ಛೇ ಮೊಬೈಲ್ ಕಳೆದು ಹೋಯ್ತೇ ? ಒಳ್ಳೇದಾಯ್ತು ಬಿಡಿ!!

ಮರೆವು ಒತ್ತಡ ಹಾಗೂ ಗಡಿಬಿಡಿ ಜೀವನದಿಂದ ಮೊಬೈಲ್ ಮರೆತು ಬರುವುದು ಹಾಗೂ ಕಳೆದುಕೊಳ್ಳುವುದು ಈಗ ಸಹಜವಾದ ಪೃಕ್ರಿಯೆ,

 ನಮ್ಮ ಅಕ್ಕಪಕ್ಕದಲ್ಲಿ ಈಗ ನೂರಕ್ಕೆ ಅರವತ್ತರಷ್ಟು ಜನ ಮೊಬೈಲ್ ಕಳೆದುಕೊಂಡ ಸಂತ್ರಸ್ತರು ಓಡಾಡಿಕೊಂಡಿದ್ದಾರೆ  ಎಂದರೆ ಅದು ನಿಜಕ್ಕೂ ತಮಾಷೆಯ ಮಾತಲ್ಲ. 

ಪ್ರತಿ ವರ್ಷ  ಊಟ ತಿಂಡಿ ವಸತಿ ಅಥವಾ ಮೂಲಭೂತ ವ್ಯವಸ್ಥೆಗಳಿಗಿಂತ ಹೆಚ್ಚಿನ ಹಣವನ್ನು ಅನಿವಾರ್ಯವಾಗಿ ಮೊಬೈಲ್ ಗಾಗಿ ವ್ಯಯ ಮಾಡಬೇಕಾಗಿದೆ, ಎಂದರೆ ಹೌದೇ? ಎಂದು ಕೇಳಬೇಡಿ.

 

ಮೊಬೈಲ್ ಒಂದಿದ್ದರೆ ಸಾಕು, ಊಟ, ತಿಂಡಿ ಬಂಧುಗಳು, ಆತ್ಮೀಯರು ಸ್ನೇಹಿತರೂ ಹಾಗೂ ಎದುರಿಗೆ ಇದ್ದವರು ಎಲ್ಲರೂ ಕಿರಿಕಿರಿ. 

ಕಳೆದೊಂದು ದಶಕದಿಂದೀಚೆಗೆ ಮೊಬೈಲ್ ಬಳಕೆ ಹೆಚ್ಚಾದಂತೆಲ್ಲಾ ಮೊಬೈಲ್ ಗಳನ್ನು ಕಳೆದುಕೊಳ್ಳುವುದು ಮತ್ತು ಕಳವು ಮಾಡುವುದು ಸಹ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೂರದಿಂದಲೇ ತಮ್ಮ ಮೊಬೈಲ್ ಬಂದ್ ಮಾಡುವ ಹಾಗೂ ಕಳ್ಳರಿಗೆ ಬಳಕೆ ಮಾಡಲು ಬಾರದಂತೆ ತಡೆಯುವ ಮುಂದುವರೆದ ಹಲವು ತಂತ್ರಜ್ಞಾನಗಳು ಬಂದಿದ್ದರೂ ಸಹ ಪ್ರೊಫೆಷನಲ್ ಮೊಬೈಲ್ ಕಳ್ಳರಿಗೆ ಇದ್ಯಾವುದರ ಚಿಂತೆ ಇಲ್ಲ, ರಂಗೋಲಿ ಕೆಳಗೆ ಹೇಗೆ ಸಮರ್ಥವಾಗಿ ನುಸುಳಬಹುದು ಎಂಬುದು ಅವರಿಗೆ ಗೊತ್ತಿದೆ, ಕದ್ದ ಮೊಬೈಲ್ ಗಳ ಬಿಡಿ ಭಾಗಗಳನ್ನು ಪ್ರತ್ಯೇಕಿಸಿ ಎಲ್ಲಿಗೆ ಹೇಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುವ ಅನೇಕ ತಂತ್ರಜ್ಞಾನವನ್ನು ಅವರು ಸಹ ಅನ್ವೇಷಿಸಿದ್ದಾರೆ. ಹೀಗಾಗಿ ಸಿಕ್ಕಿ ಹಾಕಿ ಕೊಳ್ಳುವ ಸಂಭವನೀಯತೆ ಬಹಳ ಕಡಿಮೆ.

            ಪೋಲಿಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆ  ಜೊತೆಗೆ ಕೋರ್ಟ್ ಕೆಲಸ, ಗಣ್ಯವಕ್ತಿಗಳ ಸುರಕ್ಷತೆ ಒಂದೇ ಎರಡೇ ಅವರಿಗೆ ನೂರಾರು ಕೆಲಸಗಳು ಅದರ ಮಧ್ಯೆ ಕೆಲಸವಿಲ್ಲದೇ ಮೊಬೈಲ್ ತಿಕ್ಕುತ್ತಾ ಕೂರುವ  ಸಾವಿರಾರು ಜನರು ಕಳೆದುಕೊಂಡ  ಮೊಬೈಲ್ ಗಳನ್ನು ಹುಡುಕಿ ಕೊಡುತ್ತಾ ಕೂರುವುದು ಹಾಗೂ ,

ಲೋಕೇಶನ್ ಹುಡುಕಿ ಮನೆ ಮನೆಗೆ ತೆರಳಿ  ಫೋನ್ ಎಲ್ಲಿದೆ ಎಂದು ಕೇಳುತ್ತಾ ಕೂರಲು ಅವರನ್ನೇನು ಐಪಿಎಲ್ ಆಟ ನೋಡುವ ಪ್ರೇಕ್ಷಕರು ಎಂದುಕೊಂಡಿದ್ದಿರೋ?. 

 

ಆಕಸ್ಮಿಕವಾಗಿ ಮೊಬೈಲ್ ಕದಿಯುವಾಗ ಕಳ್ಳ ಸಿಕ್ಕರೆ, ಅಥವಾ ಕದ್ದ ಮೊಬೈಲ್ ಗಳ ಲೋಕೇಶನ್ ಒಂದೇ ಜಾಗದಲ್ಲಿ ಇದ್ದರೆ ಆಗ ಜಪ್ತಿ ಮಾಡುವ ಫೋನ್ ಗಳ ಮಧ್ಯೆ ನಿಮ್ಮ ಫೋನ್ ಇದ್ದರೆ ಅದು ಸಿಕ್ಕರೂ ಸಿಗಬಹುದು, ಅಷ್ಟು ದಿನದ ವರೆಗೆ ನಿಮ್ಮ ನೆನಪಿನ ಶಕ್ತಿ ಗಟ್ಟಿಯಾಗಿರಬೇಕು ಅಷ್ಟೇ. 

 ನೀವು CIER ಪೋರ್ಟ್ಲಲ್ ಗೆ ಹೋಗಿ, ಕಳೆದ ಮೊಬೈಲ್ ಬಗ್ಗೆ ದೂರು , ಅಲ್ಲಿ ನಿಮ್ಮ ಮೊಬೈಲ್ IMEI ಹಾಗೂ ಫೋನ್ ಮಾಡೆಲ್ ನಂಬರ್  ನೀಡಿ ಸೈಬರ್ ನವರಿಗೆ , ಓ ಟಿ ಪಿ, ಆಧಾರ್ ಕಾರ್ಡ್ ಮೊಬೈಲ್ ಖರೀದಿ ರಶೀದಿ ಕೊಟ್ಟು ಬರುವಷ್ಟೆಲ್ಲಾ ತಾಳ್ಮೆ, ಜಾತಕ ಪಕ್ಷಿಯಂತೆ ಕಾಯುವ ಸಂಯಮ ನಿಮ್ಮ ಬಳಿ ಇದೆಯೇ? ಅದಕ್ಕಿಂತ ನಿಮಗೆ ಹೊಸ ಮೊಬೈಲ್ ಖರೀದಿಸುವುದೇ ಸುಲಭ ಎನಿಸಿ ಬಿಡುತ್ತದೆ. 

