ಬಳ್ಳಾರಿ: ಕಲುಷಿತ ನೀರು ಸೇವೆನೆಯಿಂದ ವಾಂತಿ-ಬೇಧಿ ಕಂಡುಬರುವ ಹಿನ್ನಲೆಯಲ್ಲಿ ಕುಡಿಯುವ ನೀರನ್ನು ಕನಿಷ್ಟ 20 ನಿಮಿಷಗಳ ಕಾಲ ಕುದಿಸಿದ ನಂತರ ಆರಿಸಿ, ಸೋಸಿ ಕುಡಿಯುವ ಮೂಲಕ ಸಂಭಾವ್ಯ ವಾಂತಿ-ಬೇಧಿ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಹೇಳಿದರು.
ಬಳ್ಳಾರಿ ನಗರದ ಮರಿಸ್ವಾಮಿಮಠ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಾಪೂಜಿ ನಗರದಲ್ಲಿ ಕಂಡು ಬಂದಿರುವ ವಾಂತಿ-ಭೇದಿ ಪ್ರಕರಣಗಳ ಹಿನ್ನಲೆಯಲ್ಲಿ ಶನಿವಾರದಂದು ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ನೀಡಿ ಮಾತನಾಡಿದರು.
ಬೇಸಿಗೆಯಲ್ಲಿ ತಯಾರಿಸಿದ ಆಹಾರವು ಬೇಗನೇ ಹಾಳಾಗುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಆಹಾರವು ಬಿಸಿಯಾಗಿರುವಾಗಲೇ ಸೇವಿಸುವ ರೂಢಿ ಅಳವಡಿಸಿಕೊಳ್ಳಬೇಕು ಎಂದರು.
ಯಾರಿಗಾದರೂ ವಾಂತಿ-ಬೇಧಿ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಮರಿಸ್ವಾಮಿ ಮಠ ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಹತ್ತಿರದಲ್ಲಿರುವಂತಹ ಶುದ್ಧೀಕರಣ ಘಟಕದ ನೀರನ್ನು ಕುಡಿಯಿರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡ ನೀರಿನ ಮೂಲಗಳ ಪರೀಕ್ಷೆಯನ್ನು ಕೈಗೊಂಡು ನಿರಂತರ ನಿಗಾವಣೆ ವಹಿಸಲಾಗುತ್ತಿದೆ. 7 ತಂಡಗಳನ್ನು ರಚಿಸಿ 300 ಮನೆಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿಯು ಮನೆ ಮನೆಗೆ ಭೇಟಿ ನೀಡಿ, ಕೈತೊಳೆಯುವ ವಿಧಾನ ಕುರಿತು ಪ್ರಾತ್ಯಕ್ಷತೆಯನ್ನು ಕೈಗೊಳ್ಳಲಾಗಿದ್ದು, 1 ಪ್ಯಾಕೇಟ್ ಓಆರ್ಎಸ್ ಪುಡಿಯನ್ನು 1 ಲೀಟರ್ ಶುದ್ಧ ನೀರಿಗೆ ಮಿಶ್ರಣ ಮಾಡಿ ದ್ರಾವಣ ತಯಾರಿಸಿ 24 ಗಂಟೆಯೊಳಗೆ ಬಳಸುವ ಕುರಿತು ಮಾಹಿತಿ ನೀಡುವ ಮೂಲಕ ಕರಪತ್ರ ವಿತರಣೆ ಮಾಡಲಾಗಿದೆ ಎಂದರು.
ಮಹಾನಗರ ಪಾಲಿಕೆ ಸಹಕಾರದೊಂಧಿಗೆ ತಾಜ್ಯವಿಲೇವಾರಿ ವಾಹನದ ಮೂಲಕ ಜಾಗೃತಿಯ ಮೈಕಿಂಗ್ ಕೈಗೊಳ್ಳಲಾಗಿತ್ತಿದ್ದು, ಆದರೂ ಸಹಿತ ಸಾರ್ವಜನಿಕರು ಮುಂಜಾಗೃತೆಗಾಗಿ ಊಟದ ಮೊದಲು ಮತ್ತು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್ಗಳ ಕಾಲ ತೊಳೆದುಕೊಂಡ ನಂತರ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಬೇಕು, ಬಿಸಿಯಾದ ಆಹಾರ ಮಾತ್ರ ಸೇವಿಸಬೇಕು-ತಂಗಳು ಆಹಾರವನ್ನು ಸೇವಿಸಬಾರದು. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿರಿ, ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ನೊಣಗಳು ಉಂಟಾಗದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ವೈದ್ಯಾಧಿಕಾರಿಗಳಾದ ಡಾ.ಅಭಿಷೇಕ್, ಡಾ.ಕರುಣಾ, ಮಹಾನಗರ ಪಾಲಿಕೆ ಸದಸ್ಯ ಶಿವರಾಜ, ಸಹಾಯಕ ಅಭಿಯಂತರರ ಶ್ರೀನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಎಪಡಮಾಲಜಿಸ್ಟ್ ಡಾ.ಪ್ರಿಯಾಂಕ, ಜಿಲ್ಲಾ ಕಾಲಾರಾ ತಂಡದ ಕೆ.ಎಮ್.ಶಿವಕುಮಾರ್, ತಿಪ್ಪೇಸ್ವಾಮಿ, ಮಹಮ್ಮದ್ದ್ ಖಾಸಿಂ ಮತ್ತು ಸಿಬ್ಬಂದಿ ವರ್ಗದವರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ಉಪ್ಪಾರ, ಮಹಾಂಕಾಳಿ, ವಿಜಯಲಕ್ಷ್ಮಿ, ಸೋಮಶೇಖರ ಹಾಗೂ ಆಶಾ ಕಾರ್ಯಕರ್ತೆಯರು ಇತರರು ಹಾಜರಿದ್ದರು.