ಬಳ್ಳಾರಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದ್ದು, ಇದೇ ಮೊದಲ ಬಾರಿಗೆ ‘ಮೈತ್ರಿ ಆಗುತ್ತಿಲ್ಲ, ಈ ಹಿಂದೆಯೂ ಕೂಡಾ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಒಳ್ಳೆಯ ಸರ್ಕಾರ ನೀಡಿದ್ದೇವೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಳ್ಳಾರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ ಮೂರು ತಿಂಗಳಲ್ಲಿಯೇ ಜನವಿರೋಧಿ ನಿಲುವು ತೋರುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೂರ ಇಡಬೇಕು ಎನ್ನುವ ಕಾರಣಕ್ಕಾಗಿ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ದೂರ ಇಟ್ಟು ಎಲ್ಲರೂ ಒಂದಾಗಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವು ‘ಲೂಟಿ ಮಾಡಿದೆ, ರಾಷ್ಟ್ರದಲ್ಲಿ ನಡೆದ ಬಹಳಷ್ಟು ಭ್ರಷ್ಟಾಚಾರ ಪ್ರಕರಣದ ಜನಕರು ಕಾಂಗ್ರೆಸ್ನವರು! ಅವರನ್ನು ರಾಜಕೀಯ ಅಧಿಕಾರದಿಂದ ದೂರ ಇಡಬೇಕು. ಇದೇ ಕಾರಣಕ್ಕಾಗಿಯೇ ದೇಶದ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ದೂರ ಇದೆ ಎಂದು ಹೇಳಿದರು.

ಕಾಂಗ್ರೆಸ್ಸೇತರ ಪಕ್ಷಗಳು ಒಗ್ಗೂಡಬೇಕು, ಕಾಂಗ್ರೆಸ್ ವಿರೋಧಿ, ‘ಮತಗಳನ್ನು (ಓಟ್) ಕ್ರೋಡೀಕರಿಸಿ ಒಂದಾಗಿಸಬೇಕಾಗಿದ್ದು, ಈ ಕಾರಣಕ್ಕಾಗಿಯೇ ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು, ವರಿಷ್ಠರ ಮಟ್ಟದಲ್ಲಿ ನಿರ್ಧರಿಸಲಾಗಿದೆ. ಪಕ್ಷದ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಪೂಜೆಗಾಗಿ ಬಂದಿದ್ದೇನೆ: ನಮ್ಮ ಕುಟುಂಬ ಆರಾಧ್ಯದೇವರ ಪೂಜೆಯು ಇಂದು ಬಳ್ಳಾರಿಯಲ್ಲಿದ್ದ ಕಾರಣ, ಇಲ್ಲಿಗೆ ಬಂದಿದ್ದೇನೆ. ವಿಶೇಷ ಪೂಜೆ, ಹೋಮ ನಡೆಯುವ ಸಂದರ್ಭದಲ್ಲಿಯೇ ಒಂದು ಶುಭ ಸುದ್ದಿ ಬಂದಿದೆ. ಈಗತಾನೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕರೆ ಮಾಡಿ, ಮಾತನಾಡಿದ್ದಾರೆ. ಇದು ಮುಂಬರುವ ಚುನಾವಣೆಯಲ್ಲಿ ಶುಭ ಸಂದೇಶ ಇದ್ದಂತೆ. ಹೋಮ ಮಾಡುವಾಗ ಕರೆ ಮಾಡಿರುವುದು ಶುಭ ಸುದ್ದಿ ಎಂದೇ ನಾವು ನಂಬುತ್ತೇವೆ. ರಾಜ್ಯದ ಜನತೆಗೆ ಹಾಗೂ ಬಿಜೆಪಿ ಪಕ್ಷಕ್ಕೆ ಇದು ಶುಭ ಸಂದೇಶ. ರಾಜಕೀಯದಲ್ಲಿ ಇಷ್ಟೊಂದು ಬೆಳವಣಿಗೆ ಆಗಿದೆ. ನೀವು ಏಕೆ ಕರೆ ಮಾಡಿಲ್ಲ? ಎಂದು ಕೇಳಿದರು. ಅದಕ್ಕೆ ನಾನು ಇನ್ನು ಎರಡು ದಿನಗಳಲ್ಲಿ ಬೆಂಗಳೂರಿಗೆ ಬಂದು ಮಾತನಾಡುವುದಾಗಿ ತಿಳಿಸಿದ್ದೇನೆ ಎಂದು ಈಶ್ವರಪ್ಪ ನುಡಿದರು.
ಹಾವೇರಿ ಲೋಕಸಭೆ ಕ್ಷೇತ್ರ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ಸ್ಪರ್ಧಿಸುತ್ತಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪನವರು, ನಮ್ಮ ಪಕ್ಷದ ಕೇಂದ್ರ ನಾಯಕರು ನನ್ನನ್ನು ಚುನಾವಣಾ ಪ್ರಕ್ರಿಯೆ (ಕಣ) ದಿಂದ ದೂರ ಇರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ನನ್ನ ಪುತ್ರ ಕಾಂತೇಶ ಹಾವೇರಿಯಲ್ಲಿ ಓಡಾಡುತ್ತಿದ್ದು, ಮಂದಿರ, ಮಠಗಳಿಗೆ ಭೇಟಿಕೊಟ್ಟು, ಸಾರ್ವಜನಿಕರು,, ಕಾರ್ಯಕರ್ತರ ಜೊತೆ ಒಡನಾಟ ಇಟ್ಟುಕೊಂಡಿದ್ದಾನೆ. ‘ಪಕ್ಷವು ಟಿಕೆಟ್ ನೀಡಿದಲ್ಲಿ ಸ್ಪರ್ಧೆ ಮಾಡುತ್ತಾನೆ. ಇಲ್ಲವಾದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ, ಅವರ ಪರವಾಗಿ ಶ್ರಮಿಸಿ, ಗೆಲ್ಲಿಸುವ ಕೆಲಸ ಮಾಡುತ್ತಾನೆ ಎಂದರು.
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಪದೇ ಪದೇ ಗೋಚರವಾಗುತ್ತಿದೆ. ಹಿರಿಯ ಧುರೀಣ ಬಿ.ಕೆ.ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ಕುರಿತಂತೆ ಪರೋಕ್ಷವಾಗಿ ನಡೆಸಿದ ವಾಗ್ದಾಳಿ ಇದಕ್ಕೊಂದು ಉದಾಹರಣೆ. ಸಿಎಂ ಹಾಗೂ ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಕಾಣುತ್ತಿದೆ. ಒಳಗೊಳಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಹೇಳಿದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿತು. ಸಿದ್ದರಾಮಯ್ಯ ಮೇಲೆ ಪಂಚೆ ಹಾಕಿದ್ದಾರೆ ಒಳಗೆ ಖಾಕಿ ಚಡ್ಡಿ ಹಾಕಿದ್ದಾರೆ ಅಂತಾರೆ, ಹರಿಪ್ರಸಾದ್ ಅವರೇ, ಸಿದ್ದರಾಮಯ್ಯ ಬಗ್ಗೆ ಮಾತಾಡಿ ಆದರೆ ಖಾಕಿ ಚಡ್ಡಿ ಬಗ್ಗೆ ಮಾತನಾಡ ಬೇಡಿ. ಖಾಕಿ ಚಡ್ಡಿ ಧರಿಸಿದ ಅನೇಕರು ರಾಷ್ಟಭಕ್ತರಿದ್ದಾರೆ ಎಂದರು.