ಸದನದಲ್ಲಿ ವರ್ಗಾವಣೆ ದಂಧೆ ಪ್ರಸ್ತಾಪಿಸಿ ಚಾಟಿ ಬೀಸಿದ ಹೆಚ್.ಡಿ.ಕುಮಾರಸ್ವಾಮಿ

ಒಂದು ಇಲಾಖೆಯ ವರ್ಗಾವಣೆ ರೇಟ್ ಕಾರ್ಡ್ ತೋರಿಸಿದ ಮಾಜಿ ಸಿಎಂ, ಇದೇನು ಹೊಸ ಗ್ಯಾರಂಟಿಯಾ ಎಂದು ಪ್ರಶ್ನೆ, ವಿದ್ಯುತ್ ಖರೀದಿ ಬಗ್ಗೆ ಸಿಬಿಐ ತನಿಖೆಗೆ ಆಗ್ರಹ, ಗೆಲ್ಲಲು ಕೊಟ್ಟ ಗಿಫ್ಟ್ ಕೂಪನ್ ಪ್ರದರ್ಶನ ರಾಜ್ಯದ ಜನತೆಗೆ ಐದು ಅಂಶಗಳ ಗ್ಯಾರಂಟಿ ನೀಡಿದ್ದ ಕಾಂಗ್ರೆಸ್ ಪಕ್ಷವು, ಅಧಿಕಾರಕ್ಕೆ ಬಂದ ಮೇಲೆ ‘ ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ ‘ ನೀಡಲು ಹೊರಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗೆ ದರ ನಿಗದಿ ಆಗಿದೆ. ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿ ನನ್ನ ಕೈಯ್ಯಲ್ಲಿ ಇದೆ. ಅದನ್ನು ಯಾರೋ ನನಗೆ ತಂದು ಈ ವಿವರ ನೀಡಿದ್ದಾರೆ ಎಂದರು.

ಈ ದರಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿದ ಮಾಜಿ ಮುಖ್ಯಮಂತ್ರಿ ಅವರು; ಬೇಕಿದ್ದರೆ ಇದನ್ನು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕಳಿಸಿಕೊಡುವುದಾಗಿ ಹೇಳಿದರು. ನಾನು ಯಾವುದೇ ಸಹನೆಯನ್ನು ಕಳೆದುಕೊಂಡಿಲ್ಲ, ನಾನು ಯಾವುದೇ ದ್ವೇಷ ವನ್ನು ಮಾಡ್ತಿಲ್ಲ. ಮತ್ತೆ ಹೆಡೆ ಎತ್ತಿದೆ ವರ್ಗಾವಣೆ ಮಾಫಿಯಾ. ನಾನು ಒಂದು ಗಿರಾಕಿಯ ಕರ್ಮಕಾಂಡವನ್ನು ಇಲ್ಲಿ ಹೇಳುತ್ತೇನೆ, ಅವರ ಹೆಸರೇಳಲ್ಲ. ಇದನ್ನು ಸ್ಪೀಕರ್ ಮತ್ತು ಸಿಎಂ ಅವರಿಗೆ ಕಳಿಸುತ್ತೇನೆ. ಆದರೆ ಒಂದು ನಿರ್ದಿಷ್ಟ ಇಲಾಖೆಯ ಕಥೆ ಇದು. ಎಷ್ಟೆಷ್ಟು ದರ ನಿಗದಿ ಮಾಡ್ಕೊಂಡಿದ್ದಾರೆಂದು ಇಲ್ಲಿದೆ ಎಂದರು ಅವರು. ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ವರ್ಗಾವಣೆಯ ರೇಟ್ ಕಾರ್ಡ್ ಹೊರಡಿಸಿತ್ತು ಎನ್ನುತ್ತಾ ಕುಮಾರಸ್ವಾಮಿ ಅವರು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಮಾಧ್ಯಮಗಳಲ್ಲಿ ನೀಡಿದ್ದ ಹಗರಣಗಳ ರೇಟ್ ಕಾರ್ಡ್ ಜಾಹೀರಾತನ್ನು ಪ್ರದರ್ಶಿಸಿದರು. ಹಿಂದೆ ನೀವು ಬಿಜೆಪಿ ಸರಕಾರದ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹಾಕಿದ್ದೀರಿ. ಮುಂದೆ ನಿಮ್ಮ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹೊರಡಿಸಬೇಕಾಗುತ್ತದೆ. ಅದರಿಂದ ಈಗಲೇ ಎಚ್ಚೆತ್ತುಕೊಂಡು ಸರಿ ಮಾಡಿಕೊಳ್ಳಿ ಎನ್ನುವ ಸದುದ್ದೆಶದಿಂದ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಗ್ಯಾರಂಟಿಗಳ ಸೈಡ್ ಎಫೆಕ್ಟ್ ಸರಿ ಮಾಡಿ;

