20 ಕಡೆಗಳಲ್ಲಿ ಆರೋಗ್ಯ ಸೇವೆ, 150 ಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆ : ಸರ್ಜನ್ ಗಳ ಆರೋಗ್ಯ ತಪಾಸಣೆಗೆ ಒತ್ತು
ಬೆಂಗಳೂರು: ಈ ತಿಂಗಳ 25 ರಂದು ಅಂತರರಾಷ್ಟ್ರೀಯ ಶಸ್ತ್ರ ಚಿಕಿತ್ಸಾ ತಜ್ಞರ ದಿನ [ಸರ್ಜನ್ಸ್ ಡೇ] ದ ಹಿನ್ನೆಲೆಯಲ್ಲಿ ಈ ಬಾರಿ 150ಕ್ಕೂ ಹೆಚ್ಚು ಉಚಿತ ಶಸ್ತ್ರ ಚಿಕಿತ್ಸೆ ನಡೆಸುವ ಜೊತೆಗೆ ರಾಜ್ಯದ 20ಕ್ಕೂ ಹೆಚ್ಚು ಕಡೆಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು. ಇದಲ್ಲದೇ ಮೊದಲ ಬಾರಿಗೆ ಜೀವ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುವ ಸರ್ಜನ್ ಗಳ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗಿದೆ ಎಂದು ಕರ್ನಾಟಕ ಸ್ಟೇಟ್ ಚಾಪ್ಟರ್ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ. ಎಚ್.ವಿ. ಶಿವರಾಮ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸಾ ತಜ್ಞರುಗಳು ಮತ್ತೊಬ್ಬರ ಜೀವ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದಾರೆ. ಸರ್ಕಾರಿ, ಸಣ್ಣ ಸಣ್ಣ ಆಸ್ಪತ್ರೆಗಳಲ್ಲೂ ಜೀವ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಗರ, ಅರೆ ನಗರ ಪ್ರದೇಶಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮತ್ತಿತರ ಆರೋಗ್ಯ ಸೇವಾ ಚಟುವಟಿಕೆಗಳಲ್ಲೂ ತೊಡಗಿದ್ದಾರೆ. ಆದರೆ ಶಸ್ತ್ರಚಿಕಿತ್ಸಾ ತಜ್ಞರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಹೀಗಾಗಿ ಈ ಬಾರಿ ವಿಶೇಷವಾಗಿ ಸರ್ಜನ್ ಗಳ ಆರೋಗ್ಯ ತಪಾಸಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೃದಯ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿ ಸರ್ಜನ್ ಗಳಿಗೆ ಗೌರವ ಸಲ್ಲಿಸಲಾಗುವುದು. ಸರ್ಜನ್ ಗಳ ಆರೋಗ್ಯ ಸರಿಯಿದ್ದರೆ ಅಸಂಖ್ಯಾತ ಜೀವಗಳನ್ನು ಉಳಿಸಬಹುದು ಎಂದರು.
ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸಿಕೊಡಲು ರಾಜ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಸ್ತ್ರ ಚಿಕಿತ್ಸಕರನ್ನು ಕರೆಸಿ ಶಸ್ತ್ರಚಿಕಿತ್ಸೆ ನಡೆಸಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ನಿರಂತರ ಪ್ರಯತ್ನಗಳಲ್ಲಿ ಸರ್ಜನ್ ಗಳು ತೊಡಗಿದ್ದಾರೆ. ಬೇರೆ ದೇಶಗಳಲ್ಲಿ ಸರ್ಜನ್ ಗಳನ್ನು ನೋಡುವುದು ತುಂಬಾ ಕಷ್ಟ. ಆದರೆ ಭಾರತದಲ್ಲಿ ಅತ್ತುತ್ತಮ ಸೇವೆ ದೊರೆಯುತ್ತಿದೆ. ಶಸ್ತ್ರಚಿಕಿತ್ಸಾ ದಿನದಂದು ರಾಜ್ಯದ 20 ಕಡೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಇಂಡಿಯಾದ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಜನ್ ಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಜೊತೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ ಎಂದು ಡಾ. ಡಾ. ಎಚ್.ವಿ. ಶಿವರಾಮ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಡಾ. ಎನ್. ಚಂದ್ರಶೇಖರ್, ಖಜಾಂಚಿ ಡಾ. ರಾಜಶೇಖರ್ ಸಿ ಜಕ್ಕಾ ಮತ್ತಿತರರು ಉಪಸ್ಥಿತರಿದ್ದರು.