ಸಚಿವರು ಕೊಲೆಯ ಆರೋಪ ಹೊತ್ತುಕೊಂಡಾಗ ಅಧಿಕಾರದಲ್ಲಿ ಮುಂದುವರಿಯಲು ಹೇಗೆ ಸಾಧ್ಯ?

ಬೆಂಗಳೂರು : ನಾವೆಲ್ಲರೂ ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ಸೇರಿದ್ದೇವೆ. ಆದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಸಂವಿಧಾನದ ಮೂಲಭೂತ ಉದ್ದೇಶಗಳನ್ನು ನಾಶ ಮಾಡಲಾಗುತ್ತಿದೆ. ಹಿರಿಯ ಸಚಿವ ಈಶ್ವರಪ್ಪ ಕೊಲೆಯ ಆರೋಪ ಹೊತ್ತಿದ್ದು, ಎಫ್ಐಆರ್ ದಾಖಲಾಗಿದೆ. ದೇವರಾದ ಬಸವಣ್ಣನ ಮಗನಂತಿದ್ದ ಸಂತೋಷ್ ಹತ್ಯೆಯಾಗಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದ ಸಚಿವ ಕೊಲೆಯ ಆರೋಪ ಹೊತ್ತುಕೊಂಡಾಗ ಅಧಿಕಾರದಲ್ಲಿ ಮುಂದುವರಿಯಲು ಹೇಗೆ ಸಾಧ್ಯ? ಸಂವಿಧಾನದಲ್ಲಿ ಇದಕ್ಕೆ ಎಲ್ಲಿ ಅವಕಾಶ ಕಲ್ಪಿಸಿದೆ? ಅವರನ್ನು ಬಂಧಿಸಿ, ಜೈಲಿಗೆ ಹಾಕದಿರಲು ಹೇಗೆ ಸಾಧ್ಯ? ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಂಬೇಡ್ಕರ್ ಅವರ ಸಂವಿಧಾನವನ್ನು ಉಲ್ಲಂಘಿಸಿದ್ದು, ಈಶ್ವರಪ್ಪನವರು ಅಂಬೇಡ್ಕರ್ ಅವರ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಕಾನೂನು ಎಲ್ಲರಿಗೂ ಸಮಾನ ಎಂದು ಹೇಳಿದೆ. ಆದರೆ ಇಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿ ಉಳಿದಿಲ್ಲ. ಕಾನೂನಿನ ಪ್ರಕಾರ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಇಂದಿನಿಂದ ‘ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಿಷನ್ ನಡಿಗೆ’ ಹೋರಾಟ ಬೊಮ್ಮಾಯಿ ಅವರ ನಿವಾಸಕ್ಕೆ ಘೆರಾವ್ ಹಾಕುವ ಮೂಲಕ ಆರಂಭವಾಗಿದೆ. ಬೊಮ್ಮಾಯಿ ಅವರು ಭ್ರಷ್ಟಾಕಾರದ ರಕ್ಷಕನಾಗಿದ್ದು, ಆಮೂಲಕ ಅವರು ಭ್ರಷ್ಟಾಚಾರದ ಪಾಲುದಾರನಾಗಿ ನಿಂತಿದ್ದಾರೆ. ಇಲ್ಲದಿದ್ದರೆ ಭ್ರಷ್ಟ ಸಚಿವರನ್ನು ಯಾಕೆ ರಕ್ಷಿಸುತ್ತಿದ್ದಾರೆ. ಬೊಮ್ಮಾಯಿ ಅವರ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಎಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬ ಕನ್ನಡಿಗ ಇದರ ವಿರುದ್ಧ ಧ್ವನಿ ಎತ್ತಬೇಕು. ಇದು ರಾಜಕೀಯ ಹೊರಾಟವಲ್ಲ, ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಹೋರಾಟ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಈ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.’