ನಿಮ್ಮ ಗ್ಯಾರಂಟಿಗಳನ್ನು ನಾನು ವಿರೋಧ ಮಾಡುವುದಿಲ್ಲ. ಸ್ವಾಗತ ಮಾಡುತ್ತೇನೆ, ನೀವು ನುಡಿದಂತೆ ನಡೆಯುತ್ತಿಲ್ಲ ಎಂದು ಹೇಳುತ್ತಿಲ್ಲ, ನಡೆಯಲು ಪ್ರಯತ್ನ ಮಾಡುತ್ತಿದ್ದೀರಿ. ಆದರೆ ನುಡಿದಂತೆ ಪೂರ್ಣವಾಗಿ ನಡೆಯಲು ನಿಮ್ಮಿಂದ ಆಗುತ್ತಿಲ್ಲ. ಈ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಗಳ ಬಗ್ಗೆ ಏನು ಮಾಡಿದ್ದಿರಿ? ಈ ಬಗ್ಗೆ ನೀವು ಚಿಂತನೆಯನ್ನೇ ಮಾಡಿಲ್ಲ. ಗ್ಯಾರಂಟಿಗಳ ಬಾಧೆಗೆ ತುತ್ತಾದವರಿಗೆ ನೀವು ಏನಾದರೂ ಒಳ್ಳೆಯದು ಮಾಡಬೇಕಲ್ಲವೆ? ಎಂದು ಕುಮಾರಸ್ವಾಮಿ  ಅವರು ಒತ್ತಾಯ ಮಾಡಿದರು.

ಗೃಹಜ್ಯೋತಿ ಎನ್ನುತ್ತೀರಿ, ಜನರ ಮೇಲೆ ಹೊರೆ ಹಾಕುತ್ತೀರಿ!!:

ಗೃಹಜ್ಯೋತಿ ಅಂತ ಮಾಡಿದ್ದೀರಿ. ಆದರೆ, 200 ಯೂನಿಟ್ ಉಚಿತ ಎಂದವರು ಈಗ ಸರಾಸರಿ ಲೆಕ್ಕ ಹೇಳಿಕೊಂಡು ಜನರಿಗೆ ಹೊರೆ ಹಾಕುತ್ತಿದ್ದೀರಿ. ಅಸಹಜ ದರಕ್ಕೆ ವಿದ್ಯುತ್ ಖರೀದಿ ಮಾಡಿ ಜನರಿಗೆ ಮೋಸ ಮಾಡಲಾಗಿದೆ. ಹಿಂದೆ ವಿದ್ಯುತ್ ಖರೀದಿ ಬಗ್ಗೆ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿದ್ದೀರಿ. ಆ ಸಮಿತಿ ಹಣೆಬರಹ ಏನಾಯಿತು ಎನ್ನುವುದು ಗೊತ್ತಿದೆ. ಇವತ್ತಿನ ಉಪ ಮುಖ್ಯಮಂತ್ರಿ ಅವರಿಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ ಎಂದರು. ಒಂದು ಕಡೆ ಮನಸೋ ಇಚ್ಛೆ ದುಡ್ಡು ಕೊಟ್ಟು ಅಸಹಜ ದರಕ್ಕೆ ವಿದ್ಯುತ್ ಖರೀದಿ ಮಾಡಿ ಬೊಕ್ಕಸಕ್ಕೆ ನಷ್ಟ ಉಂಟು  ಮಾಡುತ್ತೀರಿ. ಇನ್ನೊಂದು ಕಡೆ ಆ ನಷ್ಟ ತುಂಬಿಕೊಳ್ಳಲು ವಿದ್ಯುತ್ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹೇರುತ್ತಿರಿ. ಇದ್ಯಾವ ನ್ಯಾಯ? ಇದು ಗೃಹಜ್ಯೋತಿಯಾ? ಹೆಚ್ಚಿನ ದರ ಕೊಟ್ಟು ವಿದ್ಯುತ್ ಕೊಂಡುಕೊಳ್ಳೋ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನೆ ಮಾಡಿದರು. ಸಿಬಿಐ ತನಿಖೆ ನಡೆದರೆ ಈ ಎಲ್ಲಾ ಅಕ್ರಮಗಳು ಆಚೆಗೆ ಬರುತ್ತವೆ. ಸಿಬಿಐ ತನಿಖೆಗೆ ವಹಿಸಿ ಎಂದು ಅವರು ಹೇಳಿದರು. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಪ್ರಕರಣ ಪ್ತಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಅವರು; ಸೋಲಾರ್ ಪಿಪಿಎಸ್ ವಿಚಾರದಲ್ಲಿ ಅಕ್ರಮದ ನಡೆದಿದೆ. ಒಂದು ಯೂನಿಟ್ ವಿದ್ಯುತ್ ಗೆ 9.60ರೂ ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 25 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಡಿಸಿಎಂ ಅವರನ್ನು ಕೇಳಿದರೆ ಗೊತ್ತಾಗುತ್ತದೆ. ಇದರ ಬಗ್ಗೆ 2018ರಲ್ಲೂ ನಾನು ಮಾತಾಡಿದ್ದೆ, ನಂತದ ಸದನ ಸಮಿತಿ ರಚಿಸಲಾಯ್ತು. ಇದರಲ್ಲಿ ಏನೇನಾಗಿದೆ ಅಂತ ಸತ್ಯ ಗೊತ್ತಾಗಲು ಸಿಬಿಐ  ತನಿಖೆಗೆ ಕೊಟ್ರೆ ಗೊತ್ತಾಗುತ್ತೆ. ಯಾರ ಯಾರ ಹಣೆಬರಹ ಏನೇನಾಗಿದೆ ಅಂತ ಸಿಬಿಐಗೆ ಕೊತ್ತಾರೆ ಹೊರಗೆ ಬರುತ್ತದೆ. ಕಡಿಮೆ ದರಕ್ಕೆ ವಿದ್ಯುತ್ ಸಿಗುತ್ತಿದ್ದರೂ ದುಬಾರಿ ದರಕ್ಕೆ ಯಾಕೆ ಹೋದರು ಅಂತ ಹೇಳಲಿ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.

