ಹೊಸಪೇಟೆ: ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡಿಕೆ ಸುರೇಶ್‌ಗೆ ನೇರ ಸ್ಪರ್ಧೆ ನೀಡಲು ಸಿದ್ಧ ಎಂದು ಮಾಜಿ ಅಧ್ಯಕ್ಷ ಎಲ್.ಬಿ.ಪಿ.ಭೀಮಾ ನಾಯ್ಕ್ ಸುಳಿವು ನೀಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಕೂಡಾ ಒಬ್ಬ ಪ್ರಬಲ ಆಕಾಂಕ್ಷಿ ಎಂದು ತಿಳಿಸುವ ಮೂಲಕ ಭೀಮಾನಾಯ್ಕ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯ ಕೂತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ, ಆದರೆ ಇದರ ಕುರಿತು ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳುವ ಮೂಲಕ ಡಿ.ಕೆ ಸುರೇಶ್ ಗೆ ನೇರ ಸ್ಪರ್ಧೆ ಒಡ್ಡುವ ಸುಳಿವು ನೀಡಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ‘ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ (ರಾಬಕೊವಿ) ಹಾಲು ಒಕ್ಕೂಟದ ಚುನಾವಣೆಯಲ್ಲಿ ನಾನು ಸಹ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ. ಧಾರವಾಡ ಹೈಕೋರ್ಟ್ ಪೀಠ ಚುನಾವಣೆಗೆ ಇದ್ದ ತಡೆಯನ್ನು ತೆರವುಗೊಳಿಸಿರುವ ಕಾರಣ ಜುಲೈ ೧೦ರಂದು ಕೆಎಮ್‌ಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ’ ಎಂದಿದ್ದಾರೆ.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಪರಾಜಯಗೊಂಡಿರುವ ಭೀಮಾ ನಾಯ್ಕ್ ರಾಜಕಾರಣದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆನಿಕೊಂಡಿರುವ ನಾಯಕ್ ಒಂದು ವೇಳೆ ಕೆಎಂಎಫ್ ಚುನಾವಣಾ ಕಣಕ್ಕೆ ಇಳಿದಿದ್ದೇ ಆದರೆ ಅದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ ಶಿವಕುಮಾರ್ ನಡುವೆ ಮತ್ತೊಂದು ಸುತ್ತಿನ ಅಧಿಕಾರ ಹಂಚಿಕೆಯ ಹೋರಾಟದ ವೇದಿಕೆಯಾಗಿ ಮಾರ್ಪಡಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.