ಮುಂದಿನ ದಿನಗಳಲ್ಲಿ ಕಳೆದು ಕೊಂಡ ಮೊಬೈಲ್ ಫೋನ್ ಗಳಿಗಾಗಿ ಸರ್ಕಾರದಿಂದ *”ಮೊಬೈಲ್ ಹುಡುಕುವ           ಪೋಲಿಸರ ಕಛೇರಿ”* ಎಂಬ ಪ್ರತ್ಯೇಕ ಇಲಾಖೆ ತೆರೆಯಿರಿ ಎಂಬ ಸಾರ್ವಜನಿಕ ಕೂಗು ಅಧಿವೇಶನದಲ್ಲಿ ಕೇಳಿ ಬಂದರೆ ಅಥವಾ ಬೀದಿಗಳಲ್ಲಿ ಅದಕ್ಕಾಗಿ ಹೋರಾಟ ನಡೆದರೆ ಅದೇನು ಆಶ್ಚರ್ಯ ಪಡುವ ಸಂಗತಿ ಅಲ್ಲ .

 ಚುನಾವಣೆಗಳಲ್ಲಿ ಕಳೆದ ಮೊಬೈಲ್ ಪೋನ್ ಗಳನ್ನು ಹುಡುಕಿ ಕೊಡುತ್ತೇವೆ, ಎಂಬ ಗ್ಯಾರಂಟಿ ಅಂಶ ಪ್ರಣಾಳಿಕೆಯಲ್ಲಿ ಸೇರಿದರೆ ಅದು ಸಹ ಆಶ್ಚರ್ಯ ಪಡುವ ವಿಷಯವಲ್ಲ. 

ಭಾರತದಲ್ಲಿ ಖಾಸಗಿಯವರೇನಾದರೂ ನಾವು ನಿಮ್ಮ ಕಳೆದ *ಮೊಬೈಲ್ ಹುಡುಕಿ ಕೊಡುತ್ತೇವೆ* ಜಾಹೀರಾತು ನೀಡಿ ಅಂತಹ ಕೇಂದ್ರಗಳನ್ನೇನಾದರೂ ದೇಶದ ತುಂಬಾ ತೆರದರೆ ಮುಗಿದೆ ಹೋಯಿತು, ಖಂಡಿತ ಮೊಬೈಲ್ ತಯಾರಿಕಾ ಕಂಪೆನಿ ಗಳಿಗಿಂತ ಹೆಚ್ಚು ಹಣ ಲೂಟಿ ಹೊಡೆಯುತ್ತಾರೆ. 

ಸುಮ್ಮನೆ ಮೊಬೈಲ್ ಕಳೆದುಕೊಂಡ ಕೂಡಲೇ, ಒಂದು ದೀರ್ಘವಾದ ಉಸಿರು ತೆಗೆದುಕೊಂಡು, ನಿಟ್ಟುಸಿರು ಬಿಟ್ಟು ಬಿಡಿ. ಕಳೆದ ಮೊಬೈಲ್  ಸತ್ತ ಹೆಣದಂತೆ ವಾಪಸ್ ಮನೆಗೆ ಬಂದರೆ, ಅದೊಂದು ದೊಡ್ಡ ಅದ್ಬುತ. 

 

 ಕೂಡಲೇ ಸಿಮ್ ಬ್ಲಾಕ್ ಮಾಡಿಸಿ.  ಸತ್ತವರ ಮನೆಯಲ್ಲಿ ಇರುವ ಶೋಕದಂತೆ ಒಂದು ವಾರ ಮೊಬೈಲ್ ಸಿಕ್ಕರೂ ಸಿಗಬಹುದು ಎನ್ನುವ ಆಸೆಯ ಮೈಲಿಗೆ ಇರುತ್ತದೆ, ಅನಿವಾರ್ಯವಾಗಿ ಮೊಬೈಲ್ ನಿಂದ ದೂರವಿರಿ, ಇಲ್ಲವೇ ಹಳೆಯ ಯಾವುದಾದರೂ ಮೊಬೈಲ್ ಗೆ ಹೊಸ ಸಿಮ್ ಹಾಕಿ ಹೊಸದು ಬರುವ ತನಕ, ಹಳೆಯ ಮೊಬೈಲ್ ನ ಫೀಚರ್ ಗಳು ಫೋಟೋಗಳ ಬಗ್ಗೆ ನೆನಸಿಕೊಂಡು ವಿರಹ ವೇದನೆ ಪಡುತ್ತಿರಿ . 

