ಬಳ್ಳಾರಿ : ಒಳ ಮೀಸಲಾತಿ ಪರಿಷ್ಕರಣೆಯ ಹೊಣೆಯನ್ನು ಕೇಂದ್ರ ಸರಕಾರದ ಹೆಗಲ ಮೇಲೆ ಹಾಕುವ ಮೂಲಕ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಕರ್ನಾಟಕದ ಸಮಸ್ತ ಮಾದಿಗರಿಗೆ ಮಕ್ಮಲ್ ಟೋಪಿ ಹಾಕಿದೆ ಎಂದು ಕರ್ನಾಟಕ ಮಾದಾರ ಚೆನ್ನಯ್ಯ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮಾದಾರ ಚೆನ್ನಯ್ಯ ಸೇನೆಯ ರಾಜ್ಯಾಧ್ಯಕ್ಷ ಕಲ್ಲುಕಂಬ ಜಯಗೋಪಾಲ್, ಕಾಂಗ್ರೇಸ್ ಸರ್ಕಾರ ಚುಣಾವಣೆ ಪೂರ್ವದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಿದ್ದರಾಮಯ್ಯ ನವರೂ ಸೇರಿದಂತೆ ಕೆ.ಹೆಚ್. ಮುನಿಯಪ್ಪ , ಚುಣಾವಣಾ ಪ್ರಣಾಳಿಕೆ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ|| ಪರಮೇಶ್ವರ್, ಬೀದರ್ ಕೊನೇ ಭಾಗದಿಂದ ಹಿಡಿದು ಚಾಮರಾಜ ನಗರದ ವರೆಗೆ ಡಂಗೂರ ಹೊಡೆದು ಸಮಸ್ತ ಮಾದಿಗರ ಮತ ಪಡೆದು ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಮಾಧಿಗರ ವಿರೋಧಿ ನಿರ್ಣಯ ಕೈಗೊಂಡು ಸಮುದಾಯದ ಮರಣ ಶಾಸನ ಬರಿಯುವ ಮೂಲಕ ಮುಖ್ಯಮಂತ್ರಿಯವರ ನಕಲಿ ಅಹಿಂದವಾದ, ಲೋಹೀಯವಾದ ಮುಖವಾಡ ಕಳಚಿ ಬಿದ್ದಿದೆಯೆಂದು ಖಂಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಪಂಚ ನ್ಯಾಯಾಧೀಶರ ಪೀಠವು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ ಒಳ ಮೀಸಲಾತಿ ವಿಷಯವು ರಾಜ್ಯ ಸರ್ಕಾರದ ಪರದಿಗೆ ಬರುತ್ತಿದ್ದು, ಆಯಾ ಸರ್ಕಾರಗಳು ಕೂಡಲೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತಿಳಿಸಲಾಗಿದ್ದರೂ, ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಇಚ್ಚಾಶಕ್ತಿಯ ಬದ್ಧತೆ ಪ್ರದರ್ಶಿಸದೆ ಕೇಂದ್ರ ಸರ್ಕಾರಕ್ಕೆ ರವಾನಿಸುವುದರ ಮೂಲಕ ಕರ್ನಾಟಕದ ಮಾದಾರ ಚೆನ್ನಯ್ಯನ ಸಂಕುಲವನ್ನು ಕತ್ತಲೆಯ ಕೂಪಕ್ಕೆ ತಳ್ಳಿ ಸಾಮಾಜಿಕ ನ್ಯಾಯವನ್ನು ಮೂಲೆ ಗುಂಪು ಮಾಡಿದೆ ಎಂದು ಸೇನೆ ಬೇಸರ ವ್ಯಕ್ತ ಪಡಿಸುತ್ತಾ ಸರ್ಕಾರಕ್ಕೆ ನೈಜ ಬದ್ಧತೆ, ಕಳ ಕಳಿ ಇದ್ದರೆ ಲೋಕಸಭಾ ಚುಣಾವಣೆಗೆ ಮುಂಚೆ ಒಳ ಮೀಸಲಾತಿ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ, ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಇಲ್ಲವಾದರೆ ಕರ್ನಾಟಕ ಮಾಧಾರ ಚೆನ್ನಯ್ಯ ಸೇನೆ ರಾಜ್ಯದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಹನುಮಂತಪ್ಪ,, ಬಿ.ಆರ್.ಅಂಬೇಡ್ಕರ್ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಕೆ.ಅನಂತ ಕುಮಾರ್ ಉಪಸ್ಥಿತರಿದ್ದರು.