ಹಿಜಾಬ್, ಕೇಸರಿ ಶಾಲು ವಿವಾದ

ದಾವಣಗೆರೆ,14 : ಜಿಲ್ಲೆಯಲ್ಲಿ ಶಾಂತಿಪಾಲನೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಾವಣಗೆರೆ ಜಿಲ್ಲೆಯಾದ್ಯಂತ ಫೆ.14 ರ ಬೆಳಿಗ್ಗೆ 06 ರಿಂದ ಫೆ.15 ರ ಬೆಳಿಗ್ಗೆ 6.00 ಗಂಟೆಯವರೆಗೆ ಭಾರತೀಯ ದಂಡ ಸಂಹಿತೆ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಧರ್ಮದ ಅಥವಾ ಯಾವುದೇ ಸಂಘಟನೆಗಳ ಮುಖಂಡರುಗಳು ಮತ್ತು ನಾಯಕರುಗಳು ಶಾಲಾ ಕಾಲೇಜುಗಳ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಅಥವಾ ಶಿಕ್ಷಕಿಯರು ಮತ್ತು ಕಾಲೇಜು ಸಿಬ್ಬಂಧಿಗಳು ಹೊರತುಪಡಿಸಿ ಅನಿವಾರ್ಯ ಸಂದರ್ಭಗಳಲ್ಲಿ ಪೋಷಕರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್‍ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಕಾನೂನು ಭಂಗ ಉಂಟುಮಾಡುವ ಉದ್ದೇಶದಿಂದ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿಭರ್ಂಧಿಸಿದೆ. ಯಾವುದೇ ಮೆರವಣಿಗೆ ಮತ್ತು ಸಭೆ ಸಮಾರಂಭಗಳನ್ನು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನುನಿಷೇಧಿಸಲಾಗಿದೆ. ಶಸ್ತ್ರಗಳನ್ನು, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಇನ್ನು ಮುಂತಾದ ಮಾರಾಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆ ಉಂಟುಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ಅಥವಾ ಶೇಖರಿಸುವುದನ್ನು ನಿಷೇಧಿಸಿದೆ.

ಯಾವುದೇ ಸ್ಫೋಟಕ ವಸ್ತುಗಳನ್ನು (ಪಟಾಕಿ/ಸಿಡಿಮದ್ದು) ಬಳಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು, ಎಸೆಯುವ ಸಾಧನಗಳನ್ನು ಅಥವಾ ಉಪಕರಣಗಳ ಒಯ್ಯುವಿಕೆ ಮತ್ತು ಶೇಖರಿಸುವುದನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವುದನ್ನು ಪ್ರಚೋದಿಸಬಹುದಾದಂತಹ ಬಹಿರಂಗ ಘೋಷಣೆಗಳನ್ನು ಕೂಗುವುದು ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು ಸಂಕೇತಗಳನ್ನು, ಭಿತ್ತಿಪತ್ರ ಅಥವಾ ಇತರ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದೆ. ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಆಸ್ತಿಗಳನ್ನು ಹಾನಿಗೊಳಿಸುವ ಮತ್ತು ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿಯ ಜಾತಿ, ಧರ್ಮ, ಕೋಮು, ಪಂಥಗಳಿಗೆ ಅಥವಾ ಸಾರ್ವಜನಿಕ ನೈಜಿಕತೆಗೆ ಬಾಧಕ ಉಂಟು ಮಾಡಬಹುದಾದಂತಹ ಚಟುವಟಿಕೆಗಳನ್ನು ನಿಷೇಧಿಸಿದೆ.

ಸರ್ಕಾರಿ ಸಂಸ್ಥೆಗಳು ಅಥವಾ ಸಂಘಟನೆಗಳು ಹಾಗೂ ಕಾರ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ನಿಂಧಿಸುವಂತಹ, ಅವಹೇಳನಕಾರಿಯಾದಂತಹ ಯಾವುದೇ ಘೋಷಣೆಗಳು, ಭಾಷಣಗಳು ಪ್ರಕಟಣೆಗಳು, ಅವಾಚ್ಯ ಶಬ್ದಗಳ ಬಳಕೆ, ಪ್ರಚೋದನಾಕಾರಿ ಭಾಷಣ ಅಥವಾ ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ. ಈಗಾಗಲೇ ಸರ್ಕಾರ ಕಾರ್ಯಕ್ರಮಗಳು ನಿಗಧಿಯಾಗಿದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಮುಂದುವರೆಯತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top