ವಿಧಾನಸಭೆ ವಿರೋಧ್ ಪಕ್ಷದ ನಾಯಕ ಸಿದ್ದರಾಮಯ್ಯ: ‘ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾಗಿದ್ದು, ಅವರನ್ನು ಸ್ಮರಿಸುತ್ತಾ ಅವರಿಗೆ ನಮನ ಸಲ್ಲಿಸುವ ದಿನ. ಅವರು ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಸಂವಿಧಾನದ ಧ್ಯೇಯೋದ್ದೇಶದಂತೆ ಆಡಳಿತ ನಡೆಸಬೇಕು. ಅಂಬೇಡ್ಕರ್ ಅವರ ಸ್ಫೂರ್ತಿ ಸದಾ ನಮ್ಮಲ್ಲಿ ಇರಲಿದೆ. ಪಕ್ಷದ ವತಿಯಿಂದ ಅವರಿಗೆ ಗೌರವ ಸಲ್ಲಿಸಲಾಗಿದ್ದು, ಮಹಾತ್ಮ ಗಾಂಧಿಜಿ ಅವರಿಗೂ ಗೌರವ ಸಲ್ಲಿಸಲಾಗಿದೆ. ಬಿಜೆಪಿ ಹಾಗೂ ಅದರ ಸರ್ಕಾರದ ಹಿರಿಯ ಸಚಿವ ಈಶ್ವರಪ್ಪನವರು ಸಂತೋಷ್ ಕೆ. ಪಾಟೀಲ್ ಸಾವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಮೃತ ಸಂತೋಷ್ ಸ್ಪಷ್ಟವಾಗಿ ಈಶ್ವರಪ್ಪನವರೆ ನನ್ನ ಸಾವಿಗೆ ಎಂದಿದ್ದಾರೆ. ನಿನ್ನೆ ನಮ್ಮ ಪಕ್ಷದ ನಾಯಕರೆಲ್ಲರೂ ಬೆಳಗಾವಿಗೆ ಹೋಗಿ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದೇವೆ. ನ್ಯಾಯ ಕೊಡಿಸಲು ಹೋರಾಟ ಮಾಡುವುದಾಗಿ ಮಾತು ಕೊಟ್ಟಿದ್ದೇವೆ. ನಾವು ಅಲ್ಲಿಗೆ ಹೋದಾಗ ಅವರ ತಾಯಿ, ಪತ್ನಿ ಬಹಳ ದುಃಖದಿಂದ ಅಳುತ್ತಾ ಸಂತೋಷ್ ಅವರ ಸಾವಿಗೆ ಈಶ್ವರಪ್ಪನವರೇ ನೇರ ಹೊಣೆ ಎಂದು ಹೇಳಿದರು. ಅವರ ದುಃಖ ನೋಡಲು ಸಾಧ್ಯವಾಗಲಿಲ್ಲ.

