ಕೇಂದ್ರದಿಂದ ಅನ್ಯಾಯ ಆಗಿದೆಯೇ? ಬಹಿರಂಗ ಚರ್ಚೆಗೆ ಬನ್ನಿ : ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ

ಆರ್ಥಿಕ ತಜ್ಞರು, ಮಾಧ್ಯಮಗಳು, ಸಾರ್ವಜನಿಕರ ಮುಂದೆ ಚರ್ಚೆ ನಡೆಸೋಣ

ಅನ್ಯಾಯ ಎಂದಾದರೆ ರಾಜ್ಯಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದಾಗ ಖರ್ಗೆ ಯಾಕೆ ಸುಮ್ಮನಿದ್ದರು?

ಬೆಂಗಳೂರು: ತೆರಿಗೆ, ಅನುದಾನ ತಾರತಮ್ಯದ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು ಅವರು.

ರಾಷ್ಟ್ರದ ಹಿರಿಯ, ನುರಿತ ಆರ್ಥಿಕ ತಜ್ಞರನ್ನು, ಮಾಧ್ಯಮಗಳನ್ನು ಕೂಡಿಸಿಕೊಂಡು ಎಲ್ಲರ ಎದುರು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದು ನೀವು ನಿರೂಪಿಸಿದರೆ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ. ನಿಮ್ಮಲ್ಲಿರುವ ಮಾಹಿತಿಯನ್ನು ನಾಡಿನ ಮುಂದೆ ಇಡಿ. ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಸವಾಲು ಹಾಕಿದರು.

 

ವೀರಾವೇಷದಿಂದ ಸದನದ ಒಳಗೆ ಭಾಷಣ ಮಾಡುತ್ತಿದ್ದಾರೆ ಮುಖ್ಯಮಂತ್ರಿ. ಕನ್ನಡಿಗರಿಗೆ ಅನ್ಯಾಯ ಆಯಿತು ಎನ್ನುತ್ತಾರೆ. ಕೇಂದ್ರ ಸರ್ಕಾರದಿಂದ ಹಣ ಬರಲಿಲ್ಲ, ಬರಪೀಡಿತ ರೈತರಿಗೆ ಪರಿಹಾರ ಕೊಡಿ ಎಂದರೆ 2000 ರೂ. ಕೊಡುತ್ತಾರೆ. ಈ 2000 ರೂ.ನಲ್ಲಿ 25% ರಾಜ್ಯದ್ದು, ಉಳಿದ 75% ಕೇಂದ್ರದ್ದು. 2624 ಕೋಟಿ ರೂ. ಎಸ್ ಡಿಆರ್ ಎಫ್ ನಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಾರಲ್ಲಾ.. ಈ ಹಣದಲ್ಲಿ 75% ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡಿದೆ. ಎನ್ ನಾವು ಕೊಟ್ಟೆವು ಎಂದು ಇವರು ಹೇಳಿದ್ದೇ ಹೇಳಿದ್ದು. ನಾನು ಹೇಳೋದೇ ಸತ್ಯ, ನಾನು ಹೇಳೋದೇ ಸತ್ಯ ಎಂದು ಹೇಳ್ತಾನೇ ಇದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೆ ಸತ್ಯ ಮಾಡು ಎಂದು ನಮ್ಮ ಹಿರಿಯರು ಗಾದೆ ಮಾತು ಹೇಳಿದ್ದಾರೆ, ಅದನ್ನು ನಮ್ಮ ಮುಖ್ಯಮಂತ್ರಿಗಳು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕನ್ನಡಿಗರಿಗೆ ಅನ್ಯಾಯ, ಕನ್ನಡಿಗರಿಗೆ ಅನ್ಯಾಯ ಎಂದು ಜಾಗಟೆ ಹೊಡೆಯುತ್ತಿರಲ್ಲ, ಅಲ್ಲಿ ಆನೆ ತುಳಿದು ಸತ್ತರೆ 15 ಲಕ್ಷ ರೂ. ಕೊಡುತ್ತೀರಿ. ಇಲ್ಲಿ ಆನೆ ತುಳಿದು ಸತ್ತರೆ 5 ಲಕ್ಷ ಕೊಡುತ್ತೀರಿ. ಅದನ್ನು ಪಡೆಯುವುದಕ್ಕೆ ಐವತ್ತು ಸಲ ಕಚೇರಿಗಳಿಗೆ ಅಳೆಯಬೇಕು. ನಿಮ್ಮ ನೀತಿ ಹೇಗಿದೆ ಎಂದರೆ; ರಾಜ್ಯಕ್ಕೆ ಅನ್ಯಾಯ! ಕೇರಳಕ್ಕೆ ನ್ಯಾಯ!! ಎನ್ನುವಂತೆ ಆಗಿದೆ ಎಂದರು ಮಾಜಿ ಮುಖ್ಯಮಂತ್ರಿಗಳು.

