ಬೆಂಗಳೂರಿನಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ  ಸ್ಥಾಪನೆ- ಸಚಿವ ಶಿವರಾಜ ತಂಗಡಗಿ

ಬೆಂಗಳೂರು : ಬೆಂಗಳೂರಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ .

ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

 

 ಅಂಬಿಗರ ಚೌಡಯ್ಯ ಅವರ ಪ್ರತಿಮೆಯ ಸ್ಥಾಪನೆಗೆ ಈಗಾಗಲೇ ಕೆಲವು ಸ್ಥಳಗಳ ಪರಿಶೀಲನೆ ನಡೆಸಲಾಗಿದೆ ,ಸೂಕ್ತ ಸ್ಥಳ ಗುರುತಿಸಿದ ಕೂಡಲೇ ಅಂಬಿಗರ ಚೌಡಯ್ಯ ಅವರ ಪ್ರತಿಮೆಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಗಂಗಾಮತಸ್ಥ ಸಮಾಜಕ್ಕೆ ಒಂದು ಎಕರೆ ಜಾಗವನ್ನು ನೀಡಲಾಗಿದೆ, ಅದಕ್ಕೆ ಕೆಲವು ಕಾನೂನು ತೊಡಕುಗಳು ಎದುರಾಗಿರುವುದರಿಂದ ಈ ಸ್ಥಳ ಹಸ್ತಾಂತರವಾಗುವುದು ತಡವಾಗಿದೆ, ಒಮ್ಮೆ ಸ್ಥಳದ ಬಗೆಗಿನ ವಿವಾದ ನ್ಯಾಯಾಲಯದಿಂದ ಬಗೆಹರಿದರೆ ಅಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

 

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ನಮ್ಮ ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಘೋಷಿಸಿದರು, ಈಗ ನಿಗಮ ಗಂಗಾಮತಸ್ಥರು ,ಕೋಲಿ ಜನಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ,ಈ ಸಮಾಜದ ಪ್ರಮುಖ ಬೇಡಿಕೆಯಾದ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದಾಗಿದೆ  ,ಇದಕ್ಕೆ  ಕೆಲವು ಕಾನೂನಾತ್ಮಕ ತೊಡಕುಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಒಮ್ಮೆ ಈ ಕಾನೂನು ತೊಡಕು ನಿವಾರಣೆಯಾದಲ್ಲಿ ಪರಿಶಿಷ್ಟ  ಜಾತಿ ಪಂಗಡಕ್ಕೆ ಸೇರಿಸಬೇಕು ಎಂಬ ಈ ಸಮುದಾಯದ ಬೇಡಿಕೆಯನ್ನು ಸಹ ಈಡೇರಿಸಲು ಸರ್ಕಾರ ಪ್ರಯತ್ನ ಮಾಡುತ್ತದೆ ಎಂದು ಅವರು ಹೇಳಿದರು .

ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಈಗಿನ ಯುವ ಪೀಳಿಗೆಗೆ ನಮ್ಮ ಸಮುದಾಯಗಳ ಹಿಂದೆ ಇರುವ ಚಾರಿತ್ರಿಕ ಮಹತ್ವ ತಿಳಿಸಬೇಕು ಎಂಬುದೇ ಆಗಿದೆ, ಆ ಮಹಾನ್ ವ್ಯಕ್ತಿಗಳ  ಜೀವನ, ಆದರ್ಶಗಳು ಇಂದಿನ ಪೀಳಿಗೆಗೆ ಪರಿಚಯ ಆಗಬೇಕು, ಆ ಮೂಲಕ ಅವರು ಮೌಲಿಕವಾದ ಜೀವನವನ್ನು ನಡೆಸಲು ಪ್ರೇರಣೆ ನೀಡಬೇಕು ಎಂಬುದೇ ಆಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು

ಅಂಬಿಗರ ಚೌಡಯ್ಯ ಬಸವಣ್ಣನವರ ಕಾಲಘಟ್ಟದಲ್ಲಿ ತಮ್ಮ ವಿಶಿಷ್ಟವಾದ ವಚನಗಳ ಮೂಲಕ ಸಮಾಜಕ್ಕೆ ಬಹುದೊಡ್ಡ ಸಂದೇಶ ಕೊಟ್ಟಿದ್ದಾರೆ, oಬಾಚಾರವನ್ನು ಖಂಡಿಸಿ ನಿಜವಾದ ಜೀವನ ಏನು ಎಂಬುದನ್ನು ತಮ್ಮ ತೀಕ್ಷ್ಣ ಮಾತುಗಳಲ್ಲಿ ಹೇಳುವ ಮೂಲಕ ಅವರು ಇತರ ವಚನಕಾರರಿಗಿಂತ ಭಿನ್ನರಾಗಿ ನಿಲ್ಲುತ್ತಾರೆ ಎಂದು ಅವರು ತಿಳಿಸಿದರು.

 

ಯಾವುದೇ ಸಮುದಾಯ ಅಭಿವೃದ್ಧಿ ಆಗಬೇಕಾದರೆ ಮೊದಲು ಆ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು, ಅದರ ಜೊತೆ ಸಂಘಟನೆಗೂ ಪ್ರಯತ್ನ ಪಡಬೇಕು. ಅವುಗಳ ಮೂಲಕ ಮಾತ್ರ ಒಂದು ಸಮುದಾಯ ಒಳ್ಳೆಯ ರೀತಿಯಲ್ಲಿ ಬೆಳೆಯಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು. 

ನಾನು ಇಂದು ಸಚಿವನಾಗಿ ಇಲ್ಲಿ ನಿಲ್ಲಲು ಗಂಗಾಮತಸ್ಥ ಸಮಾಜದವರ ಕೊಡುಗೆಯೂ ಇದೆ ,ನನ್ನ ಕ್ಷೇತ್ರದಲ್ಲಿ ಅವರ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಅಂಬಿಗರ ಚೌಡಯ್ಯ ಅವರನ್ನು ಕುರಿತಂತೆ ಯಾದಗಿರಿಯ ಶಾಸನ ಸಂಶೋಧಕರಾದ ಡಾ. ಎಂ ಎಸ್. ಶಿರವಾಳ ಅವರು ಉಪನ್ಯಾಸ ನೀಡಿದರು.

 

ಸಮಾರಂಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪೀಠ, ನರಸೀಪುರ ,ಹಾವೇರಿ ಜಿಲ್ಲೆ ಯ ಶ್ರೀ ಶ್ರೀ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್ .ಮಂಜುಳಾ,  ಇಲಾಖೆಯ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ ಹಾಗೂ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಡಾ.ಜಿ. ಮೌಲಾಲಿ,ಉಪಾಧ್ಯಕ್ಷರಾದ ಶ್ರೀ ಮಣ್ಣೂರು ನಾಗರಾಜ,  ಪ್ರಧಾನ ಕಾರ್ಯದರ್ಶಿ, ಪಿ ಬಿ ಸೀತಾರಾಮ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. 

Facebook
Twitter
LinkedIn
Telegram
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top