ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ: ಡಿ.ಕೆ. ಸುರೇಶ್

ಬೆಂಗಳೂರು:ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್ ಡ್ರೈವ್ ಈ ಕುಟುಂಬದ ಆಸ್ತಿ, ತೆನೆಹೊತ್ತ ಮಹಿಳೆ ಈಗ ಪೆನ್ ಡ್ರೈವ್ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಜನ ಹಾಡಿ, ಹೊಗಳುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದರು.

ಸದಾಶಿವನಗರದ ನಿವಾಸದಲ್ಲಿ ಗುರುವಾರ ಮಾಧ್ಯಮಗೋಷ್ಟಿ ನಡೆಸಿದ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು; ಡಿ.ಕೆ ಬ್ರದರ್ಸ್ 420 ಎಂದು ಟೀಕೆ ಮಾಡಿರುವ ವಿಚಾರವಾಗಿ ಮಾಧ್ಯಮಗಳು ಕೇಳಿದಾಗ ಸುರೇಶ್ ಅವರು ತಿರುಗೇಟು ನೀಡಿದ್ದು ಹೀಗೆ;ಅವರ ಕುಟುಂಬವನ್ನ ಇಡೀ ಪ್ರಪಂಚ ಕೊಂಡಾಡುತ್ತಿದೆ, ಹೊಗಳುತ್ತಿದೆ. ಜನರು ಹೇಳಿದ ಮಾತನ್ನು ನಾನು ಹೇಳುತ್ತಿದ್ದೇನೆ. ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರೆ ನಾಲ್ಕು ಮಾತು ನಮ್ಮನ್ನು ಬೈದುಕೊಳ್ಳಲಿ. ಆದರೆ ನನಗೆ ಈ ರಾಜ್ಯದ ಹೆಣ್ಣು ಮಕ್ಕಳ ಮಾನವನ್ನು ಕಾಪಾಡುವ ಕೆಲಸ ಮೊದಲು ಆಗಬೇಕಿದೆ.ಮಾಜಿ ಪ್ರಧಾನಿಗಳು ಸಣ್ಣ, ಸಣ್ಣ ವಿಚಾರಕ್ಕೂ ಮಾಧ್ಯಮಗೋಷ್ಠಿ ನಡೆಸಿ ಹೇಳಿಕೆ ನೀಡಿ, ಪಿಟಿಷನ್ ಬರೆಯುತ್ತಾರಲ್ಲವೇ? ಅದೇ ರೀತಿ ಈ ವಿಚಾರವಾಗಿಯೂ ಹೇಳಿಕೆ ನೀಡಲಿ ಹಾಗು ನೂಲಿನಂತೆ ಸೀರೆ ಎನ್ನುವ ಮಾತನ್ನು ಅರ್ಥೈಸಲಿ.”ಪೆನ್ ಡ್ರೈವ್ ವಿಚಾರದಲ್ಲಿ ಬಿಜೆಪಿಯನ್ನು ಗುರಿ ಮಾಡಲಾಗುತ್ತಿದೆ ಎಂದು ಕೇಳಿದಾಗ “ಮೈತ್ರಿಯಲ್ಲಿ ಮೋದಿ ಅವರೂ ಪಾಲುದಾರರು. ಅವರು ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಬೇಕು. ಘಟನೆಯ ಕುರಿತು ಕ್ರಮ ತೆಗೆದುಕೊಳ್ಳಲು ಒತ್ತಾಯ ಮಾಡಬೇಕು.ನೇಹಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಏಕೆ ಗುರಿ ಮಾಡಲಾಗುತ್ತಿದೆ ಎಂದು ನಾವು ಪ್ರಶ್ನೆ ಮಾಡಬಹುದಲ್ಲವೇ? ತಾಳಿ ಭಾಗ್ಯದ ವಿಚಾರವಾಗಿ ಚರ್ಚೆ ಮಾಡುತ್ತಾರೆ. ತಾಳಿ ಭಾಗ್ಯಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬಂಧವಿದೆ. ಬಿಜೆಪಿ ಮಾತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ದೇಶದ ಪ್ರಧಾನಮಂತ್ರಿ ಎನ್ ಡಿಎ ಮುಖ್ಯಸ್ಥರು. ತಮ್ಮ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ಆದ ಕಾರಣ ಅವರು ಸ್ಪಷ್ಟೀಕರಣ ಕೊಡಬೇಕಾಗುತ್ತದೆ.

