ಕಾಂಗ್ರೆಸ್‍ನ ಆಂತರಿಕ ಕಲಹ ಹೆಚ್ಚಳ- ನಳಿನ್‍ಕುಮಾರ್ ಕಟೀಲ್

ಬೆಂಗಳೂರು,ಫೆ,21 : ಸಿದ್ದರಾಮಯ್ಯರಲ್ಲಿದ್ದ ಸಮಾಜವಾದಿ ಚಿಂತನೆಗಳು ಹೊರಗೆ ಹೋಗಿವೆ. ಅಧಿಕಾರವಾದಿ ಚಿಂತನೆಗಳು ಒಳಗೆ ಬಂದಿವೆ. ಕಾಂಗ್ರೆಸ್‍ನಲ್ಲಿ ಅಧಿಕಾರವಾದಿ ಸಿದ್ದರಾಮಣ್ಣ ಮತ್ತು ಕಾಂಗ್ರೆಸ್‍ವಾದಿ ಡಿ.ಕೆ.ಶಿವಕುಮಾರ್ ಅವರ ನಡುವೆ ಚರ್ಚೆಗಳು ಪ್ರಾರಂಭವಾಗಿವೆ. ಆಂತರಿಕ ಕಲಹಗಳು ಹೆಚ್ಚಾಗಿವೆ. ಹಿಜಾಬ್ ಬಗ್ಗೆ ಅಧಿವೇಶನದಲ್ಲಿ ಮಾತು ಬರಬಾರದೆಂಬ ಕಾರಣಕ್ಕಾಗಿ ಧರಣಿ ನಡೆಸಲಾಗುತ್ತಿದೆ. ಹಿಜಾಬ್ ಪರ- ವಿರೋಧ ಮಾತನಾಡಿದರೆ ಕಾಂಗ್ರೆಸ್ ಮೈನಸ್ ಆಗುವ ಭಯ ಕಾಂಗ್ರೆಸಿಗರಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ 24 ಹಿಂದೂಗಳ ಹತ್ಯೆ ಆಗಿದ್ದಾಗ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಡಿವೈಎಸ್ಪಿ ಗಣಪತಿ ಅವರು ಜಾರ್ಜ್ ಅವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಜಾರ್ಜ್ ರಾಜೀನಾಮೆ ನೀಡಿಲ್ಲ? ನಿಮ್ಮ ಜಮೀರ್ ಮೇಲೆ ಎಫ್‍ಐಆರ್ ಆಗಿರುವಾಗ ನೀವೇಕೆ ಅವರ ರಾಜೀನಾಮೆ ಪಡೆಯುತ್ತಿಲ್ಲ? ಈಶ್ವರಪ್ಪ, ಅರಗ ಜ್ಞಾನೇಂದ್ರ ಅವರ ರಾಜೀನಾಮೆ ಕೇಳುವ ನೀವು ನಿಮ್ಮ ಶಾಸಕರ ರಾಜೀನಾಮೆಯನ್ನೇಕೆ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದರ ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿದ ಅವರು, ಇದರ ಹಿಂದಿರುವ ಯಾವುದೇ ಶಕ್ತಿಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.


ಹಿಜಾಬ್ ಗಲಭೆ ಹಿಂದೆ ಯೋಚನೆ, ಯೋಜನೆಗಳು ಕಾಂಗ್ರೆಸ್‍ನದು. ಎಸ್‍ಡಿಪಿಐ ಅದನ್ನು ಅನುಷ್ಠಾನಕ್ಕೆ ತಂದಿದೆ. ಕುರಾನ್‍ನಲ್ಲಿ ಹಿಜಾಬ್ ಕುರಿತು ಉಲ್ಲೇಖ ಇದೆಯೇ? ದೇಶದ ಸಂವಿಧಾನ, ನೀವೇ ತಂದ ಕಾನೂನನ್ನು ಮುರಿಯಲು ನೀವು ಪ್ರೇರಣೆ ಕೊಡುವಿರಾ? ನಿಮ್ಮ ಸಮಾಜವಾದಿ ಪರಿಕಲ್ಪನೆಯಡಿ ಶಾಲೆಗಳಲ್ಲಿ ಸಮವಸ್ತ್ರ ಹಾಕುವುದು ಜಾರಿಗೊಂಡಿದೆ. ಇವತ್ತು ಅದನ್ನು ನೀವೇ ಬಹಿಷ್ಕರಿಸುವಿರಾ? ಉಲ್ಲಂಘಿಸುವಿರಾ? ಎಂದು ಅವರು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಮುಸ್ಲಿಂ ಸ್ತ್ರೀಯರನ್ನು ಕತ್ತಲಲ್ಲಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮತಧರ್ಮದ ಭಾವನೆ ಬರಬೇಕೆಂಬ ಚಿಂತನೆ ಕಾಂಗ್ರೆಸ್‍ನದು. ಮುಸ್ಲಿಮರಿಗೆ ಶಿಕ್ಷಣ ನೀಡಬೇಕೆಂಬ ಆಶಯ ಕಾಂಗ್ರೆಸ್‍ನಲ್ಲಿಲ್ಲ ಎಂದು ಆರೋಪಿಸಿದರು. ಸಿದ್ದರಾಮಣ್ಣರಿಗೆ ಅವಕಾಶ ಕೊಟ್ಟರೆ ಅವರು ಸದನದಲ್ಲಿ ಮಾತಿನ ಮೂಲಕ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ಆತಂಕ ಶಿವಕುಮಾರ್‍ರದು. ಈ ತಂತ್ರಗಾರಿಕೆಯ ಭಾಗವಾಗಿ ಈಶ್ವರಪ್ಪ ಹೆಸರನ್ನು ಎಳೆದುತರಲಾಗಿದೆ ಎಂದರು. ಚರ್ಚೆಗಳನ್ನು ದಾರಿ ತಪ್ಪಿಸುವ ಮತ್ತು ಅಧಿವೇಶನ ಮೊಟಕುಗೊಳಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್‍ನ ಈ ಕ್ರಮವನ್ನು ಜನತೆ ಸಹಿಸುವುದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್‍ಮುಕ್ತ ಕರ್ನಾಟಕ ಆಗುವ ಭಯ ಕಾಂಗ್ರೆಸ್ ಮುಖಂಡರಲ್ಲೇ ಇದೆ ಎಂದರು. ವಿಸ್ತಾರಕ್ ಯೋಜನೆ ಅನುಷ್ಠಾನ, ಪೇಜ್ ಕಮಿಟಿ ಪರಿಶೀಲನೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಯಶಸ್ವಿ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದರು. ಪಕ್ಷದ ಕಾರ್ಯಯೋಜನೆಯನ್ನು ಇಂದಿನ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

Leave a Comment

Your email address will not be published. Required fields are marked *

Translate »
Scroll to Top