ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರ ಭಾರತ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ : ಭಾರತವು ಸಮಾಜವಾದ ತತ್ವ, ಪ್ರಜಾಪ್ರಭುತ್ವ, ಗಣರಾಜ್ಯದ ಮತ್ತು ಜಾತ್ಯತೀತ ತತ್ವದ ಸಾರ್ವಭೌಮತ್ವನ್ನು ಆಳವಡಿಸಿಕೊಂಡಿದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅನೇಕ ಭಾಷೆಗಳನ್ನು ಮಾತನಾಡುವ ಜನ ಹಾಗೂ ವಿವಿಧ ಸಾಂಸ್ಕøತಿಕ ಹಿನ್ನಲೆಯನ್ನು ಹೊಂದಿರುವುದು ವೈಶಿಷ್ಟಮಯವಾಗಿದೆ ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.

          ಜಿಲ್ಲಾಡಳಿತ ವತಿಯಿಂದ ನಗರದ ವಿಮ್ಸ್ ಮೈದಾನದಲ್ಲಿ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಧ್ವಜಾರೋಹಣಾ ಸಂದೇಶ ನೀಡಿ ಅವರು ಮಾತನಾಡಿದರು.

 

          ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ಸಂಭ್ರಮದ ದಿನ ಇಂದು. 1950 ರಂದು ಜನವರಿ 26 ರಂದು ಇಡೀ ಸ್ವತಂತ್ರ ಭಾರತವನ್ನು ಗಣರಾಜ್ಯವೆಂದುಘೋಷಿಸಲಾಯಿತು. ಅದೇ ದಿನದಂದು ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಜಾರಿಗೊಂಡಿತು. ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು ಎಂದು ಮನನ ಮಾಡಿದರು.

ಬ್ರಿಟಿಷ್ ಸಂಸತ್ತು ಪದ್ಧತಿಯನ್ನು ಅನುಸರಿಸಿದ ಭಾರತದ ಪ್ರಜಾಪ್ರಭುತ್ವಕ್ಕೆ ಅನೇಕ ಸವಾಲುಗಳು ಬಂದರೂ, ನಮ್ಮ ಪ್ರಜಾಪ್ರಭುತ್ವದ ನೆಲೆಗಟ್ಟು ಅಲುಗಾಡದೆ ಗಟ್ಟಿಯಾಗಿ ನಿಂತಿದೆ. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಜನ-ಜೀವನದ ಆಶೋತ್ತರಗಳು ಹುದುಗಿವೆ. ಅವುಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು.

          ಸಂವಿಧಾನಾತ್ಮಕವಾಗಿ ನಮ್ಮ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಗಳು ರಾಷ್ಟ್ರದ ಅಸ್ತಿತ್ವ, ಸಾರ್ವಭೌಮತ್ವವನ್ನು ಸಾರುತ್ತಿವೆ. ಇವುಗಳಿಗೆ ಗೌರವ ತೋರುವುದು, ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದರು.

          ಜನಪರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಬಳ್ಳಾರಿ ಜಿಲ್ಲೆಯ ಫಲಾನುಭವಿಗಳು ಸಾಕಷ್ಟು ಇದರ ಸದುಪಯೋಗ ಪಡೆದಿದ್ದಾರೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 2,51,798 ಫಲಾನುಭವಿಗಳು, ಗೃಹಲಕ್ಷ್ಮಿ ಯೋಜನೆಯಡಿ 2,69,668 ಫಲಾನುಭವಿಗಳು, ಅನ್ನಭಾಗ್ಯ ಯೋಜನೆಯಡಿ 2,61,866 ಫಲಾನುಭವಿಗಳು, ಶಕ್ತಿ ಯೋಜನೆಯಡಿ 1,28,43,670 ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ಯುವನಿಧಿ ಯೋಜನೆಯನ್ನು ಜ.12 ರಂದು ರಾಜ್ಯದ ಮುಖ್ಯಮಂತ್ರಿ ಅವರಿಂದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

 

          ಭಾರತವನ್ನು ಜಗತ್ತಿನ ಅತ್ಯಂತ ಪ್ರಬುದ್ಧ, ಪ್ರಗತಿಪರ, ಭದ್ರ, ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ನಾವೆಲ್ಲಾ ಒಂದಾಗಿ ಒಗ್ಗೂಡಬೇಕಾಗಿದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

75ನೇ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪಥಸಂಚಲನೆಯ ದಳಗಳ ದಳಪತಿಗಳಾದ ಡಿಎಆರ್‍ನ ಆರ್‍ಪಿಐ ಗೋವಿಂದ.ಎ ಅವರ ನೇತೃತ್ವದಲ್ಲಿ 30 ತಂಡಗಳ ಪರೇಡ್ ಅಚ್ಚುಕಟ್ಟಾಗಿ ನಡೆಯಿತು. ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

          ಪ್ರಾಥಮಿಕ ಶಾಲೆ ವಿಭಾಗದಲ್ಲಿ ಕಿವುಡ ಮತ್ತು ಮೂಗ ಮಕ್ಕಳ ಶಾಲೆ(ಪ್ರಥಮ), ಎಂಜಿಎಂ ಪ್ರಾಥಮಿಕ ಶಾಲೆ(ದ್ವಿತೀಯ), ಬಾಲಭಾರತಿ ಪ್ರಾಥಮಿಕ ಶಾಲೆ(ತೃತೀಯ).