ಈಶ್ವರಪ್ಪ ಹಾಗೂ ಅವರ ಆಪ್ತರು 40% ಲಂಚ ಕೇಳಿದ್ದಕ್ಕೆ ನೋಂದು ಸಂತೋಷ್ ಅವರು ಆತ್ಮಹತ್ಯೆ ಮಾಡಿಕೊಂಡು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. 4 ಕೋಟಿ ಕಾಮಗಾರಿಗೆ 1.40 ಕೋಟಿ ಲಂಚ ಕೇಳಿದ್ದಾರೆ. ಇದನ್ನು ಸಂತೋಷ್ ತಾಯಿ ಹಾಗೂ ಪತ್ನಿ ಕೂಡ ಒಪ್ಪಿಕೊಂಡಿದ್ದಾರೆ. ಈ ಕೆಲಸ ಮಾಡಲು ಸಂತೋಷ್ ಖಾಸಗಿ ಅವರಿಂದ ಸಾಲ ಮಾಡಿ, ಪತ್ನಿಯ ಒಡವೆ ಅಡವಿಟ್ಟು ಕೆಲಸ ಮಾಡಿದ್ದಾರೆ. ಈ ಲಂಚವನ್ನು ಎಲ್ಲಿಂದ ತಂದುಕೊಡಲಿ ಎಂದು ಸೆತೋಷ್ ಪತ್ನಿಯ ಬಳಿ ಅಳಲು ತೋಡಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಈಸ್ವರಪ್ಪ ಹಾಗೂ ಸಂತೋಷ್ ಇರುವ ಫೋಟೋಗಳು ಪ್ರಕಟವಾಗಿವೆ. ಆದರೂ ನನಗೆ ಸಂತೋಷ್ ಗೊತ್ತೇ ಇಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಇನ್ನು ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲೋಕೇಶ್ ಅವರು ಹೇಳುವ ಪ್ರಕಾರ ಅವರು ಹಾಗೂ ಸಂತೋಷ್ ಒಟ್ಟಾಗಿ ಈಶ್ವರಪ್ಪನವರ ಮನೆಗೆ ಹೋಗಿದ್ದು, ಈಶ್ವರಪ್ಪನವರ ಭರವಸೆ ಮೇರೆಗೆ ಕೆಲಸ ನಡೆದಿದೆ ಎಂದು ಹೇಳಿದ್ದಾರೆ. ಈಶ್ವರಪ್ಪನವರೇ ವರ್ಕ್ ಆರ್ಡರ್ ನೀಡುವುದಾಗಿ ಹೇಳಿ ಭರವಸೆ ಕೊಟ್ಟಿದ್ದರು ಅದಕ್ಕೆ ನಾನೇ ಸಾಕ್ಷಿ. ನಾವು 2-3 ಬಾರಿ ಭೇಟಿ ಮಾಡಿದ್ದೆವು ಎಂದು ಹೇಳಿದ್ದಾರೆ. ಅಲ್ಲಿಗೆ ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿ ಇದ್ದು, ಕೆಲಸವೂ ಆಗಿದೆ. ಈಶ್ವರಪ್ಪ ಹೇಳದೇ ಯಾವುದೇ ಗುತ್ತಿಗೆದಾರ 4 ಕೋಟಿ ಕೆಲಸ ಮಾಡಲು ಸಾಧ್ಯವೇ? ಹೀಗಾಗಿ ಸಂತೋಷ್ ಗೆ ಮೂರುವರೆ ವರ್ಷದ ಹಿಂದೆ ಮದುವೆಯಾಗಿ ಒಂದು ಮಗುವಿದೆ. ಹೀಗಾಗಿ ಈ ಕುಟುಂಬಕ್ಕೆ ಸರ್ಕಾರ 1 ಕೋಟಿ ಪರಿಹಾರ ನೀಡಬೇಕು, ಸಂತೋಷ್ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಕೆಲಸ ನೀಡುವುದು ವಿಳಂಬವಾದರೆ ಸ್ಥಳೀಯ ನಾಯಕರುಗಳು ಯಾರಾದರೂ ತಕ್ಷಣವೇ ಕೆಲಸ ನೀಡಬೇಕು. ಹಾಗೂ ಮುಖ್ಯವಾಗಿ ಈ ಕಾಮಗಾರಿಯ ಬಿಲ್ ಪಾವತಿ ಮಾಡಬೇಕು.

ನಮ್ಮ ಪಕ್ಷದ ವತಿಯಿಂದ 11 ಲಕ್ಷ ಚೆಕ್ ನೀಡುವುದಾಗಿ ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಇದು ಪಕ್ಷದ ವತಿಯಿಂದ ಆ ಕುಟುಂಬಕ್ಕೆ ಸಣ್ಣ ಸಹಾಯವಷ್ಟೇ. ಈ ಪ್ರಕರಣದ ದೂರಿನಲ್ಲಿ ಸಚಿವರು 40% ಲಂಚ ಆಗ್ರಹಿಸಿದ್ದಾರೆ, ಅದನ್ನು ಕೊಡದ ಹಿನ್ನೆಲೆಯಲ್ಲಿ ಬಿಲ್ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದು, ಭ್ರಷ್ಟಾಚಾರದ ಪ್ರಸ್ತಾಪ ಸ್ಪಷ್ವಾಗಿದ್ದು, ಭ್ರಷ್ಟಾರ ನಿಗ್ರಹ ಪ್ರಕರಣ ದಾಖಲಾಗಬೇಕು ಎಂಬುದು ನಮ್ಮ ಆಗ್ರಹ. ಲಂಚ ಆಗ್ರಹಿಸಿದ ಈಶ್ವರಪ್ಪನವರ ಕಿರುಕುಳದಿಂದ ಆತ್ಮಹತ್ಯೆ ಆಗಿದ್ದು ಇದು ಕೊಲೆ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಚಿವರನ್ನು ಬಂಧಿಸಬೇಕಾಗಿದೆ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕಿದೆ. ಆದರೆ ಬಸವರಾಜ ಬೊಮ್ಮಾಯಿ ಅವರು ಸಚಿವರನ್ನು ರಕ್ಷಣೆ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರ ಸರ್ಕಾರದ ಮೇಲೂ 40% ಲಂಚದ ಆರೋಪವಿದ್ದು, ಮುಖ್ಯಮಂತ್ರಿಗಳು ಇದರ ಭಾಗಿಯಾಗಿ ಸಚಿವರ ರಕ್ಷಣೆ ಮಾಡುತ್ತಿದ್ದಾರೆ. ಈಶ್ವರಪ್ಪನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಪ್ರಕರಣದಲ್ಲಿ ಆರೋಪಿ 1 ಆಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀನಾಮೆ ಕೊಡಬೇಕಿತ್ತು. ಬಿಜೆಪಿಯವರು ಲಜ್ಜೆಗೆಟ್ಟವರು. ಇವರಿಂದ ಪ್ರಾಮಾಣಿಕ ತನಿಖೆ ಅಸಾಧ್ಯ. ಈಶ್ವರಪ್ಪ ಅಧಿಕಾರದಲ್ಲಿದ್ದರೆ ನ್ಯಾಯ ಸಿಗಲು ಸಾಧ್ಯವೇ? ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವಾಗ ಬೇರೆಯವರನ್ನು ಬಂಧಿಸುತ್ತಿರಲಿಲ್ಲವೇ? ಹೀಗಾಗಿ ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ಆಗಬೇಕು.

