ಬೆಂಗಳೂರು: ಹಿರಿಯ ನಾಗರಿಕರ ಸಮಗ್ರ ಶ್ರೇಯೋಭಿವೃದ್ಧಿ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಐಟಿ ದಿಗ್ಗಜ ಸೇನಾಪತಿ ಕ್ರಿಸ್ ಗೋಪಾಲ ಕೃಷ್ಣನ್, ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ನೇತೃತ್ವದ “ವಯೋ ವಿಕಾಸ್” ಸಂಘಟನೆ ಹಿರಿಯ ನಾಗರಿಕರ ಆರೋಗ್ಯ, ನಾಗರಿಕ ಹಕ್ಕುಗಳ ರಕ್ಷಣೆ ಕುರಿತು ಮಹತ್ವದ ಸಮಾಲೋಚನೆ ನಡೆಸಿತು.
ನಗರದ ಇನ್ಫೆಂಟ್ರಿ ರಸ್ತೆಯ ಐಐಎಸ್ ಅಧಿಕಾರಿಗಳ ಕ್ಲಬ್ ನಲ್ಲಿ ಆಯೋಜಿಸಿದ್ದ “ವಯೋ ವಿಕಾಸ್” ಸಂಘಟನೆಯ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿರಿಯರ ಹಬ್ಬ ಆಚರಿಸಲಾಯಿತು. ಹಿರಿಯ ನಾಗರಿಕರಿಗೆ ಸಂಬಂಧಪಟ್ಟಂತೆ ವಿವಿಧ ವಿಷಯಗಳ ಕುರಿತು ಚರ್ಚಿಲಾಗಿದೆ. ಹಿರಿಯ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಸಂಘಟನೆಗೆ ನೋಂದಣಿ ಮಾಡಿಸಲು ನಿರ್ಧರಿಸಿದ್ದು, ಉಚಿತವಾಗಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಯಾರು ಬೇಕಾದರೂ ನೊಂದಣಿಯಾಗಲು ಮುಕ್ತ ಅವಕಾಶವಿದೆ. ಪ್ರಸ್ತುತ 60 ಸಾವಿರ ಮಂದಿ ಸದಸ್ಯರಾಗಿದ್ದು, ಇದನ್ನು 20 ಲಕ್ಷಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ.
ಹಿರಿಯ ನಾಗರಿಕರ ಜೀವನ ನಿರ್ವಹಣೆ, ದೌರ್ಜನ್ಯದಿಂದ ರಕ್ಷಣೆ, ಆರೋಗ್ಯ ಶಿಬಿರಗಳನ್ನು ಹೆಚ್ಚಿಸುವ, ಡಿಜಿಟಲ್ ಸಾಕ್ಷರತೆ ಒದಗಿಸುವ, ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಆರೋಗ್ಯ ಮತ್ತು ವಿಮಾ ಯೋಜನೆಗಳಲ್ಲಿ ವಯೋಮಿತಿ ನಿರ್ಬಂಧಗಳನ್ನು ಸಡಲಿಸುವ, ಸೂಕ್ತ ರೀತಿಯಲ್ಲಿ ಆರೋಗ್ಯ ಸೌಲಭ್ಯ ಒದಗಿಸುವ ಕುರಿತು ಸಮಾಲೋಚನೆ ನಡೆಯಿತು.
ಡಾ. ದೇವಿಶೆಟ್ಟಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಾನವನ ಜೀವಿತಾವಧಿ ಹೆಚ್ಚಾಗುತ್ತಿದ್ದು, ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ ಅತಿ ದೊಡ್ಡ ಸವಾಲು. ಆರೋಗ್ಯ ರಕ್ಷಣೆ ಅತ್ಯಂತ ಮಹತ್ವದ ವಲಯವಾಗಿದೆ. ಇದಕ್ಕಾಗಿ ಸೂಕ್ತ ನೀತಿ, ನಿಯಮ ರೂಪಿಸಬೇಕಾಗಿದೆ. ಹಿರಿಯ ನಾಗರಿಕರಿಗೆ ಅಗತ್ಯವಾಗಿರುವ ಆರೋಗ್ಯ ಸಲಹೆ, ಸೂಚನೆಗಳನ್ನು ನೀಡಲಾಗುವುದು ಎಂದರು.
ಕ್ರಿಸ್ ಗೋಪಾಲ ಕೃಷ್ಣನ್ ಮಾತನಾಡಿ, ವಯೋ ವಿಕಾಸ್ ಸಂಘಟನೆ ಹಿರಿಯ ನಾಗರಿಕರ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ್ದು, ಸಂಘಟನೆಯನ್ನು ಜಗತ್ತಿನಾದ್ಯಂತ ವಿಸ್ತರಿಸಲಾಗುವುದು. ನಿವೃತ್ತ ಅಧಿಕಾರಿ, ಸಿಬ್ಬಂದಿ ವರ್ಗ, ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲಾ ಜನ ಸಮುದಾಯವನ್ನು ಸಂಘಟನೆ ಒಳಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ “ವಯೋ ವಿಕಾಸ್” ಸಂಘಟನೆಯ ನಾಯಕತ್ವ ತಂಡದ ಸದಸ್ಯರಾದ ಡಾ. ಅಲೆಕ್ಸಾಂಡರ್ ಥಾಮಸ್, ಅರುಣ್ ಸೇಠ್, ಗೌರಿ ಕುಮಾರ್, ಶ್ರೀನಾಥ್ ರೆಡ್ಡಿ, ಡಾ. ಗಿರಿಧರ್ ಗ್ಯಾನಿ, ಪ್ರೋ. ನಂದಿಮತ್ ಓಂ ಪ್ರಕಾಶ್, ವಯೋ ವಿಕಾಸ್ ಸಂಸ್ಥೆಯ ಸಿ.ಇ.ಓ ಜಮುನ ರವಿ ಮತ್ತು ವಯೋ ವಿಕಾಸ್ ಸಂಸ್ಥೆ ಸಿ.ಓ.ಓ. ಪವಿತ್ರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.