          ಪ್ರೌಢಶಾಲೆ ವಿಭಾಗದಲ್ಲಿ ಸಂತಜಾನರ ಪ್ರೌಢಶಾಲೆ(ಪ್ರಥಮ), ಸತ್ಯ ಪ್ರೌಢಶಾಲೆ (ದ್ವಿತೀಯ), ಸರ್ಕಾರಿ ಪ್ರೌಢಶಾಲೆ ಬಂಡಿಹಟ್ಟಿ(ತೃತೀಯ).

          ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವೈ.ಎಸ್.ಯೋಗೇಶ್, ಡಿ.ಎಂ.ಲಿಪಿಕ, ರಜನಿ ಲಕ್ಕ, ಕುನಾಲ್.ಹೆಚ್., ಮಹಮ್ಮದ್ ಯಾಸೀನ್, ದೀಕ್ಷೀತ್.ಕೆ.ಎಸ್., ಇ.ಜಾಸ್ಮೀನ್, ತ್ರೀಶೀಕಾ.ಪಿ.ನಿವೇದಿತಾ ಇವರನ್ನು ಸನ್ಮಾನಿಸಲಾಯಿತು.

 

          ನಂತರ ಎಬಿ-ಪಿಎಂಜೆಎವೈ-ಮುಖ್ಯಮಂತ್ರಿ ಅಭಾ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಆರೋಗ್ಯ ಸಂಸ್ಥೆಗಳಾದ ಕುರುಗೋಡು, ಮೋಕಾ ಸಮುದಾಯ ಆರೋಗ್ಯಕೇಂದ್ರ, ಬಳ್ಳಾರಿ ಹೃದಯಲಾಯ ಆಸ್ಪತ್ರೆ ಮತ್ತು ಚೋರನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.        

ಬಳಿಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಕೊಳವೆ ಬಾವಿ ಕೊರೆಯಿಸಿಕೊಂಡ 33 ಫಲಾನುಭವಿಗಳಿಗೆ ಮೋಟಾರ್ ಪಂಪ್ ಮತ್ತು ವಿದ್ಯುತ್ ಪರಿಕರಗಳನ್ನು ವಿತರಿಸಲಾಯಿತು.

          ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರನ್ನು ಮನ ಸೆಳೆದವು.

 

          ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ, ಉಪ ಮಹಾಪೌರರಾದ ಬಿ.ಜಾನಕಿ, ಬಳ್ಳಾರಿ ವಲಯ ಪೊಲೀಸ್ ಮಹಾನೀರಿಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಂದ ಸಂವಿಧಾನ ಜಾಗೃತಿ ಜಾಥಾಸ್ತಬ್ಧಚಿತ್ರ ವಾಹನಕ್ಕೆ ಚಾಲನೆ

 

          ಭಾರತ ಸಂವಿಧಾನದ ಆಶಯ ಮತ್ತು ಪ್ರಸ್ತಾವನೆಯ ಧ್ಯೇಯೋದ್ದೇಶಗಳನ್ನು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾಸ್ತಬ್ಧಚಿತ್ರ ವಾಹನಕ್ಕೆ ಯುವ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಶುಕ್ರವಾರ ವಿಮ್ಸ್ ಮೈದಾನದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, “ಸಂವಿಧಾನ ಜಾಗೃತಿ ಜಾಥಾಸ್ತಬ್ಧಚಿತ್ರ ವಾಹನವು ಜ.26 ರಿಂದ  ಫೆ.23 ರ ವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಜ.26 ರಿಂದ ಫೆ.02 ರವರೆಗೆ ಬಳ್ಳಾರಿ ತಾಲ್ಲೂಕಿನಲ್ಲಿ, ಫೆ.02 ರಿಂದ 09 ರ ವರೆಗೆ ಸಿರುಗುಪ್ಪ ತಾಲ್ಲೂಕಿನಲ್ಲಿ, ಫೆ.10 ರಿಂದ 13 ರವರೆಗೆ ಕುರುಗೋಡು ತಾಲ್ಲೂಕಿನಲ್ಲಿ, ಫೆ.13 ರಿಂದ 16 ರವರೆಗೆ ಕಂಪ್ಲಿ ತಾಲ್ಲೂಕಿನಲ್ಲಿ ಹಾಗೂ ಫೆ.16 ರಿಂದ 23 ರ ವರೆಗೆ ಸಂಡೂರು ತಾಲ್ಲೂಕಿನಲ್ಲಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಜನಪ್ರತಿನಿಧಿಗಳು, ಸಂಘ ಸಂಘ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಭೋದಿಸಿದರು.

 

          ಜಾಗೃತಿ ಮೂಡಿಸುವ ವಾಹನದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಸ್ತಾವನೆ ಭಾವಚಿತ್ರ ಮತ್ತು ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಕುರಿತಾದ ಮಾಹಿತಿ ಫಲಕಗಳನ್ನು ಅಳವಡಿಸಲಾಗಿತ್ತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top