ಸಿದ್ದರಾಮಯ್ಯ ಅವರು ತಮ್ಮ ರಾಷ್ಟ್ರೀಯ ನಾಯಕರ ಸಲಹೆ ಮೇರೆಗೆ 15 ಲಕ್ಷ ರೂ. ಕೊಟ್ಟಿದ್ದಾರೆ. ನಾನೆಲ್ಲೂ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ ಎಂದು ಹೇಳಿಲ್ಲ. ನಮ್ಮ ರೈತರಿಗೆ ಬರ ಪರಿಹಾರ ಎಂದು ಎರಡು ಸಾವಿರ ರೂ. ಘೋಷಣೆ ಮಾಡುತ್ತಾರೆ. ಕೇರಳದವಗೆ 15 ಲಕ್ಷ ರೂ. ಕೊಡುತ್ತಾರೆ. ಕೇಳಿದರೆ ಕೇಂದ್ರದಿಂದ ಪರಿಹಾರವೇ ಬಂದಿಲ್ಲ ಅಂತ ಹೇಳುತ್ತಾರೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಎನ್ನುತ್ತಾರೆ. ಸಾವಿರ ಸಲ ಸುಳ್ಳು ಹೇಳಿ ಅದನ್ನೇ ನಿಜ ಮಾಡುವ ರೀತಿ ಇವರು ಬರೀ ಸುಳ್ಳುಗಳನ್ನ್ನೆ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.

ಹಣಕಾಸು ಆಯೋಗದ ಮುಂದೆ ಮಾಹಿತಿ ಕೊಡಿ:

 

ರಾಜ್ಯ ರಾಜ್ಯ ಸರಕಾರಕ್ಕೆ ನನ್ನ ಸಲಹೆ ಇಷ್ಟೇ. ಈಗ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಆಯೋಗ ರಾಜ್ಯಕ್ಕೆ ಬಂದಾಗ ಸರಿಯಾದ ಮಾಹಿತಿ ಕೊಟ್ಟು ಹಕ್ಕು ಮಂಡಿಸಿ.ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟರೆ ಅಥವಾ ದೂರಿದರೆ ಉಪಯೋಗ ಇಲ್ಲ. ತೆರಿಗೆ ಪಾಲು, ಅನುದಾನ ಹಂಚಿಕೆ ಮಾಡುವುದು ಆಯೋಗವೇ ಹೊರತು ಕೆಂದ್ರವಲ್ಲ. ಈಗಾಗಲೇ ಕೇಂದ್ರದಿಂದ ಬಂದಿರುವ ಹಣವನ್ನು ಸರ್ಕಾರ ಸದ್ಬಳಕೆ ಮಾಡಿಲ್ಲ. ಆ ಬಗ್ಗೆ ಇವರು ಚಕಾರ ಎತ್ತುತ್ತಿಲ್ಲ ಎಂದು ಅವರು ದೂರಿದರು.

ಖರ್ಗೆ ಯಾಕೆ ಸುಮ್ಮನೆ ಇದ್ದರು?:

ರಾಜ್ಯಕ್ಕೆ ಅನ್ಯಾಯ ಆದರೆ ನಾವು ಸುಮ್ಮನೆ ಇರುವ ಪ್ರಶ್ನೆಯೇ ಇಲ್ಲ. ರಾಜ್ಯಸಭೆಯಲ್ಲಿ ಮೇಕೆದಾಟು ವಿಷಯದಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಮಾತನಾಡಿದಾಗ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ? ಅವರು ದನಿ ಎತ್ತಿದರೆ ನಿಮ್ಮ ಪಕ್ಷದ ಒಬ್ಬರೂ ಮಾತನಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಇದ್ದರಲ್ಲ, ಭಾವೀ ಪ್ರಧಾನಿ ಎಂದು ಹೇಳಿಕೊಂಡು ತಿರುಗುತ್ತಿದ್ದಿರಿ. ಅವರೇಕೆ ಮಾತನಾಡಲಿಲ್ಲ? ಇಲ್ಲಿ ಅನ್ಯಾಯ ಆಗಿದ್ದರೆ ಅವರು ಬಾಯಿ ತೆಗೆಯಬೇಕಿತ್ತಲ್ಲ.. ಅವರು ಯಾಕೆ ಮೌನವಾಗಿ ಇದ್ದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

 

ಮಾಜಿ ಸಚಿವರಾದ ಸಿಸಿ ಪಾಟೀಲ್, ಶಾಸಕರಾದ ಸಮೃದ್ಧಿ ಮಂಜುನಾಥ್, ಕರೆಮ್ಮ ನಾಯಕ್ ಅವರು ಈ ಸಂದರ್ಭದಲ್ಲಿ ಇದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top