ಮೋದಿ ಅವರು ಕರ್ನಾಟಕದ ಬೇರೆ, ಬೇರೆ ವಿಚಾರಗಳನ್ನು ತೆಗೆದುಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಾರೆ. ಆದರೆ ಈ ವಿಚಾರದ ಕುರಿತು ಏಕೆ ಮಾತನಾಡುತ್ತಿಲ್ಲ. ಇದಕ್ಕೆ ನೇರ ಹೊಣೆಗಾರರು ಪ್ರಧಾನಮಂತ್ರಿಗಳು. ಸೆಕ್ಸ್ ಹಗರಣದ ಬಗ್ಗೆ ಪ್ರಧಾನಿ ಅವರಿಗೆ ಈ ಮೊದಲೇ ತಿಳಿದಿತ್ತಲ್ಲವೇ? ಪಕ್ಷದ ಸ್ಥಳೀಯ ಮುಖಂಡರು ಪತ್ರ ಬರೆದು ಈ ಮೊದಲೇ ತಿಳಿಸಿದ್ದಾರಲ್ಲವೇ? ಸ್ಕ್ರೀನಿಂಗ್ ಕಮಿಟಿಯಲ್ಲಿಯೂ ಇದರ ಬಗ್ಗೆ ಚರ್ಚೆಯಾಗಿದೆ. ಕುಮಾರಸ್ವಾಮಿ ಅವರೂ ಸಹ ಟಿಕೆಟ್ ಕೊಡುವುದು ಬೇಡ ಎಂದು ಹೇಳಿದ್ದಾರೆ. ಆದರೂ ಟಿಕೆಟ್ ಕೊಟ್ಟು, ಪ್ರಚಾರವನ್ನೂ ಮಾಡಿದ್ದಾರೆ ಎಂದರು.

ಪೆನ್ ಡ್ರೈವ್ ರುವಾರಿ ಕಾರ್ತಿಕ್ ಅವರನ್ನು ಮಲೇಷ್ಯಾಗೆ ಪರಾರಿಯಾಗಲು ರಾಜ್ಯ ಸರ್ಕಾರ ಕಾರಣ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ಕುಮಾರಸ್ವಾಮಿ ಅವರು ಅಂತರರಾಷ್ಟ್ರೀಯ ಏಜೆನ್ಸಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಎಲ್ಲಾ ಮಾಹಿತಿಯೂ ಅವರಿಗೆ ಗೊತ್ತಿರುತ್ತದೆ. ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಮುಖ್ಯ ವಿಚಾರದ ಹಾದಿ ತಪ್ಪಿಸಲು ಏನೇನೋ ಹೇಳುತ್ತಿರುತ್ತಾರೆ. ಮೊದಲು ಹಾಸನದ ಹೆಣ್ಣು ಮಕ್ಕಳ ಮಾನ ರಕ್ಷಣೆಗೆ ಏನು ಮಾಡಬೇಕು. ಇವರ ಕುಟುಂಬದ ಸದಸ್ಯನಿಂದ ಆಗಿರುವ ತಪ್ಪಿಗೆ ಏನು ಮಾಡಬೇಕು ಎಂದು ಹೇಳಬೇಕು. ಇದನ್ನು ಮರೆಮಾಚಿ ಇತರೇ ವಿಚಾರಗಳನ್ನು ಹೇಳುತ್ತಿರುತ್ತಾರೆ. ಇದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಚಾರ ಎಂದು ತಿಳಿಸಿದರು

 

ನನ್ನನ್ನು ಕೆಣಕಿದ್ದಾರೆ ನಾನು ಸುಮ್ಮನೆ ಇರುವುದಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾವೆಲ್ಲಿ ಕೆಣಕಿದ್ದೇವೆ, ಅವರ ಮೈತ್ರಿ ಪಕ್ಷದವರೇ ಅವರನ್ನು ಕೆಣಕಿರುವುದು, ಅವರಿಂದಲೇ ಎಲ್ಲಾ ಬಿಡುಗಡೆಯಾಗಿರುವುದು. ಇದರ ಬಗ್ಗೆ ಅವರ ಬಳಿ ಚರ್ಚೆ ನಡೆಸಲಿ. ಅವರ ಮೇಲೆ ಮಾತನಾಡಲು ಶಕಿಯಿಲ್ಲ, ಅದಕ್ಕೆ ನಮ್ಮ ಮೇಲೆ ಮಾತನಾಡುತ್ತಾರೆ. ಸುಳ್ಳು ಹೇಳುವುದರಲ್ಲಿ,  ವಿಚಾರವನ್ನು ಹಾದಿ ತಪ್ಪಿಸುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ ಎಂದರು.ಎಸ್ ಐಟಿ ತನಿಖೆಗೆ 7 ದಿನಗಳ ಕಾಲಾವಕಾಶ ಕೇಳಿರುವ ಪ್ರಜ್ವಲ್ ರೇವಣ್ಣ ಅವರ ರಿಟರ್ನ್ ಟಿಕೆಟ್ ವಿಚಾರವಾಗಿ ಕೇಳಿದಾಗ “ಯಾರೇ ವಿದೇಶಕ್ಕೆ ಹೋಗಬೇಕಾದರೂ ರಿಟರ್ನ್ ಟಿಕೆಟ್ ಇದ್ದರೆ ಮಾತ್ರ ಆ ದೇಶಕ್ಕೆ ಪ್ರವೇಶ ನೀಡಲಾಗುತ್ತದೆ. ಅದಕ್ಕಾಗಿ ಟಿಕೆಟ್ ತೆಗೆದುಕೊಂಡಿರುತ್ತಾರೆ. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ಅವರಿಗೂ ನಿಮಗೂ (ಮಾಧ್ಯಮಗಳಿಗೆ) ಬಿಟ್ಟ ವಿಚಾರ ಎಂದರು.ವಿಡಿಯೋದಲ್ಲಿ ಇರುವ ಹೆಣ್ಣುಮಕ್ಕಳು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದಾಗ “ಸಂತ್ರಸ್ತ ಹೆಣ್ಣು ಮಕ್ಕಳು ಯಾರು ಎಂದು ನನಗೆ ತಿಳಿದಿಲ್ಲ. ತನಿಖಾ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇಲ್ಲ. ನನಗೆ ಮಾಧ್ಯಮಗಳಲ್ಲಿ ಬಂದ ವಿಚಾರ ಮಾತ್ರ ತಿಳಿದಿದೆ ಎಂದು ತಿಳಿಸಿದರು.