ಹೀಗಾಗಿ ಮುಖ್ಯಮಂತ್ರಿಯನ್ನು ಘೆರಾವ್ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಳೆಯಿಂದ 7 ತಂಡಗಳು ಪ್ರತಿ ಜಿಲ್ಲೆಗೆ ಹೋಗಿ ಪ್ರತಿಭಟನೆ ಮಾಡಲಾಗುವುದು. ನಂತರ ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕರ್ನಾಟಕ ಇತಿಹಾಸದಲ್ಲಿ 40% ಕಮಿಷನ್ ತೆಗೆದುಕೊಂಡಂತಹ ಸರ್ಕಾರವನ್ನು ಕಂಡಿರಲಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಇರಲಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ 40% ಲಂಚ ಆರೋಪವಿದೆ. ಈ ಆರೋಪವನ್ನು ನಾನು ಮಾಡಿದರೆ ರಾಜಕೀಯ ಎಂದು ಹೇಳಬಹುದು. ಆದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಈ ಆರೋಪ ಮಾಡಿದ್ದಾರೆ. ಮೃತ ಸಂತೋಷ್ ಕೂಡ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆಯಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಸಂತೋಷ್ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಈಶ್ವರಪ್ಪನವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ.’ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ರಾಜೀನಾಮೆ ಪಡೆಯುವುದಿಲ್ಲ ಎಂಬ ಬೊಮ್ಮಾಯಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಾಥಮಿಕ ವರದಿ ಬರಲೇಬೇಕಾದ ಅಗತ್ಯವಿಲ್ಲ. ಎಫ್ಐಆರ್ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಈಶ್ವರಪ್ಪ ಮೊದಲ ಆರೋಪಿಯಾಗಿದ್ದಾರೆ. ಇನ್ನು ಮೃತ ಸಂತೋಷ್, ಆತನ ಪತ್ನಿ ಅವರ ಹೇಳಿಕೆ ಇದೆ. ಈ ವಿಚಾರದಲ್ಲಿ ಸಚಿವರ ರಕ್ಷಣೆ ಮಾಡಬೇಡಿ, ರಾಜ್ಯವನ್ನು ಭ್ರಷ್ಟಾಚಾರ ರಾಜ್ಯವನ್ನಾಗಿ ಮಾಡಬೇಡಿ ಎಂದು ಆಗ್ರಹಿಸಿ ಇಂದು ಘೆರಾವ್ ಮಾಡಲಾಗುತ್ತಿದೆ’ ಎಂದು ಉತ್ತರಿಸಿದರು.

Leave a Comment

Your email address will not be published. Required fields are marked *

Translate »
Scroll to Top