರಾಜೀನಾಮೆ ಪಡೆಯುವಂತೆ ಆದೇಶಿಸಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top