ಬೆಂಗಳೂರು: ಕರ್ನಾಟಕದಲ್ಲಿ ಸುಳ್ಳು ಸುದ್ದಿ , ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಕರಡು ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಾಥಮಿಕವಾಗಿ ಪ್ರಸ್ತಾಪಿಸಲಾಗಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ಸುಳ್ಳು ಸುದ್ದಿ ತಡೆಗೆ ಪ್ರತ್ಯೇಕ ವಿಧೇಯಕ ಮಂಡನೆಗೆ ಈಗಾಗಲೇ ಕಳೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಇದಕ್ಕೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಕರ್ನಾಟಕ ತಪ್ಪು ಮಾಹಿತಿ ರಚನೆ ಮತ್ತು ನಕಲಿ ಸುದ್ದಿ ನಿಷೇಧ ಮಸೂದೆ 2025 ರ ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಡುಬಂದಲ್ಲಿ ಸರ್ಕಾರವು ಏಳು ವರ್ಷಗಳವರೆಗೆ ಶಿಕ್ಷೆ ಅಥವಾ 10 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಪ್ರಕಟಣೆಗಳಲ್ಲಿ ತಪ್ಪು ಮಾಹಿತಿ ನೀಡಿದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ. ಈ ಅಪರಾಧಗಳನ್ನು ಸಂಜ್ಞೇಯವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದು ಜಾಮೀನು ರಹಿತ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ದ್ವೇಷ ಭಾಷಣ ಮಾಡುವವರು ಎಚ್ಚರಿಕೆಯಿಂದ ಇರಬೇಕು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುತ್ತದೆ. ಈ ಕಾಯ್ದೆಯನ್ನು ಜಾರಿಗೆ ತರಲು ನಕಲಿ ಸುದ್ದಿ ನಿಯಂತ್ರಣ ಪ್ರಾಧಿಕಾರವನ್ನು ರಚಿಸಲಾಗುತ್ತದೆ. ಕರಡು ಮಸೂದೆಯ ಪ್ರಕಾರ, ನಕಲಿ ಸುದ್ದಿಗಳಲ್ಲಿ ತಪ್ಪು ಉಲ್ಲೇಖಗಳು ಅಥವಾ ಒಬ್ಬರ ಹೇಳಿಕೆಯ ಸುಳ್ಳು ಅಥವಾ ತಪ್ಪಾದ ವರದಿಗಳ ಸಂಯೋಜನೆ ಸೇರಿದೆ. ಸತ್ಯ ಮತ್ತು ಸಂದರ್ಭದ ವಿರೂಪಕ್ಕೆ ಕಾರಣವಾಗುವ ಆಡಿಯೋ ಅಥವಾ ವೀಡಿಯೋ ತುಣುಕುಗಳನ್ನು ಸಂಪಾದಿಸುವುದು ಕಾನೂನುಬದ್ಧ, ಸಂಘಟಿತ ಅಥವಾ ಅಸಂಘಟಿತ, ಸಾಮಾಜಿಕ ಮಾಧ್ಯಮ ವಿಷಯವನ್ನು ಬಳಸಿಕೊಳ್ಳುವುದು, ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ, ಪರಿಶೀಲಿಸಿದ ಅಥವಾ ಗುಪ್ತನಾಮ, ಕಾಲ್ಪನಿಕ ಅಥವಾ ಸುಳ್ಳು ಖಾತೆ/ಪುಟದ ಹೆಸರಿನ ಮೂಲಕ ಸಂದೇಶಗಳು ಅಥವಾ ಮಾಹಿತಿಯನ್ನು ಕಳುಹಿಸುವುದು, ನಕಲಿ ಸುದ್ಧಿಗಳನ್ನು ಹರಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ವಿಧೇಯಕ ಜಾರಿಗೆ ಪ್ರಸ್ತಾಪಿಸಿದ್ದು, ದ್ವೇಷ ಭಾಷಣ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷಣೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾಗ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ದಂಡದ ಜತೆಗೆ ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿದೆ.
ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರ ಮೇಲೆ ನಿಗಾ ಇಟ್ಟು ನಿಯಂತ್ರಿಸಲು ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ವಿಧೇಯಕ ಜಾರಿಗೆ ತರಲು ಚರ್ಚಿಸಲಾಗಿದೆ. ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಸುಳ್ಳು ಸುದ್ದಿ ಪ್ರಕರಣ ವರದಿಯಾಗಿವೆ. ಇವುಗಳನ್ನು ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಸೆಲ್ಗಳನ್ನು ತೆರೆಯಲಾಗಿದೆ. ಇದರ ಮೂಲಕ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿದೆ. ಗುಪ್ತ ಮಾಹಿತಿ ಸಿಬ್ಬಂದಿ ಹಾಗೂ ಬೀಟ್ ಸಿಬ್ಬಂದಿ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೂ ದಿನದಿಂದ ದಿನಕ್ಕೆ ಸುಳ್ಳು ಸುದ್ದಿ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುವಲ್ಲಿ ವ್ಯಕ್ತಿ ತಪ್ಪಿತಸ್ಥರೆಂದು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಬಗ್ಗೆ ರೂಪರೇಷ ಸಿದ್ಧವಾಗಿದೆ .ಅದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ತಪ್ಪು ಸುದ್ದಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ಜನರಿಗೆ ಯಾವುದು ಸತ್ಯ ಸುಳ್ಳು ಎನ್ನುವ ಗೊಂದಲವೂ ಕೂಡ ಹೆಚ್ಚಾಗಿದೆ. ಸರ್ಕಾರದಿಂದ ಈ ಕ್ರಮದಿಂದ ಮುಂದಿನ ದಿನಗಳಲ್ಲಿ ನಕಲಿ ಸುದ್ದಿ ಹಾವಳಿಗೆ ಕಡಿವಾಣ ಬೀಳುತ್ತಾ ಕಾದು ನೋಡಬೇಕಾಗಿದೆ.