ಫೋಟೋ ಹಾಕಿ ಎಂದು ವ್ಯಂಗ್ಯ:

ವಿದ್ಯುತ್ ದರ ಏರಿಕೆ ಮಾಡಿದ್ದಕ್ಕೆ ಕಟುವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು; ಈಗ ಫ್ರೀ ಬಿಲ್ ಮೇಲೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಫೋಟೋ ಹಾಕಲು ಹೊರಟಿದ್ದೀರಿ, ಸಂತೋಷ. ಅದೇ ರೀತಿ ದರ ಹೆಚ್ಚಳ ಮಾಡಿದ ಬಿಲ್ ಗಳ ಮೇಲೆಯೂ ಫೋಟೋ ಹಾಕಿ. ಅದೂ ನಿಮ್ಮದೇ ಕೊಡುಗೆ ಅಲ್ಲವೇ? ಎಂದು ಕುಟುಕಿದರು.

ಖಾಸಗಿ ಬಸ್ ಮಾಲೀಕರಿಗೆ ನೆರವಾಗಿ:

ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದೀರಿ, ಸಂತೋಷ. ಹಾಗೆಯೇ ಪುರುಷರಿಗೂ ಫ್ರೀ ಸೌಲಭ್ಯ ಕೊಡಿ. ಅವರೇನು ಪಾಪ ಮಾಡಿದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ವೋಟು ಕೊಟ್ಟಿಲ್ಲವೇ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಅದೇ ರೀತಿ ಶಕ್ತಿ ಯೋಜನೆಯಿಂದ ತೊಂದರೆಗೆ ಒಳಗಾಗಿರುವ ಖಾಸಗಿ ಬಸ್ಸು ಮಾಲೀಕರು, ಚಾಲಕರಿಗೆ, ಆಟೋ ಚಾಲಕರಿಗೇ ಏನು ಮಾಡಬೇಕು..? ಎಂದು ಸರ್ಕಾರ ಯೋಚನೆ ಮಾಡಬೇಕು. ಬಸ್ಸು ಟಿಕೆಟ್ ಹರಿಯೋದ್ರಲ್ಲೂ ಅಕ್ರಮ ನಡೆಯುತ್ತಿದೆ. ಇದನ್ನು ತಡೆಯಲು ಏನು ಮಾಡಿದ್ದೀರಿ? ಎಂದು ಅವರು ಕೇಳಿದರು.

ಮತದಾರರಿಗೆ ಗಿಫ್ಟ್ ಕೂಪನ್ ಆಮಿಷ:

ರಾಜ್ಯಪಾಲರ ಭಾಷಣದಲ್ಲಿ ಹೊಸ ಭರವಸೆ, ಹೊಸ ಕನಸು ಎಂದು ಬರೆಯಲಾಗಿದೆ. ಹಾಗೆಂದರೇನು? ಅಕ್ರಮವಾಗಿ ಚುನಾವಣೆಯಲ್ಲಿ ಗೆಲ್ಲುವುದೇ ಭರವಸೆ, ಕನಸಾ? 5 ಸಾವಿರ ರೂಪಾಯಿ ಗಿಫ್ಟ್ ಕೊಟ್ಟು, ಚುನಾವಣೆ ಗೆಲ್ಲಲಾಗಿದೆ ಎಂದ ಕುಮಾರಸ್ವಾಮಿ ಅವರು, ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಂಚಿರುವ ಗಿಫ್ಟ್ ಕಾರ್ಡ್ ಗಳನ್ನು ಸದನದಲ್ಲಿ ತೋರಿಸಿದರು. ಚುನಾವಣೆ ಮುಗಿದ ಮೇಲೆ ಗಿಫ್ಟ್ ಗಳನ್ನು ಕೊಟ್ಟಿಲ್ಲ . ಆ ಕಾರ್ಡುಗಳು ಮತದಾರರ ಮನೆಗಳಲ್ಲಿ ಬಿದ್ದಿವೆ ಎಂದು ಅವರು ಆರೋಪ ಮಾಡಿದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top