ಪೋಲಿಸ್ ಕಛೇರಿಗೆ ತಿಥಿ ಕಾರ್ಡ್ ತಲುಪಿಸುವಂತೆ ಒಂದು ದೂರು ನೀಡುವುದನ್ನು ಮಾತ್ರ ಮರೆಯಬೇಡಿ, 10 ದಿನದ ಮೈಲಿಗೆ ಮುಗಿದ ನಂತರ, ಒಲ್ಲದ ಮನಸ್ಸಿನಿಂದ ನೂರಾರು ಜನರಿಗೆ ನಿಮ್ಮ ಹತ್ತಾರು ಸಾವಿರ ರೂಪಾಯಿಯ ಮೊಬೈಲ್ ಕಳೆದ ವಿಷಯ ತಿಳಿಸಿ ಕನಿಕರ ಗಿಟ್ಟಿಸಿಕೊಂಡು ಮತ್ತೇ ಹೊಸ ಮೊಬೈಲ್ ಖರೀದಿಸಿ ಅಷ್ಟೇ .

 

ಒಟ್ಟಾರೆ ದೂರು ನೀಡುವುದಷ್ಟೇ ನಿಮ್ಮ ಕೆಲಸ ನಿಮ್ಮ ಹಣೆ ಬರಹದಲ್ಲಿ ನಿಮ್ಮ ಮೊಬೈಲ್ ವಾಪಸ್ ಸಿಗಬೇಕು ಎಂದಿದ್ದರೆ, ಅದು ನಿಮ್ಮ ಕೈಗೆ ಬಂದು ತಲುಪುತ್ತದೆ.

*ಒಂದು ಆಸಕ್ತಿಕರ ವಿಷಯ ಗೊತ್ತೇ?* .

ತಲೆಯಲ್ಲಿ ಏನನ್ನೂ ಇಟ್ಟುಕೊಳ್ಳಲು ಸ್ಥಳವಿಲ್ಲದೇ, ಹುಚ್ಚನಂತೆ ವರ್ತಿಸುವ  ಹ್ಯಾಂಗ್ ಆದ ಮೊಬೈಲ್ ಗಿಂತ, ಮೊಬೈಲ್ ಕಳೆದು ಹೋಗುವುದೇ ಉತ್ತಮ. 

ಹೊಸ ಹೊಸ ಅವಿಷ್ಕಾರಗಳು ನಡೆದು ಪ್ರತಿದಿನ ಮೊಬೈಲ್ ಅಪ್ಡೇಟ್ ಆಗುತ್ತಿರುವುದರಿಂದ, ಸ್ವಲ್ಪ ನೋವಿನ ಮಧ್ಯೆಯೂ ಹಳೆಯ ಫೋನ್ ಹೋಗಿದ್ದು ಒಳ್ಳೆಯದೇ ಆಯಿತು ಎಂದು ಮನಸ್ಸು ಹೇಳುತ್ತಿರುತ್ತದೆ.

*ನಮ್ಮ ಈಗಿನ ಹೆಚ್ಚಿನ ಹಣ, ಸಮಯ, ಶ್ರಮ ಹಾಗೂ ಆಯಸ್ಸು ವ್ಯಯವಾಗುತ್ತಿರುವುದು  ಕೇವಲ ಮೊಬೈಲ್ ಫೋನ್ ಗಾಗಿ ಅಲ್ಲವೇ?.*

 

ಲೇಖಕರು: ಶ್ರೀಧರ್ ಎನ್.ಎಂ., ಶಿವಮೊಗ್ಗ.

 

ಮೊ: 9448238926

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top