ಸಾಕ್ಷಿ ಇಲ್ಲದಿದ್ದರೆ ಪ್ರಕರಣ ನಿಲ್ಲುವುದಿಲ್ಲ ಎಂದು ಮರು ಪ್ರಶ್ನಿಸಿದಾಗ “ಮಾಧ್ಯಮಗಳಿಗೆ ಹೆಚ್ಚು ಆತುರ ಇದ್ದಂತಿದೆ. ಆತುರ ಪಡಬೇಕಾದ ಹೊತ್ತಿನಲ್ಲಿ ಆತುರ ಪಡದೆ ಈಗ ಪಟ್ಟರೆ ಏನು ಪ್ರಯೋಜನ. ಇದು ಅಂತರರಾಷ್ಟ್ರೀಯ ಸುದ್ದಿ. ಇಲ್ಲಿ ಒಂದಿಬ್ಬರು ಮಾತ್ರ ಸಂತ್ರಸ್ತರಿಲ್ಲ, ಎಲ್ಲವೂ ನಿಧಾನಕ್ಕೆ ಹೊರ ಬರುತ್ತದೆ. ಇಲ್ಲಿ ನಾವು ಪ್ರಶ್ನೆ ಮಾಡಬೇಕಿರುವುದು ಸಂತ್ರಸ್ತ ಮಹಿಳೆಯರು ಎನ್ನುವುದಕ್ಕಿಂತ ಈ ಕೃತ್ಯವನ್ನು ಏಕೆ ಎಸಗಲಾಯಿತು. ಯಾವ ರೀತಿಯ ದುರ್ಬಳಕೆ ಆಯಿತು ಎನ್ನುವುದು ಮುಖ್ಯ. ಸಂತ್ರಸ್ತ ಮಹಿಳೆಯರು ಬಡವರಿರಬಹುದು, ಅವರಿಗೂ ಒತ್ತಡ ಇರುತ್ತದೆ. ಅವರಿಗೂ ಅಪ್ಪ, ಚಿಕ್ಕಪ್ಪ, ಮಾವ, ಭಾವ, ದೊಡ್ಡಪ್ಪ ಸೇರಿದಂತೆ ಕುಟುಂಬ ಇರುತ್ತದೆ. ಅವರು ಬದುಕುವ ಪರಿಸರ, ಹಳ್ಳಿಯಲ್ಲಿ ಎಲ್ಲರ ನಡುವೆ ತಲೆ ಎತ್ತಿ ಬದುಕಬೇಕು.

 

 

ಮಾಧ್ಯಮದವರು ಹೇಳಿಕೆ ನೀಡುವಾಗ ಸಾಮಾಜಿಕ ಜೀವನದ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಹೇಳಿಕೆಗಳಿಂದ ಒಂದು ಕುಟುಂಬದಲ್ಲಿ ಆಗುವ ವ್ಯತ್ಯಾಸಗಳು, ಪರಿಸ್ಥಿತಿಗಳು ಒಂದು ಹೆಣ್ಣುಮಗಳ ಬದುಕಿಗೆ ಈ ಸಂದರ್ಭದಲ್ಲಿ ಪ್ರಮುಖವಾಗುತ್ತದೆ. ಇದು ಯಾರ ಊಹೆಗೂ ನಿಲುಕದ ಸಂಗತಿ. ಇಡೀ ಕುಟುಂಬ ತಲೆತಗ್ಗಿಸಿ ನಡೆಯಬೇಕಾಗುತ್ತದೆ. ಕೃತ್ಯ ಎಸಗಿದವರಿಗೆ ಮಾನ ಮರ್ಯಾದೆ ಇಲ್ಲದೆ ಇರಬಹುದು. ಆದರೆ ಇದರಲ್ಲಿ ಸಿಲುಕಿಕೊಂಡವರಿಗೆ ಮಾನ ಇರುತ್ತದೆ, ಈ ಸಂದರ್ಭದಲ್ಲಿ ಇದು ಮುಖ್ಯವಾಗಬೇಕು ಎಂದು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top